ತಾಯಿ ಮಮತೆ, ಕಾಳಜಿ ಕೇವಲ ಮನುಷ್ಯರಷ್ಟೇ ಅಲ್ಲ. ಸಕಲ ಜೀವರಾಶಿಗಳ ತಾಯಿ ಹೃದಯಗಳು ಒಂದೇ ರೀತಿ ಇರುತ್ತವೆ. ತಮ್ಮ ಮಕ್ಕಳಿಗಾಗಿ ಎಂಥ ಸಾಹಸಕ್ಕೂ ಸಿದ್ಧವಾಗುತ್ತವೆ ಎನ್ನುವುದು ಪ್ರಕೃತಿಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ತನ್ನ ಕರುಳಿನ ಬಳ್ಳಿಗಾಗಿ ಇಂಥದ್ದೇ ಸಾಹಸ ಮಾಡಿದ ತಾಯಿಯೊಬ್ಬಳ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಅಸಲಿಗೆ ಇದು ಕೋತಿಗಳ ಪ್ರಪಂಚದಲ್ಲಿ ನಡೆದ ಘಟನೆ. ಓವರ್ ಹೆಡ್ ಇಲೆಕ್ಟ್ರಿಕ್ ಕೇಬಲ್ ನಲ್ಲಿ ಸಿಲುಕಿಕೊಂಡಿದ್ದ ಮರಿ ಕೋತಿಯನ್ನು ತಾಯಿ ಕೋತಿ ರಕ್ಷಿಸಿದ ವಿಡಿಯೊ ವೈರಲ್ ಆಗುತ್ತಿದೆ. ವಿವಿಧ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡುತ್ತಿದೆ. ತಂತಿಯಲ್ಲಿ ಸಿಕ್ಕ ಮಗುವನ್ನು ಕೆಲವೇ ಸೆಕೆಂಡುಗಳಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ತಾಯಿ ಕೋತಿಯ ಸಾಹಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾಯಿ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ.

ವೈರಲ್ ವಿಡಿಯೊದಲ್ಲಿ ಇರುವಂತೆ, ಕಟ್ಟಡದ ಬಳಿ ಇರುವ ವಿದ್ಯುತ್ ತಂತಿಯಲ್ಲಿ ಮರಿ ಕೋತಿಯೊಂದು ಸಿಲುಕೊಂಡಿತ್ತು. ಆ ಕೋರಿ ತಂತಿಯಿಂದ ಕಟ್ಟಡದ ಟೆರೇಸ್ ಮೇಲೆ ಜಿಗಿಯಲು ಹೆದರುತ್ತಿತ್ತು. ಕಟ್ಟಡದಲ್ಲಿ ಇತರ ಕೋತಿಗಳೂ ಇದ್ದವು.

ಓದಿ: ಭೂಮಿಯನ್ನೇ ನಡುಗಿಸಬಲ್ಲದು ಆನೆಗಳ ಕಾದಾಟ

ತಾಯಿ ಕೋತಿ ಮರಿ ಕೋತಿಗೆ ಜಿಗಿಯುವಂತೆ ಧೈರ್ಯ ತುಂಬುತ್ತಲೇ ಇತ್ತು. ಮರಿ ಕೋತಿ ಜಿಗಿಯಬಹುದು ಎಂದು ನಿರೀಕ್ಷಿಸಿತು. ಆದರೆ, ಅದು ಜಿಗಿಯಲು ಹಿಂದೇಟು ಹಾಕಿತು. ಆಗ ತಾಯಿ ಕೋತಿಯೇ ವಿದ್ಯುತ್ ತಂತಿ ಮೇಲೆ ಜಿಗಿಯಿತು. ಮರಿ ಕೋತಿ ಗಾಬರಿಯಿಂದ ಕೈ ತಪ್ಪಿ ಇನ್ನೊಂದು ತಂತಿ ಮೇಲೆ ಜಾರಿತು. ತಂತಿ ಜೋರಾಗಿ ಅಲ್ಲಾಡ ತೊಡಗಿತು. ತಾಯಿ ಕೋತಿ ತಕ್ಷಣ ಕಟ್ಟಡಕ್ಕೆ ವಾಪಸ್ ಆಯಿತು. ಸ್ವಲ್ಪ ಸಮಯದ ಬಳಿಕ ಮತ್ತೆ ತಂತಿ ಮೇಲೆ ಹಾರಿದ ತಾಯಿ ಕ್ಷಣಾರ್ಧದಲ್ಲಿ ಮರಿಯನ್ನು ಅಪ್ಪಿಕೊಂಡು ಕಟ್ಟಡದ ಮೇಲೆ ಜಿಗಿಯಿತು. ತನ್ನ ಕರುಳ ಬಳ್ಳಿಯನ್ನು ರಕ್ಷಿಸಿಕೊಂಡಿತು.

ಓದಿ: ಬೇಟೆಗಾರರ ಬಂದೂಕು ಕಸಿದು ಬೆನ್ನಟ್ಟಿದ 10ನೇ ತರಗತಿ ಬಾಲಕ

ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ತಾಯಿಯ ರಕ್ಷಣಾ ಕಾರ್ಯಾಚರಣೆ. ಅದು ಹೇಗೆ ವಿಫಲವಾಗಬಹುದು? ” ಎಂದು ಪೋಸ್ಟ್ ಮಾಡಿದ್ದಾರೆ. ಆ ಬಳಿಕ ವಿಡಿಯೊ ವೈರಲ್ ಆಗಿದೆ.