ಇತ್ತೀಚೆಗೆ ನುಗ್ಗೆ ಅತ್ಯಂತ ಲಾಭದಾಯಕ ಬೆಳೆಯಾಗುತ್ತಿದೆ. ಅತೀ ಪುಷ್ಟಿದಾಯಿಕ ತರಕಾರಿಗಳಲ್ಲಿ ನುಗ್ಗೆ ಪ್ರಧಾನವಾಗಿದೆ. ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ನುಗ್ಗೆ ವಿದೇಶಕ್ಕೆ ರಪ್ತಾಗುತ್ತಿದೆ.

ಎಲ್ಲ ರೀತಿಯ ಮಣ್ಣಿನಲ್ಲಿಯೂ ನುಗ್ಗೆ ಬೆಳೆಯಬಹುದು. ಮಳೆ ಆಶ್ರಯಿಸಿ ಬೆಳೆಯುವವರು ಜೂನ್–ಜುಲೈ ತಿಂಗಳುಗಳಲ್ಲಿ ಬೀಜವನ್ನು ಬಿತ್ತನೆ ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಬೀಜಗಳನ್ನು ವರ್ಷದ ಯಾವ ಸಮಯದಲ್ಲಾದರೂ ಬಿತ್ತನೆ ಮಾಡಬಹುದು. ಮನೆಯ ಕೈ ತೋಟದಲ್ಲಿಯೂ ನುಗ್ಗೆಯನ್ನು ಬೆಳೆಯಬಹುದು.

ತಳಿಗಳು:
ಧನರಾಜ (ಸೆಲೆಕ್ಷನ್ 6/4)
ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಗಿಡ್ಡ ತಳಿ ಇದು. ತೆಂಗು, ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ, ಜಲಾನಯನ ಪ್ರದೇಶಗಳಲ್ಲಿ ಏಕ ಬೆಳೆಯಾಗಿ ಬೆಳೆಯಬಹುದು. ಕೈತೋಟಗಳಲ್ಲಿಯೂ ಬೆಳೆಯಬಹುದು. ಬೀಜ ಬಿತ್ತಿದ 9 ರಿಂದ 10 ತಿಂಗಳುಗಳಲ್ಲಿ ಫಸಲು ಆರಂಭವಾಗುತ್ತದೆ.  ಎರಡು ವರ್ಷದ ಗಿಡ, ಪ್ರತಿ ವರ್ಷ 250 ರಿಂದ 300 ಕಾಯಿ ಕೊಡುತ್ತದೆ. ಕಾಯಿಗಳು 35 ರಿಂದ 40 ಸೆಂ.ಮೀ ಉದ್ದವಾಗಿ ಬೆಳೆಯುತ್ತವೆ.

ಭಾಗ್ಯ (ಕೆ.ಡಿ.ಎಂ-01)
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ ಈ ತಳಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಹೆಚ್ಚು ಜನಪ್ರಿಯ ತಳಿ. ಇದು ಗಿಡ್ಡ ಜಾತಿಯ ತಳಿಯಾಗಿದ್ದು ಗಿಡದ ಎತ್ತರ 2 ರಿಂದ 4 ಮೀ ವರೆಗೆ ಬೆಳೆಯುತ್ತದೆ. ಗಿಡಗಳು ನಾಟಿ ಮಾಡಿದ 100 ರಿಂದ 110 ದಿನಗಳ ನಂತರ ಶೀಘ್ರವಾಗಿ ಹೂ ಬಿಡುತ್ತವೆ.

ನಾಟಿ ಮಾಡಿದ 160 ರಿಂದ 180 ದಿನಗಳ ನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಪ್ರತಿ ಕಾಯಿಯು 60-70ಸೆಂ.ಮೀ. ಉದ್ದವಿದ್ದು, ಕಡುಹಸಿರು ಬಣ್ಣದೊಂದಿಗೆ ದುಂಡಗೆ ಇರುತ್ತದೆ. ಈ ತಳಿಯು ಅಕ್ಟೋಬರ್ ದಿಂದ ನವೆಂಬರ ತಿಂಗಳಲ್ಲಿ ಹೂ ಕಟ್ಟಿದ 40ದಿನಗಳ ನಂತರ ಕಾಯಿ ಕಟಾವಿಗೆ ಸಿದ್ಧವಾಗುವುದು.

