ಕೋವಿಡ್ 19 ಕೊರೊನಾ ವೈರಸ್ ಬಂದ ಮೇಲೆ ಸ್ವಾವಲಂಬಿ ಜೀವನದ ಅರಿವು ಹೆಚ್ಚಾಗಿದೆ. ಪ್ರತಿಯೊಂದನ್ನೂ ತಾವೇ ತಯಾರಿಸಿಕೊಳ್ಳಬೇಕು, ಆಹಾರ ಬೆಳೆಗಳನ್ನು ಸ್ವಂತವಾಗಿ ಬೆಳೆಯಬೇಕು ಎನ್ನುವಷ್ಟರ ಮಟ್ಟಿಗೆ ಜೀವನ ಶೈಲಿಯನ್ನು ಜಾಗೃತಗೊಳಿಸಿದೆ. ಹಸಿರು, ಕೃಷಿ ಅದೆಷ್ಟು ಉಪಯೋಗಕಾರಿ ಎನ್ನುವುದು ತಿಳಿಯುವ ಕಾಲ ಸೃಷ್ಟಿಯಾಗಿದೆ.

ಇಲ್ಲೊಬ್ಬರು ಅನೇಕ ವರ್ಷಗಳಿಂದ ತೋಟಗಾರಿಕೆಯೊಂದಿಗೆ ಸ್ವಾವಂಬಿ ಬದುಕು ನಡೆಸುತ್ತಿದ್ದಾರೆ. ಕೇವಲ 1.5 ಎಕರೆ ಪ್ರದೇಶದಲ್ಲಿ ಬದುಕಿಗೆ ಬೇಕಾದ ಎಲ್ಲ ಬೆಳೆಗಳನ್ನು ಬೆಳೆದುಕೊಂಡು ತಮ್ಮ ಜತೆ ಇತರರಿಗೂ ಹಂಚಿಕೊಂಡು ಸ್ವತಂತ್ರ ಜೀವನ ಕಂಡು ಕೊಂಡಿದ್ದಾರೆ.

ಸಾಮಾನ್ಯವಾಗಿ ಹೊಲ ಅಥವಾ ತೋಟ ಮಾಡುವವರು ಯಾವುದಾದರು ಪ್ರಮುಖ ಬೆಳೆಯನ್ನು ಆಶ್ರಯಿಸಿರುತ್ತಾರೆ. ಆದರೆ, ಇವರ ತೋಟಕ್ಕೆ ಹೋದರೆ ಏನಿಲ್ಲ ಎನ್ನುವಂತಿಲ್ಲ. ಆಹಾರ ಬೆಳೆಗಳಿಂದ ಹಿಡಿದು ಬಗೆ ಬಗೆಯ ಕಸಬರಿಗೆಯನ್ನೂ ಹಿತ್ತಲ ಗಿಡಗಳಿಂದಲೇ ಮಾಡುತ್ತಾರೆ. ತಮ್ಮ ಹಿತ್ತಲನ್ನು ಬರಿ ತೋಟವಲ್ಲ ಸಸ್ಯ ಪ್ರಬೇಧಗಳ ತೊಟ್ಟಿಲಾಗಿ ಪರಿವರ್ತಿಸಿದ್ದಾರೆ.

