ಫೀಫಾ ವಲ್ಡ್ ಕಪ್ ಎತ್ತಿ ಹಿಡಿಯುವ ಮೂಲಕ ಲಿಯೊನೆಲ್ ಅಂಡ್ರೇಸ್ ಮೆಸ್ಸಿ ಫುಟ್ಬಾಲ್ ಜಗತ್ತಿನ ಕಣ್ಮಣಿಯಾಗಿದ್ದಾರೆ.
ಕತಾರದ ಫೀಫಾ ವಿಶ್ವಕಪ್ ಗೆ ಕಾಲಿಡುವ ಮುನ್ನವೆ ಇದು ನನ್ನ ಕೊನೆಯ ವಿಶ್ವಕಪ್ ಎಂದಿದ್ದರು ಮೆಸ್ಸಿ. ಆಗ ಸಹಸ್ರ ಅಭಿಮಾನಿಗಳು “ಮೆಸ್ಸಿ ಯುಗ” ಫೀಫಾ ವಿಶ್ವಕಪ್ ಗೆಲುವಿನೊಂದಿಗೆ ಮುಕ್ತಾಯಗೊಳ್ಳಲಿ ಎಂದು ಹಾರೈಸಿದ್ದರು. ಅದು ಈಗ ನಿಜವಾಗಿದೆ…!

ಈಗ ಎಲ್ಲೇಲ್ಲೂ Messi Mania….!
ಮೊದಲ ಪಂದ್ಯದಲ್ಲಿ ಫುಟ್ಬಾಲ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿದ್ದ ಸೌದಿ ಅರೇಬಿಯಾ ವಿರುದ್ಧ ಆಕಸ್ಮಿಕವಾಗಿ ಸೋತು ಅವಮಾನ ಅನುಭವಿಸಿದರೂ ನಂತರ ಸೆಟೆದು ನಿಂತು ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಬಲಿಷ್ಠ ಪ್ರಾನ್ಸ್ ಅನ್ನು ಸೋಲಿಸಿ ಲಿಯೊನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೊವಿಡ್, ರಷ್ಯಾ- ಉಕ್ರೇನ್ ಯುದ್ಧದ ಕಾರಣ ಕಳೆದ 30 ವರ್ಷಗಳಲ್ಲೇ ಎಂದೂ ಕಾಣದ ರೀತಿಯಲ್ಲಿ ಅರ್ಜೆಂಟೀನಾ ಆರ್ಥಿಕವಾಗಿ ಕುಸಿತಕ್ಕೊಳಗಾಗಿದೆ. ಶೇ.40 ರಷ್ಟು ಜನ ಬಡವರೆ ಆಗಿದ್ದು, ಕಂಗೆಟ್ಟಿರುವ ಪ್ರಜೆಗಳ ಕೈಗೆ ಮೆಸ್ಸಿ ಬಳಗ ಚಿನ್ನದ ಕೀರಿಟವನ್ನಿಟ್ಟಿದೆ. ಜನ ತಮ್ಮ ಆರ್ಥಿಕ ಬಿಕ್ಕಟ್ಟನ್ನು ಮರೆತು ಬ್ಯೂನಸ್ ಐರಿಸ್ ನಲ್ಲಿ ಸಾಗರೋಪಾದಿಯಲ್ಲಿ ಸೇರಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ಮೆಸ್ಸಿ ತನ್ನ ತಂಡವನ್ನು ಅದ್ಭುತವಾಗಿ ಮುನ್ನಡೆಸಿ, ವೈಯಕ್ತಿಕವಾಗಿ 7 ಗೋಲು ಬಾರಿಸಿ, ಹಾಗೆ ಮಹತ್ವದ ಮೂರು ಅಸಿಸ್ಟ್ ಮೂಲಕ ಚಿನ್ನದ ಚೆಂಡನ್ನು ಬಲೆಗೆ ಹಾಕಿಕೊಂಡು ಫೀಫಾ ವಲ್ಡ್ ಕಪ್ ಎತ್ತಿ ಹಿಡಿದಿದ್ದಾರೆ. ಪೇಲೆ, ಮರಡೋನಾ ನಿವೃತ್ತಿ ನಂತರ ಫುಟ್ಬಾಲ್ ಜಗತ್ತಿನಲ್ಲಿ ಒಂದು ರೀತಿಯ ನಿರ್ವಾತ ಸ್ಥಿತಿ ಸೃಷ್ಠಿಯಾಗಿತ್ತು.

