ಬಿತ್ತಿದ ಬೀಜಗಳು ಸಸಿಯಾಗುತ್ತಲೇ ನಾನಾ ರೋಗಗಳಿಗೆ ತುತ್ತಾಗಿ ಸತ್ತು ಹೋಗುತ್ತವೆ. ಇನ್ನು ಕೆಲವು ಬೀಗಳು ಮೊಳಕೆಯೊಡೆದು ಸಾಯುತ್ತವೆ. ಇನ್ನು ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗಳನ್ನು ರೋಗದಿಂದ ಉಳಿಸಿಕೊಳ್ಳಲು ಹತ್ತಾರು ಔಷಧಗಳನ್ನು ಸಿಂಪಡಿಸಬೇಕಾಗುತ್ತದೆ.

ಅದೆಲ್ಲದಕ್ಕೂ ಪರಿಹಾರದಾಯಕ ಪದ್ಧತಿಯೊಂದು ಭಾರತದ ಇತಿಹಾಸದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದೆ. ಬೀಜ ಉತ್ತಮವಾಗಿದ್ದರೆ ಬೆಳೆ ಚೆನ್ನಾಗಿರುತ್ತದೆ. ಇಳುವಳಿಯೂ ಯಥೇಚ್ಚವಾಗಿರುತ್ತದೆ. ಹಾಗಾಗಿ ಬಿತ್ತನೆಗೂ ಮೊದಲೇ ಬೀಜೋಪಚಾರ ಮಾಡಿದರೆ ರೋಗದಿಂದ ಮುಕ್ತವಾಗುವುದಲ್ಲದೆ ಇಳುವರಿಯನ್ನೂ ಹೆಚ್ಚಿಸಿಕೊಳ್ಳಬಹದು. ಈಚೆಗೆ ನಡೆದ ಸಂದರ್ಶನವೊಂದರಲ್ಲಿ ಸಹಾಯಕ ಬೀಜ ಉತ್ಪಾದನಾ ತಜ್ಞ ಡಾ. ವಿಶ್ವನಾಥ ಕೋಟಿ ಅವರು ಈ ಎಲ್ಲ ವಿಷಯಗಳನ್ನು ರೈತರೊಂದಿಗೆ ಹಂಚಿಕೊಂಡಿದ್ದಾರೆ.

ಯಾಕೆ ಬೀಜೋಪಚಾರ ಮಾಡಬೇಕು?
ಕೃಷಿಯಲ್ಲಿ ಎಲ್ಲದಕ್ಕೂ ಬೀಜವೇ ಮೂಲ. ನಮ್ಮ ಪೂರ್ವಜರು ಸಹ ಬೀಜೋಪಚಾರ ಅನುಸರಿಸುತ್ತ ಬಂದಿದ್ದಾರೆ. ಮಗು ಹುಟ್ಟಿದ ಬಳಿಕ ಮುಂದೆ ರೋಗ ಬರದೆ ಇರಲಿ ಎಂದು ಪೊಲಿಯೊ ಲಸಿಕೆ ಹಾಗುತ್ತೇವೆ. ಹಾಗೆಯೇ ಬೀಜಗಳನ್ನು ಉಪಚಾರ ಮಾಡದೆ ಭೂಮಿಗೆ ಹಾಕಬಾರದು. ಪ್ರತಿ ಬಿತ್ತನೆ ಬೀಜಗಳಲ್ಲಿಯೂ ತಾಂತ್ರಿಕತೆ ಇರುತ್ತದೆ. ಅದಕ್ಕೆ ಪೂರಕವಾಗಿ ಬೀಜೋಪಚಾರ ಮಾಡುವುದು ಮುಖ್ಯ.

ಉದಾಹರಣೆಗೆ ಭತ್ತಕ್ಕೆ ಬೆಂಕಿ ರೋಗ ಬರುತ್ತದೆ. ಬೀಜೋಪಚಾರ ಮಾಡುವುದರಿಂದ 30 ದಿನ ರೋಗ ಬರದಂತೆ ತಡೆಯಬಹುದು. ಸಸಿ ಮಡಿಗೆ ಔಷಧ ಸಿಂಪಡಣೆ ರಗಳೆ ತಪ್ಪುತ್ತದೆ. ಖರ್ಚು ಉಳಿಯುತ್ತದೆ.
ತೊಗರಿಗೆಗೆ ಕ್ಯಾಪ್ಟಾನ್ ಅಥವಾ ಕಾರ್ಬನ್ ಡೈಸಿಯಂ ಬಳಸಿ ಬೀಜೋಪಚಾರ ಮಾಡಬಹುದು. ಅದರಿಂದ ಬೀಜ ಮೊಳಕೆ ಬಂದು ಸಾಯುವುದು ತಪ್ಪುತ್ತದೆ. ಕೊಳೆತು ಸಾಯುವ ಸಂದರ್ಭ ಕಡಿಮೆ ಆಗುತ್ತದೆ.

