ಗುಲಾಬಿ ಹೂವಿಗೆ ಕರ್ನಾಟಕ ಅಷ್ಟೇ ಅಲ್ಲ, ದೇಶ ವಿದೇಶಗಳಲ್ಲಿಯೂ ಉತ್ತಮ ಮಾರುಕಟ್ಟೆ ಇದೆ. ಸದಾ ಕಾಲದಲ್ಲಿಯೂ ಉತ್ತಮ ಬೆಲೆ ಉಳಿಸಿಕೊಂಡಿರುವ ಗುಲಾಬಿಯ ಕೃಷಿ ಕೂಡ ಲಾಭದಾಯಕವಾಗಿದೆ. ಪ್ರೀತಿ, ಸ್ನೇಹದ ಸಂಕೇತವಾಗಿರುವ ಗುಲಾಬಿ ಹೂವನ್ನು ಬೆಳೆಯುವುದು ಹೇಗೆ? ಯಾವ ತಳಿ ಉತ್ತಮ ಎನ್ನುವ ಪೂರ್ಣ ಮಾಹಿತಿ ತಿಳಿಯಲು ಈ ವರದಿ ಪೂರ್ತಿ ಓದಿ.

ಮಣ್ಣು: ಗುಲಾಬಿಗೆ ಸುಮಾರು 5.3 – 5.6 ರಸಸಾರವುಳ್ಳ, ಚೆನ್ನಾಗಿ ನೀರು ಬಸಿದು ಹೋಗುವ, ಫಲವತ್ತಾದ ಮರಳು ಮಿಶ್ರಿತ ಕೆಂಪುಗೋಡು ಮಣ್ಣು ಅತೀ ಸೂಕ್ತ. ಈ ಬೆಳೆಗೆ ಸಮಶೀತೋಷ್ಣ ಹವಾಗುಣ ಬೇಕು. ಅತಿ ಹೆಚ್ಚಿನ ಉಷ್ಣತೆ ಈ ಬೆಳೆಗೆ ಯೋಗ್ಯವಲ್ಲ. ಆದರೆ ದಿನವಿಡೀ ಸಾಕಷ್ಟು ಬೆಳಕು/ಬಿಸಿಲು ಅವಶ್ಯ. ಜೂನ್-ಅಕ್ಟೋಬರ್ ನಲ್ಲಿ ಈ ಬೆಳೆ ಬೆಳೆಯಬಹುದು.

ನಾಟಿ ಮಾಡುವುದು ಹೇಗೆ?
ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ, ಹದಗೊಳಿಸಿ 1.5 ಘನ ಅಡಿ ಗಾತ್ರದ ಗುಣಿಗಳನ್ನು 2.5 x 2.5 ಅಥವಾ 3 x 3 ಅಡಿ ಅಂತರದಲ್ಲಿ ನಾಟಿಗಿಂತ ಮುಂಚೆ ತೆಗೆಯಬೇಕು.
ಪ್ರತಿ ಗುಣಿಗೆ 2 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರವನ್ನು ಮೇಲ್ಮಣ್ಣಿನೊಂದಿಗೆ ಚೆನ್ನಾಗಿ ಬೆರೆಸಿ ತುಂಬಬೇಕು.
ಗೆದ್ದಲಿನ ಬಾಧೆ ಬರದಂತೆ ರಾಸಾಯನಿಕಗಳಾದ ಕಾರ್ಬೋಫ್ಯುರಾನ್ ಅಥವಾ ಫೋರೇಟ್ ಹರಳುಗಳನ್ನು 25 ಗ್ರಾಂ. ಗಳಂತೆ ಹಾಕಬೇಕು.
ಸಸಿ ಮಡಿಯಿಂದ ಕಸಿಮಾಡಿದ ಸಸಿಗಳನ್ನು ಬೇರುಗಳಿಗೆ ಧಕ್ಕೆ ಆಗದಂತೆ ಕಿತ್ತು, ಕಸಿ ಕಟ್ಟಿದ ಭಾಗ ಭೂಮಿಯಿಂದ 2 – 4 ಅಂಗುಲ ಎತ್ತರದಲ್ಲಿರುವಂತೆ ಗುಣಿಗಳಲ್ಲಿ ನಾಟಿ ಮಾಡಬೇಕು.
ಎಕರೆಗೆ ಅಂತರವನ್ನು ಅವಲಂಬಿಸಿ 6,969 ರಿಂದ 4,840 ಸಸಿಗಳು ಬೇಕಾಗುತ್ತವೆ.
ನಾಟಿ ಮಾಡಿದ ತಕ್ಷಣ ಸಸಿಗಳಿಗೆ ನೀರನ್ನು ಒದಗಿಸಬೇಕು. ಗಿಡಗಳ ಮಡಿಯ ಮಣ್ಣನ್ನು ಆಗಿಂದಾಗ್ಗೆ ಸಡಲಿಸಿ, ಕಳೆಗಳು ಬಾರದಂತೆ ನೋಡಿಕೊಳ್ಳಬೇಕು.

