ವಿಶಾಲವಾದ ಹೊಲಗಳು ನೀರಿನ ಸೆಲೆಯಿಲ್ಲದೆ ಬಂಜರಾಗಿ ಬಿದ್ದಿವೆ. ಒಂದು ಕಿಲೋ ಮೀಟರ್ ಆಳಕ್ಕೆ ಬೋರ್ ವೆಲ್ ಕೊರೆದರೂ ಬಿಸಿ ಗಾಳಿ ಬಿಟ್ಟರೆ ನೀರಿಲ್ಲ. ಹೇಳಿಕೊಳ್ಳಲು ಪ್ರತಿಯೊಬ್ಬರ ಬಳಿಯೂ ಹತ್ತಾರು ಎಕರೆ ಜಮೀನುಗಳಿವೆ.
ಆದರೆ, ಒಂದೇ ಒಂದು ಹುಲ್ಲು ಗಿಡ ಸಹ ಸೊಂಪಾಗಿ ಬೆಳೆಯುತ್ತಿಲ್ಲ. ಇನ್ನೇನು ತಿನ್ನೋದಕ್ಕೂ ಗತಿ ಇಲ್ಲದ ಪರಿಸ್ಥಿತಿ. ಕೂಲಿಗೂ ಹಾಹಾಕಾರ ಎನ್ನುವಾಗ ಬಂದ ಸೋಲಾರ ಯೋಜನೆ ಅವರ ಜೀವ ಉಳಿಸಿದೆ. ಆದರೆ, ಜೀವನ ಸುಧಾರಿಸಿಲ್ಲ!

ಇದು ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಘಟಕ ಇರುವ ನಮ್ಮದೇ ರಾಜ್ಯದ ಅತ್ಯಂತ ಹಿಂದುಳಿದ ಗಡಿ ತಾಲ್ಲೂಕು ಪಾವಡ. ತೇವಾಂಶ ಕಳೆದ ಹೊಲಗಳಲ್ಲಿ ಹುಲ್ಲುಗಳು ಕಂದು ಬಣ್ಣಕ್ಕೆ ತಿರುಗಿವೆ. ವಿಶಾಲವಾದ ಹೊಲಗಳಲ್ಲಿ ಸಾವಿರಾರು ನೀಲಿ-ಬೂದು ಸೌರ ಫಲಕಗಳು ಸೂರ್ಯನ ಬೆಳಕಿಗೆ ಮೈ ಚಾಚಿ ಹೊಳೆಯುತ್ತಿವೆ. ಫೆಬ್ರವರಿಯಲ್ಲೇ ಅಲ್ಲಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌.

ಒಂದು ಕಾಲದಲ್ಲಿ ಮಳೆ ನೀರು ನಂಬಿ ತರಕಾರಿ, ಕಾಳುಗಳನ್ನು ಬೆಳೆಯುತ್ತಿದ್ದ ರೈತರು ಕಳೆದೊಂದು ದಶಕಗಳಿಂದ ಬರ, ಬೆಳೆ ನಷ್ಟಕ್ಕೆ ಸಿಲುಕಿ ಅಕ್ಷರಶಃ ಅತಂತ್ರರಾಗಿದ್ದಾರೆ. ಸಾವಿರಾರು ಎಕರೆ ಜಮೀನುಗಳು ಬರಡಾಗಿ ತುತ್ತು ಅನ್ನಕ್ಕೂ ಗತಿ ಇಲ್ಲದಂಥ ಸ್ಥಿತಿ ಎದುರಾದಾಗ ರೈತರು ಅನಿವಾರ್ಯವಾಗಿ ಸೋಲಾರ್ ಯೋಜನೆಗೆ ತಮ್ಮ ಹೊಲಗಳನ್ನು ಅತಿ ಕಡಿಮೆಗೆ ಬೆಲೆಗೆ ಗುತ್ತಿಗೆ ಕೊಟ್ಟಿದ್ದಾರೆ.