ಮುಂದೆ ಫೆಬ್ರುವರಿಯಿಂದ ಮಾರ್ಚ ತಿಂಗಳುಗಳಲ್ಲಿ ಹೂ ಕಟ್ಟಿ ಪುನಃ 40 ದಿನಗಳಲ್ಲಿ ಕಾಯಿಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಪ್ರಥಮ ವರ್ಷದಲ್ಲಿ 350 ರಿಂದ 400 ಕಾಯಿಗಳು ಹಾಗೂ ಎರಡನೇ ವರ್ಷದಿಂದ 800 ರಿಂದ 1000 ಕ್ಕೂ ಹೆಚ್ಚು ಕಾಯಿಗಳು ಪ್ರತಿ ಗಿಡದಿಂದ ಪಡೆಯಬಹುದು.

ಪಿ.ಕೆ.ಎಂ: 1
ತಮಿಳುನಾಡಿನ ಗಿಡ್ಡ ಜಾತಿಯ ನುಗ್ಗೆ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. ನಾಟಿ ಮಾಡಿದ 6 ರಿಂದ 12 ತಿಂಗಳಲ್ಲಿ ಫಸಲು ಕೊಡುತ್ತದೆ. ಸ್ವಾಧಿಷ್ಟವಾದ ರುಚಿ ಹೊಂದಿದೆ.

ಪಿ.ಕೆ.ಎಂ: 2
ಇದು ಸಹ ತಮಿಳುನಾಡಿನ ಗಿಡ್ಡ ಜಾತಿಯ ತಳಿ. 6 ರಿಂದ 12 ತಿಂಗಳಲ್ಲಿ ಫಸಲು ಕೊಡುತ್ತದೆ. ಕಾಯಿಗಳು ಹಸಿರಾಗಿದ್ದು 75 ರಿಂದ 90ಸೆಂ.ಮೀ. ಉದ್ದವಿರುತ್ತವೆ. ಗಿಡ ನೆಟ್ಟ 8 ರಿಂದ 9ತಿಂಗಳಲ್ಲಿ ಫಸಲು ಪ್ರಾರಂಭವಾಗುತ್ತದೆ. ಸ್ವಾಧಿಷ್ಟವಾದ ರುಚಿ ಹೊಂದಿದೆ. ಪ್ರತಿ ಮರದಿಂದ ವರ್ಷಕ್ಕೆ 140 ರಿಂದ 200 ಕಾಯಿಗಳನ್ನು ಪಡೆಯಬಹುದು.

ಜಿಕೆವಿಕೆ 1, ಜಿಕೆವಿಕೆ 2, ಜಿಕೆವಿಕೆ 3: ಅಧಿಕ ಸಾಂಧ್ರತೆ ಇರುವ ತೋಟಗಳಲ್ಲಿ ಬೆಳೆಯಬಹುದು.

ಓದಿ: ಹಣ್ಣು, ಹಾಲಿಗಿಂತ ಶ್ರೇಷ್ಠ ನುಗ್ಗೆ ಸೊಪ್ಪು; ಆದಾಯದ ಬೆಳೆ

ಸಿಸಿ ಬೆಳೆಸುವುದು ಹೇಗೆ
ನುಗ್ಗೆಯ ಸಸಿ ಬೆಳೆಸುವಾಗ ಹೆಚ್ಚುಎಚ್ಚರಿಕೆ ವಹಿಸಬೇಕು. ಮೊದಲು 15 ಸೆ.ಮೀ. ಉದ್ದ 4 ಸೆ.ಮೀ. ಅಗಲ ಅಳತೆಯ ಪಾಲಿಥಿನ್ ಕವರ್ ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಎರಡು ಪ್ರಮಾಣದಷ್ಟು ಮಣ್ಣು, ಒಂದು ಪ್ರಮಾಣದಷ್ಟು ಉಸುಕು, ಒಂದು ಪ್ರಮಾಣದಷ್ಟು ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಪಾಲಿಥಿನ್ ಕವರ್ ನಲ್ಲಿ ತುಂಬಬೇಕು.