ಶಿರಸಿ ತಾಲೂಕಿನ ಕಮಟಗೇರಿಯ (ಸೋಂದಾ) ಮೀನಾಕ್ಷಿ ಭಟ್ಟ ಅವರ ತೋಟಕ್ಕೆ ಹೋದರೆ ಗ್ರಂಥಾಲಯಕ್ಕೆ ಹೋದಂತೆ. ಕೇಳದ, ತಿಳಿಯದ, ನೋಡಿಯೂ ಅರಿತಿರದ ಅದೆಷ್ಟೋ ವಿಷಯಗಳನ್ನು ತೋಟದಲ್ಲಿ ಸಂಗ್ರಹಿಸಿದ್ದಾರೆ ಮೀನಾಕ್ಷಿ ಅವರು. ಹೂವು, ಹಣ್ಣು, ತರಕಾರಿ, ಅಡಕೆ, ತೆಂಗು ಸೇರಿ ಎಲ್ಲ ರೀತಿಯ ಸಾಂಬಾರ ಪದಾರ್ಥಗಳು ಇವರ ಹಿತ್ತಲಲ್ಲಿ ಲಭ್ಯವಿದೆ. ದಿನ ಬಳಕೆ ಬೆಳೆಗಳಷ್ಟೇ ಅಲ್ಲದೆ, ಅದರಲ್ಲೂ ಹತ್ತಾರು ತಳಿ, ವಿಶೇಷತೆಗಳನ್ನು ಕಾಪಾಡಿಕೊಂಡಿದ್ದಾರೆ. ಕೃಷಿಯಲ್ಲೂ ಅನೇಕ ನಾವಿನ್ಯತೆಯನ್ನು ಅಳವಡಿಸಿದ್ದಾರೆ. ಜತೆಗೆ ಹೈನುಗಾರಿಕೆಯೂ ಮಾಡುತ್ತಿದ್ದಾರೆ.

ಹಾಗಾಗಿ ಇವರು ಯಾವುದೇ ವಸ್ತುವಿಗೂ ಮಾರುಕಟ್ಟೆಯನ್ನು ಅವಲಂಬಿಸಿಲ್ಲ. ಎಲ್ಲವನ್ನು ತಮ್ಮ ಹಿತ್ತಲಿನಿಂದಲೇ ಪಡೆಯುತ್ತಾರೆ. ಹೆಚ್ಚುವರಿ ಹಣ್ಣು, ತರಕಾರಿಗಳನ್ನು ಅಕ್ಕ, ಪಕ್ಕದವರಿಗೆ, ಊರಿನಿಗೆ, ಸಂಬಂಧಿಕರಿಗೆ ಹಂಚಿಕೊಂಡು ಆರೋಗ್ಯ ಪರಿಸರದಲ್ಲಿ ನೆಮ್ಮದಿಯ ಸುಖ ಜೀವನ ಕಂಡು ಕೊಂಡಿದ್ದಾರೆ.

ಅಸಲಿಗೆ ಮೀನಾಕ್ಷಿ ಅವರು ಇವುಗಳನ್ನು ಆದಾಯಕ್ಕಾಗಿ ಮಾಡುತ್ತಿಲ್ಲ. ಹವ್ಯಾಸಕ್ಕಾಗಿ ಮಾಡಿದ ತೋಟ ಅವರನ್ನು ಈಗಲೂ ವಿದ್ಯಾರ್ಥಿಯಾಗಿಸಿದೆ. ಪತಿ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ. ಈಗಲೂ ದಂಪತಿ ತೋಟದ ತುಂಬ ಓಡಾಡಿಕೊಂಡು ತಾವೇ ಕೆಲಸ ಮಾಡುತ್ತಾರೆ.

ತೋಟಗಾರಿಕೆಯಲ್ಲಿ ಪ್ರತಿ ಬಾರಿಯೂ ಹೊಸದನ್ನು ಹುಡಕುವ ಮೀನಾಕ್ಷಿ ಅವರು ಎಲ್ಲಿಯೇ ಹೊಸ ರೀತಿಯ ಗಿಡ ಕಂಡರೆ ತಮ್ಮ ತೋಟದಲ್ಲಿ ಬೆಳೆಸುತ್ತಾರೆ. ಹಾಗಾಗಿ ಅವರ ತೋಟ ಬಲು ವೈವಿದ್ಯಮಯವಾಗಿದೆ. ಪ್ರಕೃತಿಯೊಂದಿಗೆ ಬದುಕಬೇಕು, ಆಸ್ವಾಧಿಸಬೇಕು ಎನ್ನುವವರು ಇವರ ತೋಟದಿಂದ ಸಾಕಷ್ಟು ಕಲಿಯಬಹುದು.

