ಹಿಂದಿನ ವರ್ಷದ ಪ್ರವಾಹ, ಈ ವರ್ಷದ ಕೊರೊನಾ ಸಂಕಷ್ಟದಿಂದ ಕಂಗೆಟ್ಟಿದ್ದ ರೈತರಿಗೆ ಕೊನೆಗೂ ಭಾಗ್ಯದ ಬಾಗಿಲು ತೆರೆದಿದೆ. ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಚಿವ ಸಂಪುಟ ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

ಇದಿಷ್ಟೇ ಅಲ್ಲದೆ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉದ್ದೇಶಕ್ಕಾಗಿ ಪಡೆದ ಗರಿಷ್ಠ ಮೂರು ಲಕ್ಷ ರೂ. ವರೆಗಿನ ಅಲ್ಪಾವಧಿ ಕೃಷಿ ಸಾಲದ ಮರು ಪಾವತಿ ಅವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲು ತೀರ್ಮಾನಿಸಿದೆ.

ಸರ್ಕಾರ ಕೈಗೊಂಡಿರುವ ಬೆಂಬಲ ಬೆಲೆ ಹೆಚ್ಚಳ ತೀರ್ಮಾನದಿಂದ ರೈತರು ಕೃಷಿಗೆ ಮಾಡಿರುವ ವೆಚ್ಚಕ್ಕಿಂತ ಶೇ. 50ರಿಂದ ಶೇ. 80 ರಷ್ಟು ಹೆಚ್ಚಿನ ಆದಾಯ ಗಳಿಸಲು ರೈತರಿಗೆ ಸಾಧ್ಯವಾಗಲಿದೆ. ಅಲ್ಲದೆ, ಸಕಾಲದಲ್ಲಿ ಸಾಲ ಮರು ಪಾವತಿಸುವ ರೈತರಿಗೆ ಶೇ. 3 ರಷ್ಟು ಪ್ರೋತ್ಸಾಹಧನ ಕೊಡಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಓದಿ: ಗುಲಾಬಿ ಕೃಷಿಯ ಪ್ಲ್ಯಾನಿಂಗ್: ವರ್ಷಕ್ಕೆ ಲಕ್ಷಾಂತರ ರೂ. ಆದಾಯ

ಕನಿಷ್ಠ ಬೆಂಬಲ ಬೆಲೆ ಹೆಚ್ಚಳ 2020-21 ನೇ ಸಾಲಿಗೆ ಅನ್ವಯವಾಗಲಿದೆ. ಅಂದರೆ ಇದೇ ಮುಂಗಾರಿನಿಂದಲೇ ಅನ್ವಯವಾಗಲಿದೆ. ಇದರ ಜತೆಗೆ ಕೈಗಾರಿ ಮತ್ತಿತರ ಕ್ಷೇತ್ರಗಳಿಗೂ ಕೊಡುಗೆ ಘೋಷಣೆ ಮಾಡಲಾಗಿದೆ.

ಓದಿ: ಬಿತ್ತನೆಗೂ ಮೊದಲು ಮಣ್ಣು ಪರೀಕ್ಷೆ ಮಾಡಿಸುವುದು ಹೇಗೆ?

ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ?
ಭತ್ತ – 1868 ರೂ.
ರಾಗಿ – 3295 ರೂ.
ಜೋಳ – 2620 ರೂ.
ಸಜ್ಜೆ – 2640 ರೂ.
ಮೆಕ್ಕೆಜೋಳ – 1850 ರೂ.
ಉದ್ದು – 6000 ರೂ.
ತೊಗರಿ – 6000 ರೂ.
ಹಲಸಂದಿ – 7196 ರೂ.
ಸೋಯಾಬೀನ್ – 3880 ರೂ.
ಸೂರ್ಯಕಾಂತಿ – 5885 ರೂ.
ಕಡಲೆಕಾಯಿ – 5275 ರೂ.
ಎಳ್ಳು – 6855 ರೂ.
ಹುಚ್ಚೆಳ್ಳು – 6695 ರೂ.
ಹತ್ತಿ – 5515 ರೂ.

ಓದಿ: ಭತ್ತ, ತೊಗರಿ, ನವಣೆ: ಮುಂಗಾರಿಗೆ ಉತ್ತಮ ತಳಿ ಆಯ್ಕೆ ಮಾಡಿ

ಕೇಂದ್ರ ಸರ್ಕಾರ ನಿರ್ಧರಿಸಿದ ಪ್ರಕಾರ ಹಿಂದಿನ ಬೆಲೆಗಿಂತ ಭತ್ತಕ್ಕೆ 53 ರೂ, ರಾಗಿ ಗೆ 145 ರೂ, ಜೋಳಕ್ಕೆ 70 ರೂ. ಸಜ್ಜೆ 640 ರೂ. ಮೆಕ್ಕೆಜೋಳ 90 ರೂ, ಉದ್ದು 300 ರೂ, ತೊಗರಿ 200 ರೂ., ಹಲಸಂದಿ 146 ರೂ, ಸೋಯಾಬೀನ್ 170 ರೂ, ಸೂರ್ಯಕಾಂತಿ 235 ರೂ, ಕಡಲೆಕಾಯಿ 185 ರೂ, ಎಳ್ಳು 370 ರೂ, ಹುಚ್ಚೆಳ್ಳು 775 ರೂ, ಹತ್ತಿ 260 ರೂ. ಹೆಚ್ಚಳ ಮಾಡಲಾಗಿದೆ.

ಓದಿ: ಆಡು ಸಾಕಾಣಿಕೆಗೆ ತಳಿಗಳ ಜ್ಞಾನ