ಬೆಳಗಾವಿ ಜಿಲ್ಲೆಯ ಕಿತ್ತೂರು ಎಂದ ಕೂಡಲೇ ವೀರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ನೆನಪಿಗೆ ಬರುತ್ತಾರೆ. ಕಿತ್ತೂರು ಸಂಸ್ಥಾನ ಬ್ರಿಟೀಷರ ವಿರುದ್ಧ ನಡೆಸಿದ ಯುದ್ಧ, ಸಾಹಸ, ಹೋರಾಟಗಳ ಬಗ್ಗೆ ಕೇಳಿದರೆ ಇಂದಿಗೂ ಮೈ ರೋಮಾಂಚನವಾಗುತ್ತವೆ.

ಅಂಥ ವಿಶೇಷವಾದ ಕಿತ್ತೂರು ಸಂಸ್ಥಾನದ ಜಲಪಾತ್ರೆಗಳ ಹಿನ್ನಲೆಗಳು ಇನ್ನೂಕುತೂಹಲ ಹುಟ್ಟಿಸುತ್ತವೆ. ಈಗಿನ ತಂತ್ರಜ್ಞಾನಕ್ಕೂ ಸವಲಾಗಾವ ರೀತಿಯಲ್ಲಿ ಕಿತ್ತೂರು ಸಂಸ್ಥಾನದ ನೀರಿನ ಬಳಕೆ ಮತ್ತು ನಿರ್ವಹಣೆ ವ್ಯವಸ್ಥೆಗಳು ಇದ್ದವು.

ಬದಲಾವಣೆ ಗಾಳಿಯಲ್ಲಿ ಹೊಸ ರೂಪಕ್ಕೆ ತಿರುಗಿರುವ ಕಿತ್ತೂರು ಪಟ್ಟಣಕ್ಕೆ ಕಿತ್ತೂರಿನ ಸಂಸ್ಥಾನಿಕರ ರಾಜ್ಯಭಾರ ಆರಂಭವಾಗಿದ್ದು 1585ರ ನಂತರ. ಈ ಪ್ರಾಂತ್ಯವನ್ನು ಆಳಿದ ಸಂಸ್ಥಾನಿಕರ ಆಡಳಿತ, ಸಾಮಾಜಿಕ ಕಾರ್ಯದ ಕುರುಹುಗಳು ಇಂದಿಗೂ ನಮ್ಮೊಡನೆ ಇವೆ.

ಆನೆಹೊಂಡ
ಅರಸರು ಕುಡಿಯುವ ನೀರಿಗಾಗಿ ಹಾಗೂ ಒಕ್ಕಲುತನಕ್ಕೆ ಅನೇಕ ಕೆರೆ, ಕಾಲುವೆಗಳನ್ನು ಕಟ್ಟಿಸಿದ್ದಾರೆ. ಕೋಟೆಯ ಪೂರ್ವ ದಿಕ್ಕಿನ ಪ್ರವೇಶದ್ವಾರದ ಮುಂಭಾಗದಲ್ಲಿಯೇ ಆನೆಗಳ ದಾಹ ನೀಗಿಸಲು ಹಾಗೂ ಜಲಕ್ರೀಡೆಗಾಗಿ ಆನೆಹೊಂಡ ನಿರ್ಮಿಸಿದ ಕುರುಹನ್ನು ಇಂದಿಗೂ ಕಾಣಬಹು. ಈಗ ಇದು ಹುಳು ಕಸ ಕಡ್ಡಿಗಳಿಂದ ತುಂಬಿರುವುದು ದುರ್ದೈವದ ಸಂಗತಿ.

ತುಂಬಗೇರಿ
ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ವಿಶಾಲವಾದ ಕೆರೆಯೇ ತುಂಬಗೇರಿ. 1682 ರಿಂದ 1691 ರ ಅವಧಿಯಲ್ಲಿ ಈ ಕೆರೆ ನಿರ್ಮಾಣವಾಗಿದೆ. ಕೋಟೆ ಸುತ್ತಲು ಇದ್ದ ಕಂದಕಗಳಿಗೆ ಇಲ್ಲಿಯ ನೀರು ತುಂಬಿಸಲಾಗುತ್ತಿತ್ತಂತೆ. ಹಾಗಾಗಿ ಕೆರೆ ಸದಾ ತುಂಬಿರುವಂತೆ ನೋಡಿಕೊಳ್ಳುತ್ತಿದ್ದರು. ಈಗ ಇದು ಪ್ರಮುಖ ನೀರಾವರಿ ಕೆರೆಯಾಗಿದೆ.

