ಇದು ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಸಿರ್ಸಿಗೆ ಹಿರಿಯ ಪಶುವೈದ್ಯ ಮಿತ್ರರಾದ ಡಾ: ಪಿ.ಎಸ್. ಹೆಗಡೆಯವರ ಕೋರಿಕೆಯಂತೆ  ಜಾನುವಾರುಗಳ ರೋಗ ತಪಾಸಣೆಗೆ ಹೋಗಿದ್ದೆ. ಸಿರ್ಸಿಗೆ ಹೋದಾಗ ಅವರ ಅತ್ಮೀಯ ಕರೆಗೆ ಓಗೊಟ್ಟು ಅವರ ಮನೆಗೆ ಹೋಗಿ “ಆಸ್ರಿಗೆ” ಮೆಲ್ಲುವುದು ನಮ್ಮ ಅದೃಷ್ಠ. ಅವರ ಅಮ್ಮನನ್ನು ನಾವೆಲ್ಲ  ಬಹಳ ಕಕ್ಕುಲತೆಯಿಂದ ಕರೆಯುವುದು “ಆಯಿ”  ಎಂದು. ಪಮ್ಮಣ್ಣ (ಅವರ ಮಗ ಪರಮೇಶ್ವರ) ಕರೆ ತರುವ ಅತಿಥಿಗಳಿಗೆಲ್ಲ ಸೊಸೆಯ ಜೊತೆ ಗೂಡಿ ವಿವಿಧ ಹವ್ಯಕ ಖಾಧ್ಯಗಳನ್ನು ಉಣಬಡಿಸದೇ ಇದ್ದರೆ ಅವರಿಗೆ ನೆಮ್ಮದಿ ಇಲ್ಲ. 
ಅವರ ಮನೆಗೆ ಹೋದಾಗ ಆಯಿ ಮತ್ತು ಅವರ ಸೊಸೆ ನೀಡುವ ತೆಳ್ಳವ್ವು ದೋಸೆ, ಅಕ್ಕಿ ರೊಟ್ಟಿ , ತೆಂಗಿನ ಕಾಯಿ ಚಟ್ನಿ, ಮಾವಿನ ಕಾಯಿಯ ನೀರು ಗೊಜ್ಜು, ಹವ್ಯಕರ ಬ್ರಾಂಡ್ ತಂಬಳಿ ತಿನ್ನದೇ ಬಂದಿದ್ದೇ ಇಲ್ಲ. ಅದರಲ್ಲೂ ಈ ತೆಳ್ಳವ್ವು ದೋಸೆ ಎಂದರೆ ಬಹಳ ಸಿಂಪಲ್ ಆದ್ರೂ ಬಹಳ ರುಚಿ.

ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ನೀರಿನ ಸಾಂದ್ರದ ದೋಸೆ ಹಿಟ್ಟನ್ನು ಬಿಸಿ ಕಾವಲಿಯ ಮೇಲೆ ಒಂಥರಾ ರಜನಿಕಾಂತ್  ಸ್ಟೈಲಿನಲ್ಲಿ ಅಡಸಾ ಬಡಸಾ ಎರೆದರೆ ಆಗುವುದೇ “ತೆಳ್ಳವ್ವು” ದೋಸೆ. ಬಹಳ ಸಿಂಪಲ್ ಆದ್ರೂ ಬದನೆಕಾಯಿ ಬಜ್ಜಿ ಜೊತೆ ಇದರ ಕಾಂಬಿನೇಷನ್ ಸುಪರ್… ಒಂದು ಹತ್ತು ದೋಸೆ ಮೆದ್ದು   ಕೈತೊಳೆಯಲು ಹಿತ್ತಲ ಕಡೆಗೆ ಹೋದಾಗ ಕಾಣಿಸಿದ್ದು ನನ್ನ ಖಳ ನಾಯಕ  “ಚಪ್ಪರ ಅವರೆ” ಗಿಡ. ಅಲ್ಪ ಸ್ವಲ್ಪ ಕಾಯಿಗಳನ್ನು ಹೊಂದಿದ್ದ ಆ ಗಿಡ ನೋಡಿ ನಾನು  “ ಆಯಿ.. ಈ ಗಿಡ ವಿಷ ದನಕ್ಕೆ ಮಾತ್ರ ಹಾಕಬೇಡಿ ಅಂದೆ. ಹೌದೇ.. ಗೊತ್ತಿಲ್ಲವಾಗಿತ್ತು ನೋಡಿ” ಅಂದರು.