ಜೀದಾನೆ, ಪೀಟರ್ ಸ್ಮೈಕಲ್, ಪಾಲೊ ಮಲ್ಡಿನಿ, ಡೆವಿಡ್ ಬೆಕ್ಹಾಮ್, ರಿವಾಲ್ದೊ ರಂತಹ ಹಲವು ಅದ್ಭುತ ಆಟಗಾರರು ಬಂದರೂ ಅವರಿಂದ ಫ್ಯಾನ್ ಫಾಲೋವಿಂಗ್ ಕ್ರಿಯೆಚರ್ ಹುಟ್ಟುಹಾಕಲು ಸಾಧ್ಯವಾಗಲಿಲ್ಲ. ಇವರ್ಯಾರನ್ನು ಅಭಿಮಾನಿಗಳು ಹೊತ್ತು ಮೆರಸಲಿಲ್ಲ. ರೊನಾಲ್ಡೊ ,ಲಿಯೊನೆಲ್ ಮೆಸ್ಸಿ ಫುಟ್ಬಾಲ್ ಅಂಗಳಕ್ಕೆ ಕಾಲಿಟ್ಟ ನಂತರ ಮತ್ತೆ ಫುಟ್ಬಾಲ್ ಮೇನಿಯಾ ದೊಡ್ಡ ಮಟ್ಟದಲ್ಲಿ ಪುಟಿದೆದ್ದಿತು. ಇವರು ತಮ್ಮ ಕಾಲ್ಚಳಕದ ಮೂಲಕ ಅಭಿಮಾನಿಗಳು ಮತ್ತೆ ಫುಟ್ಬಾಲ್ ನತ್ತ ಕಣ್ಣರಳಿಸಿ ನೋಡುವಂತೆ ಮಾಡಿದರು. ಮೆಸ್ಸಿಯಂತೂ ಅದರಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟು ದಾಪುಗಾಲು ಹಾಕುತ್ತಲೇ ಹೋದರು.

ಕ್ರಿಸ್ಟಿಯಾನೋ ರೆನಾಲ್ಡೊ ಮತ್ತು ಮೆಸ್ಸಿ ಇಬ್ಬರಲ್ಲಿ ಪರಸ್ಪರ ಯಾರು ಪ್ರಬಲರು ಎಂಬ ಚರ್ಚೆ ನಡೆಯುತ್ತಿರುವಾಗಲೆ ಮೆಸ್ಸಿ ತಾನು ರೊನಾಲ್ಡೊಗಿಂತ ಉತ್ತಮ ಫುಟ್ಬಾಲಿಗ ಎಂಬುದನ್ನು ಈ ಜಯದ ಮೂಲಕ ಸಾಬೀತುಪಡಿಸಿದ್ದಾರೆ. ಕ್ಲಬ್ ಪಂದ್ಯಾವಳಿಗಳಲ್ಲಿ ಎಷ್ಟೇ ಗೋಲು ಬಾರಿಸಿ, ಪ್ರಶಸ್ತಿಗಳ ಗುಡ್ಡೆ ಹಾಕಿದರೂ ಫೀಫಾ ಗೆದ್ದು ಕೊಟ್ಟು ಪೇಲೆ, ಡಿಯೇಗೊ ಮರಡೊನಾ ಸಾಲಿಗೆ ಸೇರಬೇಕು ಎಂಬ ಬಯಕೆ ಎಲ್ಲ ಫುಟ್ಬಾಲ್ ದಂತಕತೆಗಳಿಗೂ ಇದ್ದೆ ಇರುತ್ತದೆ. ಕಾರಣ ಕತಾರ್ ವಿಶ್ವಕಪ್ ಅಖಾಡ ಜಿದ್ದಾ ಜಿದ್ದಿಗೆ ತೆರೆದುಕೊಂಡಾಗಲೆ ಮೆಸ್ಸಿ ಮತ್ತು ರೊನಾಲ್ಡೊ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿ ಅದ್ಭುತವಾಗಿ ವಿದಾಯ ಹೊಂದಬೇಕು ಎಂದು ಬಯಸಿದ್ದರು.

