ಬಹಳಷ್ಟು ರೈತರ ಬಳಿ ಉತ್ತಮವಾದ ಹೊಲ ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ. ಮಳೆ, ಪ್ರವಾಹ ಕಾರಣಕ್ಕೆ ಹೊಲದ ಬದುಗಳು ಕೊಚ್ಚಿ ಹೋಗಿರುತ್ತವೆ. ಗೊಬ್ಬರ ಗುಂಡಿ ಮಾಡಿಕೊಳ್ಳಬೇಕು ಎಂದರೂ ಕೆಲಸಗಾರರಿಗೆ ಕೂಲಿ ಕೊಡಬೇಕು. ಹೀಗೆ ಹೊಲ ಅಭಿವೃದ್ಧಿ ಮಾಡಿಕೊಳ್ಳಲಾಗದೆ ಸಾಕಷ್ಟು ರೈತರು ಚಿಂತೆ ಮಾಡುತ್ತಿರುತ್ತಾರೆ.

ಹಾಗೆ ಚಿಂತೆ ಮಾಡುವ ಅಗತ್ಯ ಇಲ್ಲ. ಒಂದು ರೂ. ಖರ್ಚಿಲ್ಲದೆ, ಸ್ವಂತ ಹೊಲಕ್ಕೆ ಬದು, ಕಿರು ಬಾವಿ, ಎರೆಹುಳು ಗೊಬ್ಬರ ತೊಟ್ಟಿ, ಚೆಕ್ ಡ್ಯಾಂ ಹೀಗೆ ಬೇಕಾದ ಸೌಲಭ್ಯಗಳನ್ನು ಒಂದು ಅರ್ಜಿ ಯಿಂದ ಪಡೆದುಕೊಳ್ಳಬಹುದು. ವೈಯಕ್ತಿಯಾಗಿಯೇ ಇಷ್ಟೆಲ್ಲ ಕೆಲಸ ಪಡೆಬಯಬಹುದು.

ಮಹಾರಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯೋಜನೆಯಲ್ಲಿ ಈ ಎಲ್ಲ ಸೌಲಭ್ಯವನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ನರೇಗಾ ಕೇವಲ ಉದ್ಯೋಗ ಕೊಡುವುದಷ್ಟೇ ಅಲ್ಲ. ಅದರಿಂದ ಹೊಲ ಅಭಿವೃದ್ಧಿ ಮಾಡಿಕೊಳ್ಳುವುದು ಹೇಗೆ ಎಂಬ ಉಪಾಯ ಗೊತ್ತಿರಬೇಕು ಅಷ್ಟೆ.

ಇದನ್ನೂ ಓದಿ: ನುಗ್ಗೆ ಕೃಷಿ ಮಾಡಲು ಯಾವ ತಳಿ ಬೆಸ್ಟ್?

ನರೇಗಾದಡಿ ಯಾವುದೇ ಕೆಲಸ ಕೈಗೊಂಡರೂ ಕಾರ್ಮಿಕರ ಕೂಲಿ ಜತೆಗೆ ಶೇ. 40 ರಷ್ಟು ಸಾಮಗ್ರಿ ವೆಚ್ಚವನ್ನು ಸರ್ಕಾರವೇ ಕೊಡುತ್ತದೆ. ಜಮೀನು ಮಾಲೀಕರು ಯಾವುದೇ ಖರ್ಚು ಮಾಡಬೇಕೆಂದಿಲ್ಲ. ಆದರೆ, ನರೇಗಾದಡಿ ನೇರವಾಗಿ ಕೃಷಿ ಚಟುವಟಿಕೆ ಮಾಡಲು ಅವಕಾಶ ಇಲ್ಲ. ಹೊಲಗಳನ್ನು ಅಭಿವೃದ್ಧಿ ಮಾಡಿಕೊಳ್ಳಬಹುದು.

1 ಬದು ನಿರ್ಮಾಣ
ಬಹುತೇಕ ರೈತರಿಗೆ ಹೊಲದ ಅಂಚಿನಲ್ಲಿ ಬದು ನಿರ್ಮಿಸುವುದು ಗೊತ್ತಿದೆ. ಅದನ್ನೇ ನರೇಗಾದಡಿ ನಿರ್ಮಿಸಿಕೊಂಡರೆ ಖರ್ಚು ಉಳಿಯುತ್ತದೆ. ಅಲ್ಲದೆ, ನೀರಿನ ಲಭ್ಯತೆಯೂ ಹೆಚ್ಚುತ್ತದೆ. ನರೇಗಾದಡಿ ಬದು ನಿರ್ಮಿಸುವಾಗ ಬದುವಿನ ಅಂಚಿನಲ್ಲಿ ಸಣ್ಣ ಗುಂಡಿ ತೆಗೆದು ಬದು ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಹೊಲಕ್ಕೆ ನೀರು ಸಿಗುತ್ತದೆ. ಅಂತರ್ಜಲ ಹೆಚ್ಚುತ್ತದೆ. ಬದುಗಳಿಗೆ ಕಲ್ಲಿನ ಪಿಚಿಂಗ್ ಕೂಡ ಮಾಡಿಸಬಹುದು.

ಓದಿ: ಬಿತ್ತನೆಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸುವುದು ಹೇಗೆ?

