ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಬಹುವಾರ್ಷಿಕ ತೋಟಗಾರಿಕೆ ಹಣ್ಣಿನ ಬೆಳೆಗಳಾದ ತೆಂಗು, ಮಾವು, ಸಪೋಟ, ಬಾಳೆ, ನುಗ್ಗೆ, ಪಪ್ಪಾಯ, ಗೇರು, ದಾಳಿಂಬೆ, ಹುಣಸೆ, ನೇರಳೆ, ನೆಲ್ಲಿ, ನಿಂಬೆ, ಸೀಬೆ, ಕರಿಬೇವು ಬೆಳೆಗಳ ಪ್ರದೇಶ ವಿಸ್ತರಣೆ, ಗುಲಾಬಿ ಹೊಸ ಪ್ರದೇಶ ವಿಸ್ತರಣೆ ಹಾಗೂ ಮಾವು ಮತ್ತು ತೆಂಗು ತೋಟಗಾರಿಕೆ ಬೆಳೆಗಳ ಪುನಃಶ್ಚೇತನಕ್ಕಾಗಿ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ಈರುಳ್ಳಿ ಶೇಖರಣಾ ಘಟಕಗಳ ಅಭಿವೃದ್ಧಿ:
ಈ ಯೋಜನೆಯಡಿ 10.0 ಟನ್ ಸಾಮಥ್ರ್ಯದ ಈರುಳ್ಳಿ ಶೇಕರಣಾ ಘಟಕಕ್ಕೆ ಫಲಾನುಭವಿಯು ಕನಿಷ್ಠ 1.0 ಎಕರೆ ಪ್ರದೇಶದಲ್ಲಿ ಈರುಳ್ಳಿ ಸಾಗುವಳಿ ಮಾಡುತ್ತಿದ್ದಲ್ಲಿ ಸಹಾಯಧನಕ್ಕೆ ಅರ್ಹರಾಗುತ್ತಾರೆ. ಯೋಜನೆಯಡಿ 10.0 ಟನ್ ಸಾಮಥ್ರ್ಯದ ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕಾಗಿ 1,01,800 ರೂ. ಗಳ ಅಂದಾಜುಪಟ್ಟಿ ಸಿದ್ಧಪಡಿಸಿದ್ದು, 35,000 ರೂ. ಹಾಗೂ 23,606 ರೂ. ಗಳ ಸಹಾಯಧನದೊಂದಿಗೆ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ.

ಮಣ್ಣು, ನೀರು ಸಂರಕ್ಷಣಾ / ಕೊಳವೆ ಬಾವಿ ಮರುಪೂರಣ ಘಟಕ:
ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಳವೆ ಬಾವಿ ಮರುಪೂರಣ ಘಟಕ ಸ್ಥಾಪನೆಗೆ 19,000 ರೂ. ಗಳಿಗೆ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: ಮಾನವ ತ್ಯಾಜ್ಯದಿಂದ ಗೊಬ್ಬರ; 2.5 ಎಕರೆಯಲ್ಲಿ 12 ಲಕ್ಷ ರೂ. ಆದಾಯ

ಸಾರ್ವಜನಿಕ ಸ್ಥಳಗಳಲ್ಲಿ ಪೌಷ್ಠಿಕ ತೋಟಗಳ ನಿರ್ಮಾಣ:
ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆ, ವಸತಿ ಶಾಲೆ, ವಸತಿ ನಿಲಯ, ಅನುದಾನಿತ ವಸತಿ ನಿಲಯಗಳ ಆವರಣದಲ್ಲಿ ಪೋಷಕಾಂಶ ತೋಟ ಅಭಿವೃದ್ಧಿಪಡಿಸಿ ಶಾಲೆಗಳ ಮಧ್ಯಾಹ್ನದ ಬಿಸಿ ಊಟ ಅಥವಾ ವಸತಿ ನಿಲಯಗಳ ಅವಶ್ಯಕತೆ ಸ್ವಲ್ಪ ಮಟ್ಟಿಗೆ ನೀಗಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: ಖರ್ಚಿಲ್ಲದೆ ಹೊಲದಲ್ಲಿ ಬಾವಿ, ಗೊಬ್ಬರ ಗುಂಡಿ, ಬದು ನಿರ್ಮಿಸಿ

ಸರ್ಕಾರದಿಂದ ಕೂಲಿ:
ರೈತರು ಸ್ವಂತ ಜಮೀನಿನಲ್ಲಿ ದುಡಿಮೆ ಮಾಡಿ ಹೊಸ ತೋಟ ಅಭಿವೃದ್ಧಿ ಪಡಿಸಿಕೊಳ್ಳುವುದರ ಜತೆಗೆ ಸರ್ಕಾರದಿಂದ ಕೂಲಿ ಸಹ ಪಡೆಯಬಹುದು. ಮಹಾತ್ಮಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟ ಅಭಿವೃದ್ಧಿಪಡಿಸಿದ ಫಲಾನುಭವಿಗಳಿಗೆ ಹನಿ ನೀರಾವರಿ ಸೌಲಭ್ಯ ಒದಗಿಸುವುದಕ್ಕೂ ಮೊದಲ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: ರೈತ ಆದಾಯ ವೃದ್ಧಿಗೆ ಬಂಪರ್ ಘೋಷಣೆ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಉಪ ನಿರ್ದೇಶಕರು, ತಾಲ್ಲೂಕು ಮಟ್ಟದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಹೋಬಳಿ ಮಟ್ಟದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.