ಪೋರ್ಚುಗಲ್ ಕ್ವಾರ್ಟರ್ ಫೈನಲ್ ನಲ್ಲಿ ಮೊರಾಕ್ಕೊ ವಿರುದ್ಧ ಸೋತು ಹೊರಬಿದ್ದಾಗ, ಕೊನೆಗೂ ವಿಶ್ವಕಪ್ ಗೆಲ್ಲಿಸಿಕೊಡಲಾಗಲಿಲ್ಲ ಎಂದು ರೊನಾಲ್ಡೊ ಫುಟ್ಬಾಲ್ ಅಂಗಣದಲ್ಲಿ ನೋವು ತಡೆಯಲಾಗದೆ ಕುಸಿದು ಕುಳಿತಾಗ, ಅದು ಒಂದು ಕ್ಷಣ ಅಭಿಮಾನಿಗಳ ಮನ ಕದಡಿದ್ದು ಸುಳ್ಳಲ್ಲ. ಆದರೆ ಮೆಸ್ಸಿ ಈಗ ವಿಶ್ವಕಪ್ ಗೆದ್ದು ತೋರಿಸಿದ್ದಾರೆ.

ಬದುಕಿಗೆ ಸವಾಲೆಸೆದು ಗೆದ್ದು ನಿಂತ ಮೆಸ್ಸಿ

ಆದರೆ ಅಲ್ಲಿ ತಂದೆಯದ್ದೆ ತರಬೇತಿ. ಆದರೆ ಆಸೆಯ ಕಂಗಳಲ್ಲಿ ಫುಟ್ಬಾಲ್ ಹಿಡಿದು ನಿಂತ ಪುಟ್ಟ ಹುಡುಗನ ಜೀವನದಲ್ಲಿ ಗ್ರೋಥ್ ಹಾರ್ಮೋನ್ ಡೆಪಿಶಿಯನ್ಸಿ ಎಂಬ ಕಾಯಿಲೆ ಬೆನ್ನೇರಿತ್ತು. ಇದರಿಂದ ವಯಸ್ಸಾಗುತಿದ್ದರೂ ದೇಹ ಬೆಳವಣಿಗೆ ಹೊಂದುತ್ತಿರಲಿಲ್ಲ. ಚಿಕಿತ್ಸೆಗೆ ಪ್ರತಿ ತಿಂಗಳಿಗೆ 900 ಡಾಲರ್ ಬೇಕಿತ್ತು. ಬಡವರಾದ ಇವರಿಗೆ ಜೀವನದ ಬಂಡಿ ನೂಕುವುದೆ ಕಷ್ಟವಿರುವಾಗ ಚಿಕಿತ್ಸಾ ವೆಚ್ಚ ಭರಿಸುವುದು ಹೇಗೆ ಎಂಬ ಸಮಸ್ಯೆ ಕಾಡತೊಡಗಿತು. ಇವನಲ್ಲಿನ ಅನಾರೋಗ್ಯ ಕಂಡು ಹಲವು ಕ್ಲಬ್ ಗಳು ಇವನನ್ನು ಬಾಗಿಲಲ್ಲೇ ನಿಲ್ಲಿಸಿ ಸಾಂತ್ವನದ ಮಾತನಾಡಿ ವಾಪಸ್ಸು ಕಳುಹಿಸಿದವು ಅಷ್ಟೇ.