ಓದಿ: ನುಗ್ಗೆ ಕೃಷಿ; ಬದುಕು ಖುಷಿ

ಬಿತ್ತನೆ ಬೀಜ ಹೇಗಿರಬೇಕು?
ಗಾತ್ರದಲ್ಲಿ ದಪ್ಪ ಇರುವ ಬೀಜವನ್ನೇ ಬಳಸಬೇಕು.
ಬೌತಿಕ ಶುದ್ಧತೆ ಇರಬೇಕು. ತಳಿ ಶುದ್ದತೆ ಇರಬೇಕು. ಅಂದರೆ ಉದಾಹರಣೆಗೆ ಜಯ ಭತ್ತ ತಳಿಯಲ್ಲಿ ಶೇ. 100 ರಷ್ಟು ಜಯ ತಳಿಯ ಬೀಜವೇ ಇರಬೇಕು. ಕಸ, ಕಡ್ಡಿ ಏನೂ ಇರಬಾರದು. ಬೀಜದ ಆರೋಗ್ಯ ಚೆನ್ನಾಗಿರಬೇಕು. ಹುಳ ಆಗಿರಬಾರದು.
ಮೊಳಕೆಯೊಡೆಯುವ ಶಕ್ತಿ ಇರಬೇಕು. ಅದರಲ್ಲೂ ಬೇಗ ಮೊಳಕೆ ಒಡೆಯಬೇಕು.
ಇಷ್ಟೆಲ್ಲ ಗುಣಲಕ್ಷಣ ಇದ್ದರೆ ಇಳುವರಿ ಚೆನ್ನಾಗಿ ಬರುತ್ತದೆ.
ಜೂನ್ ನಲ್ಲಿ ಬಿತ್ತನೆ ಮಾಡುವವರು ದೀರ್ಗಾವಧಿ ಬೀಜ ತಳಿ ಆಯ್ಕೆ ಮಾಡಿಕೊಳ್ಳಬೇಕು.

ಓದಿ: ಗುಲಾಬಿ ಕೃಷಿ ಪ್ಲಾನಿಂಗ್; ವರ್ಷಕ್ಕೆ ಲಕ್ಷಾಂತರ ರೂ. ಆದಾಯ

ಬೀಜೋಪಚಾರ ಮಾಡುವುದು ಹೇಗೆ?
ಸಾಮಾನ್ಯವಾಗಿ ಎಲ್ಲ ಬಿತ್ತನೆ ಬೀಜಗಳು ಬಹುತೇಕ ಬೀಜೋಪಚಾರ ಆಗಿಯೇ ಇರುತ್ತವೆ. ಆದರೂ ಕೆಲವೊಮ್ಮೆ ಮನೆಯಲ್ಲಿ ಸಂಗ್ರಹಿಸಿಟ್ಟ ಬೀಜ ಬಳಸುವಾಗ ಬೀಜೋಪಚಾರ ಮುಖ್ಯ.
ಮೊದಲು ಬೀಜವನ್ನು ಟಾರ್ಪೈನ್ ಮೇಲೆ ಹರಡಬೇಕು. ರಾಸಾಯನಿಕ ಎಷ್ಟು ಬೇಕೊ ಅಷ್ಟು ತೆಗೆದುಕೊಂಡು ನೀರಿನಲ್ಲಿ ಹಾಕಿ ಕಲಸಬೇಕು. ಕಲಸುವಾಗ ಕೈಗೆ ಗ್ಲೌಸ್, ಬಾಯಿಗೆ ಮಾಸ್ಕ್ ಧರಿಸಿರಬೇಕು. ಕೃಷಿ ಬೀಜೋಪಚಾರ ಡ್ರಮ್ ನಲ್ಲಿಯೂ ರಾಸಾಯನಿಕ ಹಾಕಿ ತಿರುಗಿಸಿದರೆ ಬೀಜದ ಎಲ್ಲ ಭಾಗಕ್ಕೂ ತಗಲುತ್ತದೆ.

ಓದಿ: ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ: ಕಾರ್ಡ್ ಪಡೆಯುವುದು ಹೇಗೆ?

ಬೀಜ ಮೊಳಕೆ ಬಂದು ಸಾಯುವುದೇಕೆ?
ಬಿತ್ತನೆ ಬೀಜಗಳಿಗೂ ಆಯಸ್ಸು ಇರುತ್ತದೆ. ಎರಡು, ಮೂರು ವರ್ಷಗಳ ಹಳೆಯ ಬಿತ್ತನೆ ಬೀಜವನ್ನು ಬಿತ್ತಿದರೆ ಮೊಳಕೆ ಬಂದು ಸಾಯುವ ಸಾಧ್ಯತೆ ಹೆಚ್ಚು. ಹಾಗಾಗಿ ಬಿತ್ತನೆ ಬೀಜಗಳನ್ನು ಹೆಚ್ಚು ವರ್ಷ ಶೇಖರಿಸಿಟ್ಟು ಬಳಸಬಾರದು. ಬೀಜಕ್ಕೂ ವಯಸ್ಸಾಗುತ್ತದೆ.