ಹಸಿರಿನಿಂದ ಕಂಗೊಳಿಸಿ ಅನ್ನ ನೀಡಬೇಕಿದ್ದ ಹೊಲಗಳು ಬಿಸಿಲಿನ ಶಾಖಕ್ಕೆ ಮೈ ಸುಟ್ಟುಕೊಂಡು ವಿದ್ಯುತ್ ಕೊಡುತ್ತಿವೆ. ಆ ವಿದ್ಯುತ್ ನೇರವಾಗಿ ಬೆಂಗಳೂರಿಗೆ ಪೂರೈಕೆಯಾಗುತ್ತಿವೆ. ಆದರೆ, ತಮ್ಮದೇ ಹೊಲದಲ್ಲಿ ವಿದ್ಯುತ್ ಉತ್ಪಾದನೆ ಆದರೂ ರೈತರಿಗೆ ಅದರ ಮೇಲೆ ಯಾವುದೇ ಹಕ್ಕು ಇಲ್ಲ. ಆದರೂ ಏನೂ ಗತಿ ಇಲ್ಲದ ಮೇಲೆ ಇನ್ನೇನು ಮಾಡುವುದು ಎಂದು ಸಂಕಟ ಹೇಳುತ್ತಾರೆ ರೈತ ಎಸ್. ಅಕ್ಕಲಪ್ಪ.

ಪಾವಗಡದ ತಿರುಮಣಿ ಗ್ರಾಮದಲ್ಲಿ 16 ಎಕರೆ ಜಮೀನು ಹೊಂದಿದ್ದ ಅಕ್ಕಲಪ್ಪ (80) ಮತ್ತು ಅವರ ಕುಟುಂಬಕ್ಕೆ ನಿರಂತರ ಬರದಿಂದಾಗಿ ಕೃಷಿಯಲ್ಲಿ ಒಂದು ಪೈಸೆ ಸಂಪಾದಿಸಲು ಸಾಧ್ಯವಾಗಲಿಲ್ಲ. ಬದಲಿಗೆ, ಅವರ ಮಕ್ಕಳು ನಗರಕ್ಕೆ ವಲಸೆ ಹೋದರು. 2005 ರಲ್ಲಿ 350 ಅಡಿಗಳ ಬೋರ್‌ವೆಲ್ ಕೊರೆದರೂ ಅಂತರ್ಜಲ ಫ್ಲೋರೈಡ್‌ನಿಂದ ಕಲುಷಿತಗೊಂಡಿತ್ತು. ಅಷ್ಟೊತ್ತಿಗೆ 3 ಲಕ್ಷ ರೂ. ಸಾಲವಾಗಿತ್ತು ಎಂದು ಅಕ್ಕಲಪ್ಪ ನೋವು ತೋಡಿಕೊಂಡರು.

ಇನ್ನು ಕೃಷಿ ಮಾಡಲು ಅಸಾಧ್ಯ ಎಂದಾಗ ಅಕ್ಕಲಪ್ಪ ತನ್ನ ಸಂಪೂರ್ಣ 16 ಎಕರೆಗಳನ್ನು ವರ್ಷಕ್ಕೆ ಒಂದು ಎಕರೆಗೆ ಕೇವಲ 21 ಸಾವಿರ ರೂ.ಗೆ ಸೋಲಾರ್ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆಗುತ್ತಿಗೆ ಮೊತ್ತದಲ್ಲಿ 5% ಹೆಚ್ಚಳದೊಂದಿಗೆ 28 ​​ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದಾನೆ. ಸುತ್ತಲಿನ ಬಹುತೇಕ ರೈತರ ಕತೆಯೂ ಇದೇ ಆಗಿದೆ.