ಆಗ ಪುಟ್ಟ ಹುಡುಗನಲ್ಲಿದ್ದ ಪುಟ್ಬಾಲ್ ಪ್ರತಿಭೆ ಗುರುತಿಸಿದ ಸ್ಪೇನ್ ದೇಶದ ಬಾರ್ಸಿಲೋನಾ ಕ್ಲಬ್ ನ ನಿರ್ದೇಶಕ ಕಾರ್ಲ್ಸ್ ರೆಕ್ಸಾಚ್ “ಈತ ಖಂಡಿತ ಮುಂದೆ ಚಿನ್ನದ ಮೊಟ್ಟೆಯಿಡುವ ಕೋಳಿ ಆಗಲಿದ್ದಾನೆ” ಎಂದರಿತು, ನಿಂತ ಜಾಗದಲ್ಲಿ ಒಂದು ಒಪ್ಪಂದಕ್ಕೆ ಬಂದೆಬಿಟ್ಚರು. ಮೆಸ್ಸಿ ಬಾರ್ಸಿಲೋನಾ ಕ್ಲಬ್ ಸೇರಿಕೊಂಡರೆ ಸಂಪೂರ್ಣ ಚಿಕಿತ್ಸಾ ವೆಚ್ಚ ಬರಿಸಲಿದ್ದೇವೆ ಎಂದು ಆಶ್ವಾಸನೆ ನೀಡಿದರು. ಅಂದಿನ ಪರಿಸ್ಥಿತಿಯಲ್ಲಿ ಮೆಸ್ಸಿ ಕುಟುಂಬಕ್ಕೆ ಅದು ಮರುಭೂಮಿಯಲ್ಲಿ ಸೆರೆ ಸಿಕ್ಕ ಒಯಾಸಿಸ್ ನಂತಾಗಿತ್ತು. ಆಗ ಎಷ್ಟು ತರಾತುರಿಯಲ್ಲಿ ಒಪ್ಪಂದ ನಡೆಯಿತು ಎಂದರೆ, ಕಾಗದ ಸಿಗದೆ ಅಲ್ಲೆ ಬಿದ್ದ ಒಂದು ಪುಟ್ಟ ನ್ಯಾಪಕಿನ್ ನಲ್ಲಿಯೇ ಮೆಸ್ಸಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರಂತೆ.

ನಯಾ ಮರಡೋನಾ

2021ರಲ್ಲಿ ಪ್ರತಿಷ್ಠಿತ ಕೊಪಾ ಅಮೇರಿಕಾ ಪಂದ್ಯಾವಳಿ ಗೆದ್ದು ಬೀಗಿದ್ದಾರೆ. 4 ಬಾರಿ ಚಾಂಪಿಯನ್ ಲೀಗ್ ಟ್ರೊಪಿ, 3 ಬಾರಿ ಕ್ಲಬ್ ವಲ್ಡ್ ಕಪ್, 7 ಬಾರಿ ಸ್ಪ್ಯಾನಿಷ್ ಸೂಪರ್ ಲೀಗ್ ಮತ್ತು Copa Del Rey ಕಪ್ ಮತ್ತು 10 ಬಾರಿ La Liga ಗೆದ್ದು ಪುಟ್ಬಾಲ್ ಜಗತ್ತಿನ ದಂತಕತೆಯಾಗಿ ಮೆಸ್ಸಿ ಮೆರೆದಿದ್ದಾರೆ.

ಮೆಸ್ಸಿ ಮುಡಿಗೆ ಸಾಲು ಸಾಲು ಪ್ರಶಸ್ತಿ

7 ಬಾರಿ ಪ್ರತಿಷ್ಠತ Ballon d’ Or ಪ್ರಶಸ್ತಿ ಪಡೆದಿದ್ದಾರೆ. ಹಾಗೆ 172 ಅಂತರಾಷ್ಟ್ರೀಯ ಪಂದ್ಯದಲ್ಲಿ 97 ಗೋಲು ಬಾರಿಸುವ ಮೂಲಕ ಮೂರನೆ ಸ್ಥಾನ ಪಡೆದಿದ್ದಾರೆ. ವಲ್ಡಕಪ್ ನ ಒಟ್ಟು 26 ಪಂದ್ಯದಲ್ಲಿ ಭಾಗವಹಿಸಿ ದಾಖಲೆ ಬರೆದಿದ್ದು, ಅದರಲ್ಲಿ ಒಟ್ಟು 13 ಗೋಲು ಗಳಿಸಿ ಫುಟ್ಬಾಲ್ ಅಂಗಳದಲ್ಲಿ ಅಂಕಿ ಸಂಖ್ಯೆಗಳ ಚಿತ್ತಾರ ಬಿಡಿಸಿದ್ದಾರೆ.

