ಹವಾಮಾನಕ್ಕೆ ಅನುಗುಣವಾಗಿ ಕೃಷಿ ಇಲಾಖೆಯ ಅಧಿಕಾರಿಗಳು, ಬೀದರದ ಜನವಾಡಾ ಕೃಷಿ ವಿಜ್ಞಾನ ಕೇಂದ್ರ, ಹಾಗೂ ಬೀದರನ ಕೃಷಿ ಸಂಶೋಧನಾ ಕೇಂದ್ರ ವಿಜ್ಞಾನಿಗಳು ಚರ್ಚಿಸಿ, ಅವಲೋಕಿಸಿ ಸೊಯಾ ಅವರೆ ಹಾಗೂ ಇತರೆ ಬೆಳೆಗಳ ಕುರಿತು ರೈತರಿಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಸೋಯಾ ಅವರೆ ಬಿತ್ತನೆ ಬೀಜದ ಮೊಳಕೆ ಬಗ್ಗೆ ಅನೇಕ ರೈತರು ಗೊಂದಲ ವ್ಯಕ್ತಪಡಿಸಿದ್ದಾರೆ. ಕೆಲವರು ಬೀಜ ಮೊಳಕೆಯೊಡೆಯುತ್ತಿಲ್ಲ ಎನ್ನುವ ದೂರು ಸಹ ಹೇಳಿದ್ದಾರೆ. ಅದೆಲ್ಲದರ ಬಗ್ಗೆ ಮತ್ತು ಹೆಚ್ಚು ಲಾಭ ಪಡೆಯುವ ಬಗ್ಗೆ ತಜ್ಞರು ಸಲಹೆಗಳನ್ನು ನೀಡಿದ್ದಾರೆ.

ಮಳೆಯಾಶ್ರಿತ ಸೋಯಾ ಅವರೆ ಬೆಳೆಯನ್ನು ಜೂನ್ ಮೊದಲನೇ ವಾರದಿಂದ ಜುಲೈ ಮಧ್ಯದವರೆಗೆ ಬಿತ್ತನೆ ಮಾಡಬಹುದು. ಬಹಳಷ್ಟು ರೈತರು ಸೋಯಾ ಅವರೆ ಬೆಳೆಯ ಮೇಲೆ ಅವಲಂಬಿತರಾಗಿ ಒಂದೇ ಬೆಳೆ ಬೆಳೆಯುತ್ತಿರುವುದು ಕಂಡುಬಂದಿದೆ. ಹೆಚ್ಚಿನ ಭದ್ರತೆಗಾಗಿ ಸೋಯಾ ಅವರೆ ಬೆಳೆಯ ಜೊತೆ ಉದ್ದು, ಹೆಸರು, ತೊಗರಿ ಮತ್ತು ಇನ್ನಿತರೆರ ಬೆಳೆಗಳನ್ನು ಮಿಶ್ರ ಅಥವಾ ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ.

ಒಂದು ವೇಳೆ ಜೂನ್ ತಿಂಗಳ ಎರಡನೇ ವಾರ ಹಾಗೂ ಮೂರನೆ ವಾರದಲ್ಲಿ ಮಳೆಯಾದಲ್ಲಿ ತೊಗರಿಯ ಬೆಳೆಯ ಜೊತೆ ಸೋಯಾ ಬದಲಾಗಿ ಉದ್ದು, ಹೆಸರು ಅಂತರ ಬೆಳೆಯಾಗಿ ಬೆಳೆಯಬಹುದು. ಅದರಿಂದ ಹೆಚ್ಚುವರಿ ಲಾಭ ಪಡೆಯಬಹುದಾಗಿದೆ. ಒಂದು ವೇಳೆ ತಡವಾಗಿ (ಜೂನ್ ತಿಂಗಳ ನಾಲ್ಕನೇ ಹಾಗೂ ಜುಲೈ ಮೊದಲನೆ ವಾರ) ಮಳೆಯಾದಲ್ಲಿ ಬೀದರ್ ಭಾಗದವರು ಸೋಯಾ ಅವರೆಯನ್ನು ತೊಗರಿ ಬೆಳೆಯ ಜೊತೆ ಅಂತರ ಬೆಳೆಯಾಗಿ ಬೆಳೆಯುದರಿಂದ ಅಧಿಕ ಲಾಭ ಪಡೆಯಬಹುದು.

ಸೋಯಾ ಅವರೆ ಬಿತ್ತನೆ ಮಾಡಲು ಕನಿಷ್ಠ 80-100 ಮಿ.ಮೀ ಮಳೆಯ ಪ್ರಮಾಣದ ಅವಶ್ಯಕತೆ ಇರುತ್ತದೆ. ಹಸಿ ಮಳೆಯಾದ ನಂತರ ಜಮೀನಿನಲ್ಲಿ ಮಣ್ಣಿನ ತೇವಾಂಶ ಹದ ನೋಡಿಕೊಂಡು ಸೋಯಾ ಅವರೆ ಬೀಜವನ್ನು ಬಿತ್ತನೆ ಮಾಡಬೇಕು.  ಇತರೆ ಬೆಳೆಗಳಿಗೆ 60-70 ಮಿ.ಮೀ. ಮಳೆ ಹಂಚಿಕೆಯಾದಲ್ಲಿ ಬಿತ್ತನೆ ಮಾಡಬಹುದಾಗಿದೆ.