ಅದರಲ್ಲಿ ಎರಡು ಸೆ.ಮೀ. ಆಳದಲ್ಲಿ ಎರಡು ಬೀಜ ನೆಡಬೇಕು. ವಾತಾವರಣಕ್ಕೆ ತಕ್ಕಂತೆ ನೀರು ಕೊಡಬೇಕು. 7 ರಿಂದ 10 ದಿನದಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಮಾರ್ಚ್ ನಲ್ಲಿ ಬೀಜ ಬಿತ್ತನೆ ಮಾಡಿದರೆ ಜೂನ್ ಅಥವಾ ಜುಲೈ ನಲ್ಲಿ ನಾಟಿಗೆ ಸಿದ್ಧವಾಗುತ್ತದೆ.

ಬೇಸಾಯ ಕ್ರಮಗಳು
ನುಗ್ಗೆಯಲ್ಲಿ ಎತ್ತರ ತಳಿ ಮತ್ತು ಗಿಡ್ಡ ತಳಿ ಇವೆ. ಗಿಡ್ಡ ತಳಿಗಳು ಪ್ರತಿ ಗಿಡದ ನಡುವೆ 3.25 ಮೀಟರ್ ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ ಅಂತರ ಇಡಬೇಕು. ಹೀಗೆ ಮಾಡಿದರೆ ಒಂದು ಹೆಕ್ಟೇರ್ ನಲ್ಲಿ 946 ಗಿಡ ನೆಡಬಹುದು.

ಓದಿ: ಬಿತ್ತನೆಗೂ ಮೊದಲು ಮಣ್ಣು ಪರೀಕ್ಷೆ ಮಾಡಿಸುವುದು ಹೇಗೆ?

ಎತ್ತರ ಜಾತಿ ತಳಿಗಳು ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ 5 ಮೀಟರ್ ಅಂತರ ಬಿಡಬೇಕು. ಅದರಿಂದ ಒಂದು ಹೆಕ್ಟೇರ್ ಪ್ರದೇಶದಲ್ಲಿ 400 ಗಿಡಗಳನ್ನು ನೆಡಬಹುದು. ಒಂದು ಹೆಕ್ಟೇರ್ ಗೆ 25 ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬೆಳೆಯುತ್ತಿರುವ ಸಸಿಗಳು ಗಾಳಿಯ ರಭಸಕ್ಕೆ ಬೀಳದಂತೆ ಕೋಲುಗಳನ್ನು ಆಸರೆಯಾಗಿ ಕಟ್ಟಬೇಕು. ವರ್ಷಕ್ಕೆ ಮೂರು ಹಂತದಲ್ಲಿ ಗೊಬ್ಬರ ಕೊಡಬಹುದು.

ಕೀಟ ರೋಗ ನಿಯಂತ್ರಣ
ಹೇನು ಕೀಟಗಳು ನುಗ್ಗೆಯ ಹೂ, ಎಲೆಗಳಿಂದ ರಸ ಹೀರಿ ಒಣಗಿಸುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ 2 ಮಿ.ಲೀ. ಮೆಲಾಥಿಯಾನ್ ದ್ರಾವಣವನ್ನು ನೀರಿನಲ್ಲಿ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಬೇಕು.

ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ. ವರೆಗೆ ಪ್ರೋತ್ಸಾಹ ಪಡೆಯಿರಿ

ಬೂದಿ ರೋಗ: ಬೂದಿ ಆಕಾರದ ಚುಕ್ಕೆ ಆರಂಭದಲ್ಲಿ ಕಾಣಿಸುತ್ತದೆ. ನಂತರ ಅದೇ ದೊಡ್ಡದಾಗಿ ಎಲೆಗಳ ಮೇಲೆ, ಕೆಳಗೆ ಹರಡುತ್ತದೆ. ಅದಕ್ಕೆ ನೀರಿನಲ್ಲಿ ಕರಗುವ ಮೂರು ಗ್ರಾಂ ಗಂಧಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಎಲೆ ಚುಕ್ಕೆ ರೋಗಕ್ಕೆ 2 ಗ್ರಾಂ ಮ್ಯಾಂಕೋಜೆಬ್ ಅನ್ನು ಪ್ರತಿ ಲೀಟರ್ ಗೆ ಬೆರೆಸಿ ಸಿಂಪಡಣೆ ಮಾಡಬೇಕು.