ಅಂತರಾಷ್ಟ್ರೀಯ ಪಂದ್ಯದಲ್ಲಿ 6 ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದು 2018 ರ ವಲ್ಡ್ ಕಪ್ ಪಂದ್ಯದಲ್ಲಿ ಇಕ್ವೇಡಾರ್ ವಿರುದ್ಧ ಬಾರಿಸಿದ ಹ್ಯಾಟ್ರಿಕ್ ಗೋಲನ್ನು ಫುಟ್ಬಾಲ್ ಅಭಿಮಾನಿಗಳು ಎಂದೂ ಮರೆಯಲು ಸಾಧ್ಯವೆ ಇಲ್ಲ. ಫುಟ್ಬಾಲ್ ಅಂಗಳದಲ್ಲಿ ಮೆಸ್ಸಿಯದ್ದು ಅತಿ ಚುರುಕಿನ ಆಟ- ವೇಗದ ಓಟ. ಚೆಂಡನ್ನು ಪಾಸ್ ಮಾಡುವ, ಹಾಗೆಯೇ ಆತನಲ್ಲಿರುವ Dribbling ಕೌಶಲ್ಯ ಅದ್ಭುತವಾದದ್ದು. ಅದಕ್ಕೆ ಹೇಳುವುದು “Messi is once in a generation” ಎಂದು.

ಸ್ಪೇನ್ ಮೆಸ್ಸಿಯನ್ನು ಅಂಡರ್ -19ತಂಡದಲ್ಲಿ ಆಡಲು ಆಹ್ವಾನಿಸಿತ್ತು. ಸ್ಪೇನ್ ಪೌರತ್ವ ಹೊಂದಿದ್ದರೂ ತನ್ನ ಸ್ವಂತ ದೇಶವನ್ನು ಎಂದು ಮರೆಯದ ಮೆಸ್ಸಿ ಅರ್ಜೆಂಟೀನಾ ಅಂಡರ್ -19 ರಲ್ಲಿ ಆಡಿದರು. ಹಲವು ಕ್ಲಬ್ ಗಳು ದೊಡ್ಡ ಮೊತ್ತದ ಹಣ ನೀಡಿ ಆಹ್ವಾನಿಸಿದರಾದರೂ ಹಣದ ಹಿಂದೆ ಓಡದ ಮೆಸ್ಸಿ, ಕಷ್ಟ ಕಾಲದಲ್ಲಿ ತನಗೆ ಉತ್ತಮ ಚಿಕಿತ್ಸೆ ನೀಡಿ ಮರುಜೀವ ಕೊಟ್ಟ, ಬಾರ್ಸಿಲೋನಾವನ್ನು ಮಾತ್ರ ಕೈ ಬಿಡಲಿಲ್ಲ.

ಇಡೀ ಜಗತ್ತೆ ಅವರನ್ನು ಫುಟ್ಬಾಲ್ ನ ಆರಾಧ್ಯ ದೈವ ಎಂದು ಆರಾಧಿಸಿದರೂ ಅರ್ಜೆಂಟೀನಾದಲ್ಲೆ ಅವರ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಕ್ಲಬ್ ಪರ ಕಾಸಿಗಾಗಿ ಆಡಿ ಅದ್ಭುತ ಜಯ ತಂದಿಕ್ಕುವ ಮೆಸ್ಸಿ ಅರ್ಜೆಂಟೀನಾವನ್ನು ಪ್ರತಿನಿಧಿಸಿದಾಗ ದೊಡ್ಡ ಗೆಲುವು ಬಂದಿಲ್ಲ. ರಾಷ್ಟ್ರೀಯ ತಂಡಕ್ಕೆ ಸೇರಿದಾಗಿನಿಂದ ಒಮ್ಮೆಯೂ ವಲ್ಡ್ ಕಪ್ ಗೆದ್ದಿಲ್ಲ ಎಂದು ಮೆಸ್ಸಿಯನ್ನು ಹಲವು ಬಾರಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.
ಹಾಗೆ ಡಿಯೇಗೊ ಮರಡೊನಾ ಸಾರಥ್ಯದಲ್ಲಿ 1986 ರಲ್ಲಿ ಅಂದರೆ ಮೆಸ್ಸಿ ಹುಟ್ಟಿದ 1 ವರ್ಷದ ಮೊದಲೆ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಲ್ಲಿ ಫುಟ್ಬಾಲ್ ಕ್ರೇಜ್ ಇದ್ದಷ್ಟು ಮತ್ತೆಲ್ಲೂ ಇರಲಿಕ್ಕಿಲ್ಲ. ಆದರೆ ವಲ್ಡಕಪ್ ಗೆಲ್ಲದೆ 36 ವರ್ಷ ಕಳೆದು ಹೊಗಿತ್ತು. 2014 ರ ಪೈನಲ್ ಸೇರಿದಂತೆ ಮೆಸ್ಸಿ 5 ಬಾರಿ ವಲ್ಡ್ ಕಪ್ ನಲ್ಲಿ ಪ್ರತಿನಿಧಿಸಿದ್ದರೂ ಒಮ್ಮೆಯೂ ಕಿರೀಟ ದಕ್ಕಿರಲಿಲ್ಲ.