ಇದನ್ನೂ ಓದಿ:

ಮಳೆಯಾಗದ ಪ್ರದೇಶದಲ್ಲಿ, ಮಣ್ಣಿನ ತೇವಾಂಶ ಕೊರತೆ ಇದ್ದಲ್ಲಿ ಸೋಯಾ ಅವರೆ ಬೀಜವನ್ನು ಬಿತ್ತನೆ ಮಾಡಬಾರದು. ಒಂದು ವೇಳೆ ಬಿತ್ತನೆ ಮಾಡಿದ್ದಲ್ಲಿ ಬೀಜ ಮೋಳಕೆಯಾಗದಿರಬಹುದು ಅಥವಾ ಕಡಿಮೆ ಪ್ರಮಾಣದಲ್ಲಿ ಮೊಳಕೆಯಾಗಬಹುದು.

ನೀರಾವರಿ ಪ್ರದೇಶದಲ್ಲಿ ಮೊದಲು ನೀರನ್ನು ಹಾಯಿಸಿ ಮಣ್ಣಿನ ಉಷ್ಣಾಂಶ ಕಡಿಮೆಯಾದ ನಂತರ ತೇವಾಂಶದ ಹದ ನೋಡಿಕೊಂಡು ಬೀಜವನ್ನು ಬಿತ್ತನೆ ಮಾಡುವುದು ಸೂಕ್ತ. ಯಾವುದೇ ಕಾರಣಕ್ಕೂ ಒಣ ಬಿತ್ತನೆ ನೀರನ್ನು ಹಾಯಿಸಬಾರದು. ಇದರಿಂದ ಬೀಜ ಮೊಳಕೆ ಬರುವುದಿಲ್ಲ.

ಮಳೆಯ ಅಭಾವವಿದ್ದಲ್ಲಿ ಹಾಗೂ ನೀರಾವರಿ ಸವಲತ್ತು ಇದ್ದಲ್ಲಿ ತುಂತುರು ನೀರಾವರಿ ಘಟಕದಿಂದ ಮಣ್ಣಿಗೆ ನೀರುಣಿಸಿ ಬಿತ್ತನೆ ಮಾಡಬಹುದು. ಸೋಯಾಅವರೆಯ ಕನಿಷ್ಠ ಮೊಳಕೆ ಪ್ರಮಾಣವನ್ನು ಶೇ.65 ನಿಗದಿಪಡಿಸಲಾಗಿದೆ. ಹಾಗಾಗಿ ಕಡ್ಡಾಯವಾಗಿ ದಟ್ಟವಾಗಿ ಬಿತ್ತನೆ ಮಾಡುವುದು ಸೂಕ್ತ.

ಎತ್ತಿನ ಕೂರಿಗೆ ಉತ್ತಮ:
ಸಾಧ್ಯವಾದಷ್ಟು ಎತ್ತಿನ ಕೂರಿಗೆ ಉಪಯೋಗಿಸಿಕೊಂಡು ಬಿತ್ತನೆ ಮಾಡುವುದರಿಂದ ಬಿತ್ತನೆ ಬೀಜವು 3 ಇಂಚಿಗಿಂತಲೂ ಕೆಳಗಡೆ ಹೋಗದೆ ಸರಿಯಾದ ರೀತಿಯಲ್ಲಿ ಮೊಳಕೆ ಪ್ರಮಾಣ ಕಾಣಬಹುದಾಗಿದೆ.  ಟ್ರ್ಯಾಕ್ಟರ್ ಕೂರಿಗೆ ಉಪಯೋಗಿಸಿದಲ್ಲಿ ಬಿತ್ತನೆ ಬೀಜವು ಮಣ್ಣಿನಲ್ಲಿ 3 ಇಂಚಿಗಿಂತಲೂ ಆಳ ಹೊಗದಂತೆ ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಮೊಳಕೆ ಪ್ರಮಾಣ ಕುಂಠಿತಗೊಳ್ಳವ ಸಾಧ್ಯತೆ ಇದೆ. 

ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಿದ ಅಥವಾ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಖರೀದಿಸಿದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಬೀಜದ ಮೊಳಕೆ ಪ್ರಮಾಣವನ್ನು ಶೇ. 65ಕ್ಕಿಂತ ಹೆಚ್ಚಿರುವುದನ್ನು ಖಾತರಿಪಡಿಸಿಕೊಂಡು ಬಿತ್ತನೆ ಮಾಡುವುದು ಸೂಕ್ತ. ಬೀದರ ಜಿಲ್ಲೆಗೆ ಜೆ.ಎಸ್.335 ಹಾಗೂ ಡಿ.ಎಸ್.ಬಿ-21 ಸೊಯಾ ತಳಿಗಳನ್ನು ಬೆಳೆಯುವುದು ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ.

ಮಾಹಿತಿ: ವಾರ್ತಾ ಇಲಾಖೆ