ಶಿವಬಸಪ್ಪನ ಕೆರೆ
ಶಿವಬಸಪ್ಪ ಚನ್ನಮ್ಮನ ಮಗ. ಪ್ರೀತಿಯಿಂದ ಈತನನ್ನು ಬಾಳಸಾಹೇಬ ಎಂದು ಕರೆಯುತ್ತಿದ್ದರು. ಕಿತ್ತೂರಿಗೂ ಮತ್ತು ಮರಾಠಿಗರಿಗೂ ಯುದ್ದನಡೆದ ಸಂದರ್ಭದಲ್ಲಿ ಬಾಳಾಸಾಹೇಬ ಮರಣಹೊಂದಿದ. ಹಾಗಾಗಿ ಅವನ ಹೆಸರಿನಲ್ಲಿ ಶಿವಬಸಪ್ಪನ ಕೆರೆಯನ್ನು ಕಟ್ಟಲಾಗಿತ್ತು. ಕೆರೆ ಈಗ ಕೇವಲ ಕುರುಹಾಗಿ ಉಳಿದಿದೆ. ಹುಳು ತುಂಬಿ ಕೆರೆ ಸ್ಥಳ ಬಯಲು ಪ್ರದೇಶವಾಗಿದೆ. ಬೀಡಿಗೆ ಹೋಗುವ ದಾರಿಯಲ್ಲಿ ಈ ಕೆರೆ ಕಾಣಬಹುದು. ಐತಿಹಾಸಿಕ ಕೆರೆಗೆ ಒಂದು ನಾಮಪಲಕ ಸಹ ಇಲ್ಲ.

ರಣಗಟ್ಟಿ ಕೆರೆ
ಈ ಕೆರೆ ಕಿತ್ತೂರಿನ ಹೃದಯಭಾಗದಲ್ಲಿದೆ. ಕಿತ್ತೂರಿನ ಸೈನಿಕರು ಶತೃಗಳ ಸಂಹಾರದ ನಂತರ ಆಯುಧಗಳನ್ನು ತೊಳೆಯುತ್ತಿದ್ದ ಕಾರಣಕ್ಕೆ ಈ ಕೆರೆಗೆ ರಣಗಟ್ಟಿ ಕೆರೆ ಹೆಸರು ಬಂದಿದೆ. ನಾಯಿ ಕಚ್ಚಿದವರಿಗೆ ಈ ಕೆರೆಯ ಮೂರು ಬೊಗಸೆ ಕುಡಿಸಿದರೆ ನಂಜು ಏರುವುದಿಲ್ಲ ಎನ್ನುವ ಪ್ರತೀತಿ ಇದೆ. ಇಂಥ ರೋಚಕ ಇತಿಹಾಸದ ಕೆರೆಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

ಕಿತ್ತೂರ ಕೋಟೆಯ ಜಲವ್ಯವಸ್ಥೆ
ಕಿತ್ತೂರು ಸಂಸ್ಥಾನದ ಕೋಟೆಯ ನಿರ್ಮಾಣ 1670 ರಿಂದ 1690 ರ ಅವಧಿಯಲ್ಲಿ ಆಗಿದೆ. ಕೋಟೆಯಲ್ಲಿನ ನೀರಿನ ವ್ಯವಸ್ಥೆ ಆಗಿನ ತಂತ್ರಜ್ಞರ ಕೌಶಲಕ್ಕೆ ಉತ್ತಮ ಉದಾಹರಣೆಯಾಗಿದೆ. ಸುಮಾರು  26 ಎಕರೆ ವ್ಯಾಪ್ತಿಯಲ್ಲಿರುವ ಕೋಟೆಯು ಅತ್ಯಂತ ವ್ಯವಸ್ಥಿತ ನೀರಿನ ಸರಬರಾಜು ವ್ಯವಸ್ಥೆ ಹೊಂದಿದೆ. ಒಂದು ಕಡೆಯಲ್ಲಿ ಸಂಗ್ರಹಿಸಿದ ನೀರು ಸ್ವಯಂ ಚಾಲಿತವಾಗಿ ಸರಬರಾಜಾಗುತ್ತದೆ. ಅಲ್ಲದೆ, ಗೋಡೆಯ ಒಳಗಡೆ ತಾಮ್ರದ ಕೊಳವೆ ಮೂಲಕ ನೀರಿನ ಸರಬರಾಜು ವ್ಯವಸ್ಥೆ ಆರೋಗ್ಯ ಕುರಿತು ಅವರಿಗೆ ಇದ್ದ ಕಾಳಜಿಯನ್ನು ತಿಳಿಸುತ್ತದೆ.