2 ಕಿರು ಬಾವಿ
ನರೇಗಾದಡಿ ನಿಮ್ಮದೇ ಹೊಲದಲ್ಲಿ ಕಿರು ಬಾವಿ ನಿರ್ಮಿಸಿಕೊಳ್ಳಬಹುದು. ಕಿರು ಬಾವಿ ಎಂದರೆ ತೀರಾ ಆಳವಿಲ್ಲದ ಬಾವಿ. ತೋಟಗಾರಿಕೆ ಚಟುವಟಿಕೆ ಮಾಡುವವರು ಹೊಲದಲ್ಲಿ ನಿರ್ಮಿಸಿಕೊಂಡರೆ ನೀರಿನ ಮೂಲ ಹೆಚ್ಚಿಸಿಕೊಳ್ಳಬಹುದು.

3 ಎರೆಹುಳು ಗೊಬ್ಬರ ತೊಟ್ಟಿ
ನಾವಾಗಿಯೇ ಎರೆಹುಳು ಗೊಬ್ಬರ ತೊಟ್ಟಿ ಮಾಡಬೇಕು ಎಂದರೆ ಕನಿಷ್ಠ ಎಂದರೂ ಏಳೆಂಟು ಸಾವಿರ ರೂ. ಬೇಕಾಗುತ್ತದೆ. ಅದನ್ನೇ ನರೇಗಾದಡಿ ಮಾಡಿಸಿದರೆ ಖರ್ಚಿಲ್ಲದೆ ಉಚಿತವಾಗಿ ತೊಟ್ಟಿ ನಿರ್ಮಿಸಿಕೊಳ್ಳಬಹುದು. ನರೇಗಾದಲ್ಲಿ ಅಂಥ ಅವಕಾಶ ಇದೆ.

4 ಚೆಕ್ ಡ್ಯಾಂ
ಹೊಲದ ಪಕ್ಕದಲ್ಲಿಯೇ ಯಾವುದಾದರು ನೀರಿನ ಮೂಲ ಇದ್ದರೆ ಹೊಲಕ್ಕೆ ಆ ನೀರನ್ನು ಪಡೆಯಲು ಸಣ್ಣ ಚೆಕ್ ಡ್ಯಾಂ ಗಳನ್ನು ನರೇಗಾದಲ್ಲಿಯೇ ನಿರ್ಮಿಸಲಾಗುತ್ತದೆ. ರೈತರು ಸಮೀಪದ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟರೆ ಸಾಕು ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಚೆಕ್ ಡ್ಯಾಂ ನಿರ್ಮಿಸಲು ಪರವಾನಗಿ ದೊರೆಯುತ್ತದೆ. ಇದೂ ಸಹ ಖರ್ಚಿಲ್ಲದೆ ರೆಡಿ ಆಗುತ್ತದೆ.

ಓದಿ: ಮುಂಗಾರು ಕೃಷಿಗೆ ಯೋಗ್ಯ ತಳಿ ಆಯ್ಕೆ ಮಾಡಿ

5 ಕೆರೆ ನಿರ್ಮಾಣ
ಸುತ್ತಲಿನ ರೈತರೆಲ್ಲರೂ ಸೇರಿ ನಿರ್ಧರಿಸಿದರೆ ಸಾಮೂಹಿಕ ಉಪಯೋಗಕ್ಕಾಗಿ ಕೆರೆ ನಿರ್ಮಿಸಿಕೊಳ್ಳಬಹುದು. ಇತ್ತೀಚೆಗೆ ಹೊಲಗಳಿಗೆ ನೀರು ಪಡೆಯುವುದು ಎಲ್ಲೆಡೆ ದೊಡ್ಡ ಸವಾಲು. ಅಂಥ ಕಡೆಗಳಲ್ಲಿ ರೈತರು ನರೇಗಾದಡಿ ಕೆರೆ ನಿರ್ಮಿಸಿಕೊಂಡರೆ ನೀರಿನ ಕೊರತೆ ನೀಗಿಸಿಕೊಳ್ಳಬಹುದು.

ಸೌಲಭ್ಯ ಪಡೆಯುವುದು ಹೇಗೆ?
ಸ್ವಂತ ಹೊಲದಲ್ಲಿ ಅಥವಾ ಸಾಮೂಹಿಕವಾಗಿ ಇಷ್ಟೆಲ್ಲ ಸೇವೆ ಪಡೆಯಬೇಕಿದ್ದರೆ ರೈತರು ಅರ್ಜಿ ಬರೆದು ಗ್ರಾಮ ಪಂಚಾಯಿತಿ ಕಚೇರಿಗೆ ಕೊಡಬೇಕು. ಅರ್ಜಿಯೊಂದಿಗೆ ನೀವು ಅದೇ ಗ್ರಾಮದವರು ಎಂದು ಗುರುತಿಸುವಂಥ ಯಾವುದಾದರು ದಾಖಲೆಯ ಝೆರಾಕ್ಸ್ ಪ್ರತಿ ಕೊಡಬೇಕು. ಗ್ರಾಮ ಸಭೆಯಲ್ಲಿ ಅರ್ಜಿ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗುತ್ತದೆ. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಕಾರಣವನ್ನೂ ಕೇಳಬಹುದು.

ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ. ಸಾಲ: ಕಾರ್ಡ್ ಪಡೆಯುವುದು ಹೇಗೆ?

ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಇಂಥ ಕೆಲಸಕ್ಕೆ ಅನುಮೋದನೆ ನೀಡಲು ಅಧಿಕಾರಿಗಳು, ಸದಸ್ಯರಿಗೆ ಹಣ ನೀಡುವ ಅಗತ್ಯ ಇಲ್ಲ. ಸುಮ್ಮನೆ ಸತಾಯಿಸಿದರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಕೊಡಬಹುದು. ಅವರೂ ಕ್ರಮ ಕೈಗೊಳ್ಳದೆ ಇದ್ದರೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರು ಕೊಡಬಹುದು.