“ಈ ಭಾಗದಲ್ಲಿ ಜಮೀನುದಾರರು ಇದ್ದರೂ ಅವರೆಲ್ಲರ ಜೀವನ ಸಾಕಷ್ಟು ಬಡತನ ಮತ್ತು ಹಸಿವಿನಿಂದ ಕೂಡಿದೆ. ಜಮೀನು ಖಾಲಿ ಬಿಡುವ ಬದಲು ಅಲ್ಪ ಆದಾಯವಾದರೂ ಬರಲಿ ಎಂದು ಸೋಲಾರ್ ಗೆ ಗುತ್ತಿಗೆ ನೀಡಿದ್ದೇವೆ ಎನ್ನುತ್ತಾರೆ ಮಧು. ಅಲ್ಲದೆ, ಹಳ್ಳಿಯ ಜನರು ಅದೇ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಪಡೆಯಲು ಪ್ರಾರಂಭಿಸಿದ್ದಾರೆ.

ಆದರೆ, ಸುಮಾರು 7 ಕಿ.ಮೀ. ದೂರದಲ್ಲಿ ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಅಲ್ಲಿನ ರೈತರು ಬೋರ್ ವೆಲ್ ನೀರು ಬಳಿಸಿಯೇ ಕೃಷಿ ಮಾಡುತ್ತಿದ್ದಾರೆ. ಕಲ್ಲಂಗಡಿ, ಈರುಳ್ಳಿ, ಟೊಮೆಟೊ ಹೀಗೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವರ್ಷಕ್ಕೆ ಇಂಥ ಮೂರು ಬೆಳೆ ಬೆಳೆಯುತ್ತೇವೆ ಎನ್ನುತ್ತಾರೆ ರೈತ ಈಶ್ವರಪ್ಪ.

ಬೆಂಗಳೂರಿನಿಂದ 180 ಕಿ.ಮೀ.
ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿರುವ ಈ ಸೌರ ಉದ್ಯಾನವು ಅರೆ-ಶುಷ್ಕ ವಾತಾವರಣದ ಪಾವಗಡದ ನಾಗಲ್ಮಡಿಕೆ, ಬಾಲಸಮುದ್ರ, ತಿರುಮಣಿ, ರಾಯಚಾರ್ಲು, ಕ್ಯಾತಗಾನಾಚಾರ್ಲು ಗ್ರಾಮಗಳಲ್ಲಿ ಸುಮಾರು 13 ಸಾವಿರ ಎಕರೆಯಲ್ಲಿ ವಿಸ್ತಾರವಾಗಿದೆ. ಇದು 2 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ವಿದ್ಯುತ್ ಗ್ರಾಮೀಣ ಭಾಗದ 15 ಲಕ್ಷ ಮನೆಗಳನ್ನು ಬೆಳಗಿಸಲು ಸಾಕು.

ಹೊಲದಲ್ಲಿ ಏನೂ ಬೆಳೆಯದೇ ಇದ್ದಾಗ ಸೋಲಾರ್ ಯೋಜನೆಗೆ ಜಮೀನು ಗುತ್ತಿಗೆ ನೀಡುವುದು ಅನಿವಾರ್ಯವಾಗಿದೆ. ಆದರೆ, ಅದಕ್ಕೆ ಕೊಡುತ್ತಿರುವ ಬಾಡಿಗೆ ತೀರಾ ಕಡಿಮೆ ಇದೆ. ಒಂದು ಎಕರೆಗೆ ತಿಂಗಳು 1,700 ರೂ. ಬರುತ್ತಿದೆ. ಹಾಗಾಗಿ ಸೂರ್ಯ ಮುಳುಗಿದ ಬಳಿಕ ಸೋಲಾರ್ ಫಲಕಗಳ ಕೆಳಗೆ ಪ್ರಾಣಿಗಳಿಗೆ ಮೇವು ಪಡೆಯುವ ಹಕ್ಕನ್ನು ರೈತರಿಗೆ ಕೊಟ್ಟರೆ ಒಳ್ಳೆಯದು.
ಮಧು, ಪಾವಗಡದ ರೈತ.