ಓದಿ: ಡಾರ್ಜಿಲಿಂಗ್ ನಲ್ಲಿದೆ ಕರ್ನಾಟಕದ ಯೋಧನ ದೇವಾಲಯ.

ಗುಪ್ತ ಬಾವಿ
ರಾಜಮನೆತನಕ್ಕೆ ವಿರೋಧಿಗಳ ಕಾಟ ಹೆಚ್ಚಿದ್ದ ಕಾರಣ ನೀರಿನ ಮೂಲಕ ವಿಷಪ್ರಾಶನವಾಗುವ ಆತಂಕ ಇತ್ತು. ಆ ಕಾರಣ ಕೋಟೆಯ ಒಳಗಡೆ ಗುಪ್ತ ಬಾವಿಯನ್ನು ಕೊರೆಸಲಾಗಿತ್ತು. ಅಲ್ಲಿಯ ನೀರನ್ನೆ ಸಂಸ್ಥಾನಿಕರು ಬಳಸುತ್ತಿದ್ದರು.

ಓದಿ: ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ: ಪಶ್ಚಿಮ ಘಟ್ಟದ ವಂಡರ್ ಬೀಚ್

ಕೋಟೆಯ ಈಜುಗೋಳ
ಅರಮನೆಯ ಆವರಣದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದ್ದು ತುಂಬಾ ಸುಂದರವಾಗಿದೆ. ಕಲ್ಲಿನ ನೆಲಹಾಸು ಇದೆ. ಆಸ್ಥಾನದವರು ಹಾಗೂ ಮಕ್ಕಳು ಇದನ್ನು ಉಪಯೋಗಿಸುತ್ತಿದ್ದರು. ಈಜುಕೊಳದ ಪಕ್ಕದಲ್ಲಿ ವೈಯಕ್ತಿಕ ಸ್ನಾನಗೃಹಗಳ ಕುರುಹು ಸಹ ಕಾಣಬಹುದು.

ಓದಿ: ಭೂಮಿ ಉಸಿರಾಡುತ್ತಿದೆ!

ಓದಿ: ಅರಣ್ಯದೊಳಗೆ ಅವಿತುಕೊಂಡಿದೆ ರೋಚಕ ಇತಿಹಾಸದ ಜೈನರ ನೆಲೆ

ನೀರು ಸರಬರಾಜು ವ್ಯವಸ್ಥೆ
ಅರಮನೆಯ ಮಧ್ಯದಲ್ಲಿರುವ ಬಾವಿಯಿಂದ ನೀರನ್ನು ಸೇದಿ ಎತ್ತರಲ್ಲಿರುವ ನೀರಿನ ಸಂಗ್ರಹಗಾರಕ್ಕೆ ಹಾಕಿದಾಗ ಅರಮನೆಯ ಅಡುಗೆಮನೆ, ಸ್ನಾನ ಗೃಹ ಹೀಗೆ ಪ್ರಮುಖ ಕೋಣೆಗಳಿಗೆ ಸರಬರಾಜು ಆಗುತ್ತಿತ್ತು. ಆ ವೈಭವಗಳು ಈಗ ಕುರುಹುಗಳಾಗಷ್ಟೇ ಉಳಿದಿವೆ.

ಚಿತ್ರ ಲೇಖನ: ಮಹೇಶ ಚನ್ನಂಗಿ. ಕೆ.ಇ.ಎಸ್
ಕಿತ್ತೂರು
, ಬೆಳಗಾವಿ