2015 ಮತ್ತು 2016 ರಲ್ಲಿ ಕೊಪಾ ಅಮೇರಿಕಾ ಪಂದ್ಯಾವಳಿಯ ಪೈನಲ್ ನಲ್ಲಿ ಸಹ ಮುಗ್ಗರಿಸಿತ್ತು. ಅದಕ್ಕೆ ಮೊನ್ನೆ ಗೆಲುವಿನ ನಂತರ ಮೆಸ್ಸಿ ” I craved for this so much ” ಎಂದಿದ್ದು.
ಮೆಸ್ಸಿ ತನ್ನ ದೇಶದ ವಿಶ್ವಕಪ್ ಬರ ನೀಗಿಸುವ ಮೂಲಕ ಮರಡೊನಾ, ಪೇಲೆ, ಸಾಲಿಗೆ ಸೇರಿದ್ದಾರೆ. 20 ನೇ ಶತಮಾನದಲ್ಲಿ ಫುಟ್ಬಾಲ್ ಅಂಗಣದಲ್ಲಿ ಅಭಿಮಾನಿಗಳು ಕಣ್ಣರಳಿಸಿ ಕುಳಿತುಕೊಳ್ಳುವಂತೆ ಮಾಡಿದವರಲ್ಲಿ ಮೆಸ್ಸಿ, ರೊನಾಲ್ಡೊ ಅಗ್ರಗಣ್ಯರು. ಈಗ ಕಿಲಿಯಾನ್ ಅಂಬಾಪೇ ನೈಮ್ಮಾರ, ಎಂಜೊ ಪರ್ನಾಂಡೊಜ್ , ಅರ್ಲಿಂಗ್ ಹಾಲಂಡ್ ರಂತಹ ಹಲವು ಸೇರ್ಪಡೆಯಾಗಿದ್ದಾರೆ. ವಲ್ಡ್ ಕಪ್ ಪೂರ್ವದಲ್ಲಿ ವಿದಾಯದ ಕುರಿತು ಮಾತನಾಡಿದ್ದ ಮೆಸ್ಸಿ ಈಗ ಆ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ.

ಬಡತನ, ಅನಾರೋಗ್ಯವನ್ನೆ ಒದ್ದೋಡಿಸಿ ಚೆಂಡನ್ನು ಎದೆಗೆ ಅಪ್ಪಿಕೊಂಡು ಜಗತ್ತನ್ನೇ ಗೆದ್ದವನ ಕಾಲ್ಚೇಂಡಿನ ಕರಾಮತ್ತನ್ನು ನಾವೆಲ್ಲ ಇನ್ನೂ ಕೆಲವು ವರ್ಷಗಳ ಕಾಲ ಕಣ್ತುಂಬಿಕೊಳ್ಳಬಹುದೇನೊ…!
35 ರ ವಯಸ್ಸಿನಲ್ಲಿಯೂ ಮೊನ್ನೆ ಫೈನಲ್ ನಲ್ಲಿ 2 ಗೋಲು ಬಾರಿಸಿ ರಣೋತ್ಸಾಹದಿಂದ ಚೆಂಡಾಡಿದ ರೀತಿ ನೋಡಿದರೆ, ಮೆಸ್ಸಿ ಎದುರಾಳಿಗೆ ಖಡಕ್ಕಾಗಿ ಹೇಳುತ್ತಿರುವಂತಿದೆ,
“Don’t mess with Messi…..! ಎಂದು ಅಲ್ವಾ..?