ಹೂವಿನ ತಳಿಗಳು
ಮೀನಾಕ್ಷಿ ಅವರು ತಮ್ಮ ತೋಟದಲ್ಲಿ ಸುಮಾರು 45 ಜಾತಿಯ ಹೂವುಗಳನ್ನು ಬೆಳೆಸೆದ್ದಾರೆ.ಕರವಿರ, ಸಂಪಿಗೆ, ಗುಲಾಬಿ, ಮಲ್ಲಿಗೆ, ರತ್ನಪೂಪಾ, ಅಶೋಕ, ಬರಬರ, ತಾವರೆ, ಗೊಂಡೆ, ನಾಗದಾಳಿ, ನಂದಿಬಮ್ಲ, ದತ್ತುರಿ, ಕೆಂಡ ಸಂಪಿಗೆ ಹೀಗೆ ಬಗೆಬಗೆಯ ಹೂವುಗಳು ಇವರ ತೋಟದಲ್ಲಿವೆ. ಅದರಲ್ಲಿ ಇಸಮುಂಗ್ರಿ, ಕರಿಮಾದ್ಲು, ಬಂದೆಲ್ಲಾ ಎನ್ನುವ ಔಷಧ ಸಂಬಂಧಿ ಹೂವುಗಳು ಇವೆ.

ಬಿಳಿ ಬದನೆಕಾಯಿ
ಮೀನಾಕ್ಸಿ ಅವರು ತೋಟದಲ್ಲಿ ಸುಮಾರು 20 ರೀತಿಯ ತರಕಾರಿ ಬೆಳೆಗಳು ಅನೇಕ ತರಕಾರಿ ಸೊಪ್ಪುಗಳನ್ನು ಬೆಳೆದಿದ್ದಾರೆ. ಅದರಲ್ಲಿ ಬಿಳಿ ಬದನೆಕಾಯಿ ಬಲು ವಿಶೇಷ. ಅಪರೂಪದ ಬಿಳಿ ಬದನೆ ಕಾಯಿಯನ್ನು ಅವರ ಮೈಸೂರಿನಿಂದ ತಂದು ತಮ್ಮ ಹೊಲದಲ್ಲಿ ಬೆಳೆದಿದ್ದಾರೆ. ಸಾಂಬಾರು ಪದಾರ್ಥಗಳಾದ ದಾಲ್ಚಿನಿ, ಕಾಳು ಮೆಣಸು, ಜಾಯಿಕಾಯಿ, ಲವಂಗ, ಪತ್ರೆ, ಏಲಕ್ಕಿ ಸಹ ತೋಟದಲ್ಲಿ ಬೆಳೆಸಿದ್ದಾರೆ.

ಹಣ್ಣು, ಕಾಯಿಗಳ ಬಟ್ಟಲು
ಮೀನಾಕ್ಷಿ ಅವರ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ಹಲಸು, ಬೇರ ಹಲಸು, ವೆನಿಲ್ಲಾ, ಮಾವು, ಪಪ್ಪಾಯಿ, ಚಿಕ್ಕು, ಮೊಸಂಬಿ, ಬಡರಫ್ರುಟ್, ನೇರಳೆ, ಕೋಕಮ್, ತೊಂಡೆ, ಬಸಲೆ, ನಾಲಿಗೆ ಸವತೆ, ಮತ್ತಿ ಅವರೆ, ಹಾಲಕುಲಕುಂಬಳಕಾಯಿ, ಅವಟೆ, ಸೀತಾಫಲ. ಗೋಳಿಸೊಪ್ಪು, ಅಂಟವಾಳ, ಅಮಟೆ ಕಾಯಿ ಹೀಗೆ ಪ್ರಕೃತಿಯಲ್ಲಿನ ರುಚಿ ಸವಿಯಲು ಬೇಕಾದ ಎಲ್ಲ ರೀತಿಯ ಹಣ್ಣು, ಕಾಯಿಗಳು ಇವರ ತೋಟದಲ್ಲಿವೆ.

ಚಿತ್ರ, ವಿಡಿಯೊ, ಲೇಖನ:
ಬಸಯ್ಯ ಹಿರೇಮಠ