ಸಸ್ಯಾಭಿವೃದ್ಧಿ
ಕಣ್ಣು ಕಸಿ ಮಾಡಿದ (ಬಡ್ಡೆಡ್) ಗಿಡಗಳನ್ನು ನಾಟಿಗೆ ಉಪಯೋಗಿಸಬೇಕು.
ಬೇರು ಸಸಿಯಾಗಿ ಕಾಡು ಜಾತಿಯ ಡಾಗ್ ರೋಸ್ (ರೋಸ ಮಲ್ಟಿಫ್ಲೋರಾ) ರೆಂಬೆ ತುಂಡುಗಳನ್ನು ಪಾತಿಗಳಲ್ಲಿ 4 ಅಂಗುಲ ಅಂತರದಲ್ಲಿ ನಾಟಿ ಮಾಡಿ ಐದಾರು ತಿಂಗಳು ಬೆಳೆಸಬೇಕು.
ಉತ್ತಮ ಗಾತ್ರದ ಒಂದೆರಡು ಕಾಂಡಗಳನ್ನು ಕಾಯ್ದುಕೊಂಡು ಉಳಿದವುಗಳನ್ನು ತೆಗೆದು ಹಾಕಬೇಕು.
ಕಾಂಡ ಪೆನ್ಸಿಲ್ ಗಾತ್ರ ಹೊಂದಿದಾಗ ತಳಿಯ ಉಬ್ಬಿದ ಕಣ್ಣನ್ನು ಕಣ್ಣುಕಸಿ (ಬಡ್) ಹಾಕಬೇಕು.

ಇದಕ್ಕಾಗಿ ಬೇರು ಸಸಿಯ ಕಾಂಡದಲ್ಲಿ ನೆಲದಿಂದ ಸ್ವಲ್ಪ ಎತ್ತರದಲ್ಲಿ (T) ಆಕಾರದಲ್ಲಿ ಅಥವಾ ತಲೆಕೆಳಗಾಗಿರುವ (T) ಆಕಾರದಲ್ಲಿ ಸೀಳು ಹಾಕಬೇಕು.
ಕಣ್ಣು ಸೇರಿಸಲು ಅನುಕೂಲವಾಗುವಂತೆ ತೊಗಟೆಯನ್ನು ಕಸಿಚಾಕು (ಬಡ್ಡಿಂಗ್ ನೈಫ್) ದಿಂದ ಸಡಿಲ ಮಾಡಬೇಕು.
ಅಪೇಕ್ಷಿತ ತಳಿಯ ಕಣ್ಣನ್ನು ಬೇರ್ಪಡಿಸಿ ಬೇರು ಸಸಿಯ ಕಾಂಡದಲ್ಲಿ ಸೇರಿಸಿ, ಕಣ್ಣು ಮುಚ್ಚದಂತೆ ಪಾಲಿಥೀನ್ ಪಟ್ಟಿ (ಟೇಪ್) ಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು.

ಓದಿ: ನುಗ್ಗೆ ಕೃಷಿ; ಬದುಕು ಖುಷಿ

ಕಣ್ಣು ಹಾಕಿದ 8-10 ದಿನಗಳಲ್ಲಿ ಕಣ್ಣು ಚಿಗುರಲು ಪ್ರಾರಂಭಿಸುತ್ತದೆ. ಕಣ್ಣು ಚಿಗುರಿದ ಕವಲುಗಳನ್ನು ಹೊರತುಪಡಿಸಿ, ಕಸಿ ಕಟ್ಟಿದ ಮೇಲ್ಛಾಗದ ಕವಲುಗಳನ್ನು ಕತ್ತರಿಸಬೇಕು.
ಅಲ್ಲದೇ ಕಸಿ ಹಾಕಿದ ಭಾಗದ ಕೆಳಗಡೆ ಆಗಿಂದಾಗ್ಗೆ ಬರುವ ಬೇರು ಸಸಿ ಚಿಗುರುಗಳನ್ನು ಚಿವುಟಿ ಹಾಕುತ್ತಿರಬೇಕು.
ಕಣ್ಣು ಹಾಕಿದ 45 – 60 ದಿನಗಳಲ್ಲಿ ಕಸಿಗಿಡಗಳು ನಾಟಿ ಮಾಡಲು ಸಿದ್ಧವಾಗುತ್ತವೆ.
ಇತ್ತೀಚೆಗೆ ಬೇರು ಸಸಿ ಕಾಂಡವನ್ನು ಪಾತಿಗಳಲ್ಲಿ ನಾಟಿ ಮಾಡಿ ಒಂದು ತಿಂಗಳ ನಂತರ ಪಾತಿಯಿಂದ ತೆಗೆದು ಮುಖ್ಯ ಕಾಂಡದ ಮೇಲೆಯೇ ಕಣ್ಣು ಹಾಕಿ ಪಾಲಿಥೀನ್ ಚೀಲಗಳಲ್ಲಿ ನಾಟಿ ಮಾಡುವುದು ಪ್ರಚಲಿತದಲ್ಲಿದೆ.

ಗುಲಾಬಿ ಪ್ರಮುಖ ತಳಿಗಳು
ಕೆಂಪು : ಗ್ಲೇಡಿಯೇಟರ್, ಸೋಫಿಯಾ ಲಾರೆನ್ಸ್, ರಕ್ತಗಂಧ, ಸಿಂಧೂರ, ಫಸ್ಟ್ ಪ್ರೈಜ್
ಕೇಸರಿ : ಸೂಪರ್ ಸ್ಟಾರ್, ಆರೆಂಜ್, ಸೆನ್ಸೇಶನ್.
ಪಿಂಕ್ : ಮಾಂಟೆಜೂಮಾ
ಹಳದಿ : ಗೋಲ್ಡನ್ ಟೈಮ್ಸ್, ಪೂಸಾ ಸೋನಿಯಾ
ಮಿಶ್ರಬಣ್ಣ : ಅಮೇರಿಕನ್ ಹೆರಿಟೇಜ್, ಡಬಲ್-ಡಿಲೈಟ್, ಟಾಟಾ ಸೆಂಟೆನರಿ, ಕ್ವೀನ್ ಎಲಿಝಬೆತ್

ಓದಿ: ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ: ಕಾರ್ಡ್ ಪಡೆಯುವುದು ಹೇಗೆ?

ಪೋಷಕಾಂಶ ನಿರ್ವಹಣೆ ಹೇಗೆ?
ವರ್ಷಕ್ಕೆ ಗಿಡವೊಂದಕ್ಕೆ 2 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ, 10 ಗ್ರಾಂ. ಸಾರಜನಕ, 10 ಗ್ರಾಂ. ರಂಜಕ ಹಾಗೂ 15 ಗ್ರಾಂ. ಪೊಟ್ಯಾಷ್ ಯುಕ್ತ ರಾಸಾಯನಿಕ ಗೊಬ್ಬರಗಳನ್ನು ಎರಡು ಕಂತುಗಳಲ್ಲಿ ಕೊಡಬೇಕು.
ಮೊದಲನೇ ಕಂತನ್ನು ಗಿಡಗಳನ್ನು ಸವರುವ ಸಂದರ್ಭದಲ್ಲೂ ಮತ್ತು ಉಳಿದ ಕಂತನ್ನು ಸವರಿದ ಒಂದೂವರೆ ತಿಂಗಳ ನಂತರ ಒದಗಿಸಬೇಕು.
ಇದಲ್ಲದೇ ಲಘು ಪೋಷಕಾಂಶಗಳನ್ನು ಹೊಂದಿರುವ ಗುಲಾಬಿ ಮಿಶ್ರಣ (ರೋಸ್ ಮಿಕ್ಸ್)ವನ್ನು ಗಿಡ ಸವರಿದ ಒಂದು ವಾರದ ನಂತರ ಪ್ರತಿ ಗಿಡಕ್ಕೆ 100 ಗ್ರಾಂ. ಗಳ ಪ್ರಕಾರ ಕೊಡುವುದರಿಂದ ಉತ್ಕೃಷ್ಟ ಗುಣಮಟ್ಟ ಮತ್ತು ಇಳುವರಿಗಳನ್ನು ಪಡೆಯಬಹುದು.

ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.

ಇಳುವರಿ ಮತ್ತು ಕೊಯ್ಲು
ಗಿಡಗಳನ್ನು ಸವರಿದ 45 – 60 ದಿನಗಳ ನಂತರ ಹೂವು ಕೊಯ್ಲಿಗೆ ಸಿದ್ಧಗೊಳ್ಳುತ್ತವೆ. ಹೂವಿನ ಒಂದೆರಡು ದಳಗಳು ತೆರೆದ ಕೊಡಲೇ ಉದ್ದನೆಯ ಕಾಂಡದೊಂದಿಗೆ ಕೊಯ್ಲು ಮಾಡುವುದು ಸೂಕ್ತ.
ಕೊಯ್ಲು ಮಾಡಿದ ಹೂಗಳನ್ನು ಮಾರಾಟವಾಗುವರೆಗೆ ನೀರಿರುವ ಬಕೆಟ್ ಗಳಲ್ಲಿ ನಿಲ್ಲಿಸಿ ಇಡಬೇಕು. ಒಂದು ಎಕರೆ ಪ್ರದೇಶದಿಂದ ಸುಮಾರು 80 ಸಾವಿರದಿಂದ ಒಂದು ಲಕ್ಷ ಹೂವುಗಳು ದೊರಕುತ್ತವೆ.

ಓದಿ: ಖರ್ಚಿಲ್ಲದೆ ಹೊಲ ಅಭಿವೃದ್ದಿ ಮಾಡುವುದು ಹೇಗೆ?