ಅವರೆ ಕಾಯಿಗಳು

ಇದಾದ ಸ್ವಲ್ಪ ದಿನಗಳ ಮೇಲೆ ಅವರ ಮನೆ ಆಳು ಆ ಚಪ್ಪರೆ ಗಿಡ ಕಡಿದು ಗೊಬ್ಬರ ಗುಂಡಿಗೆ ಹಾಕುವ ಬದಲಾಗಿ ದನ ಆಸೆ ಪಟ್ಟುಕೊಂಡು ತಿನ್ನುತ್ತಾವೆ ಎಂದು ದನಗಳಿಗೆ ನೀಡಿದನಂತೆ. ಬಡಪಾಯಿ ದನಗಳು ಪಮ್ಮಣ್ಣ ಬಂದು ಚಿಕಿತ್ಸೆ ನೀಡುವುದರೊಳಗೆ ಶಿವನ ಪಾದ ಸೇರಿದವಂತೆ. ಆಯಿ “ಅಯ್ಯೋ ನಾನೆ ಕೈಯಾರೆ ದನ ಸಾಯಿಸ್ ಬಿಟ್ಟೆ” ಎಂದು ಅಲವತ್ತುಕೊಳ್ಳುತ್ತಾರೆ.
ನಿಜ. ಈ ಚಪ್ಪರೆ ಅವರೆ ಗಿಡವನ್ನು ಜಾನುವಾರುಗಳಿಗೆ ಉಣಬಡಿಸಿ ಅನೇಕರು ಅವರ ಜಾನುವಾರುಗಳ ಜೀವ ಕಳೆದಿದ್ದಾರೆ. ಚಪ್ಪರ ಅವರೆ ಎಲ್ಲರ ಮನೆಯ ಮುಂದೆ ಚಿಕ್ಕ ಚಪ್ಪರದ ಮೇಲೆ ಬೆಳೆಯಬಹುದಾದ ಅವರೆ ಕಾಯಿ ಬಿಡುವ ಒಂದು ಬಗೆಯ ಬಳ್ಳಿ. ದಕ್ಷಿಣ ಕರ್ನಾಟಕದ ಬಹುತೇಕ ರೈತರ ಮನೆಗಳಲ್ಲಿ ರುಚಿಕರವಾದ ಅವರೆ ಕಾಯಿ ಅಥವಾ ಅವರೆ ಬೀಜವನ್ನು ಪಡೆಯಲು ಜನರು ಇದನ್ನು ಬೆಳೆದೇ ಬೆಳೆಯುತ್ತಾರೆ.
ಇದನ್ನು ಚಪ್ಪರ ಅವರೆ, ತಿಂಗಳ ಅವರೆ, ಬೇಸಿಗೆ ಅವರೆ ಅಥವಾ ಬತ್ತವರೆ ಎಂದು ಕರೆಯುತ್ತಾರೆ. ಎಲೆಯಾಕಾರ, ಹೂವಿನ ಬಣ್ಣ, ಕಾಯಿಯ ವಿನ್ಯಾಸ ಬಳ್ಳಿಯ ಎತ್ತರ ಇತ್ಯಾದಿಗಳನ್ನಾದರಿಸಿ ವಿವಿಧ ಬಗೆಯ ಚಪ್ಪರ ಅವರೆಯ ಪ್ರಬೇಧಗಳಿವೆ. ಸಾಮಾನ್ಯವಾಗಿ ಚಪ್ಪರ ಅವರೆ ಕಾಯಿಯನ್ನು ಕಿತ್ತ ನಂತರ ರೈತರು ಚಪ್ಪರ ಅವರೆ ಬಳ್ಳಿಯನ್ನು ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಾರೆ. ಒಂದು ವಯಸ್ಕ ಜಾನುವಾರು ಸುಮಾರು 2-3 ಕೆ.ಜಿ. ಯಾಗುವಷ್ಟು ಚಪ್ಪರ ಅವರೆ ಗಿಡವನ್ನು ತಿಂದರೆ ಕೇವಲ 1-2 ಗಂಟೆ ಅವಧಿಯಲ್ಲಿ ಸಾವನ್ನಪ್ಪುತ್ತದೆ. ಕಾರಣ ಚಪ್ಪರ ಅವರೆ ಜಾನುವಾರುಗಳಿಗೆ ಅತ್ಯಂತ ವಿಷಕಾರಿ ಗಿಡ.

ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಇದು ಪೂರ್ತಿ ವಿಷವಲ್ಲ
ವಿಚಿತ್ರವೆಂಬ೦ತೆ ಇದು ಎಲ್ಲ ಕಾಲದಲ್ಲೂ ವಿಷಕಾರಿಯಲ್ಲ. ಹೂವಾಡುವಾಗ ಮತ್ತು ಎಳೆ  ಕಾಯಿಗಳು ಬಿಟ್ಟಾಗ ಇದು ಮುಸುಕಿನ ಜೋಳದಂತೆ ಅತೀ ವಿಷಕಾರಿ. ಒಂದೊ೦ದು ಭೌಗೋಳಿಕ ವಾತಾವರಣಕ್ಕೆ ಸಂಬ೦ಧಿಸಿದ೦ತೆ ಹೂ ಮತ್ತು ಕಾಯಿ ಬಿಡುವ ಸಮಯದಲ್ಲಿ ಚಪ್ಪರ ಅವರೆ ಗಿಡಗಳು ಸಯನೈಡ್ ಎಂಬ ವಿಷದ ಅಂಶವನ್ನು ಹೊಂದಿರುತ್ತವೆ. ಹೆಸರೇ ಹೇಳುವ ಹಾಗೆ ಸಯನೈಡ್ ಅತ್ಯಂತ ವಿಷಕಾರಿ. ಇದು ಪ್ರಾಣಿಯ ಆಹಾರದ ಚೀಲವನ್ನು ಸೇರಿದಾಗ ಅದರಲ್ಲಿರುವ ಕಿಣ್ವಗಳ ಪ್ರಭಾವದಿಂದ ಹೈಡ್ರೋಸೈನಿಕ್  ಆಮ್ಲ ಎಂಬ ವಿಷಕಾರಿ ವಸ್ತುವಾಗಿ ಪರಿವರ್ತನೆ ಹೊಂದುತ್ತವೆ.

ಈ ವಿಷಕಾರಿ ಸಯನೈಡು  ರಕ್ತವನ್ನು ಸೇರಿದಾಗ ಎಲ್ಲಾ ಜೀವಕೋಶಗಳ ಆಮ್ಲ ಜನಕ ಪೂರೈಕೆ ಹಾಗೂ ಬಳಕೆ ವ್ಯವಸ್ಥೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದ ಏಕಕಾಲದಲ್ಲಿ ಎಲ್ಲಾ ಜೀವಕೋಶಗಳೂ ಆಮ್ಲಜನಕದ ಕೊರತೆಯಿಂದ ಬಳಲಿ ತಮ್ಮ ಕೆಲಸವನ್ನು ನಿಲ್ಲಿಸಿಬಿಡುತ್ತವೆ. ರಕ್ತಕಣಗಳಲ್ಲಿ ಸಾಕಷ್ಟು ಆಮ್ಲಜನಕವು ಶೇಖರವಾಗಿದ್ದರೂ ಸಹ ಈ ಆಮ್ಲಜನಕವನ್ನು ದೇಹದ ಯಾವುದೇ ಜೀವಕೋಶಗಳು ಬಳಸಲಾಗುವುದಿಲ್ಲ.
ಅದರಲ್ಲೂ ಮುಖ್ಯವಾಗಿ ಕೇಂದ್ರ ನರಮಂಡಲದ ಜೀವಕೋಶಗಳಿಗೆ ಆಮ್ಲಜನಕವು ಅತೀ ಅವಶ್ಯ. ಕೆಲವೇ ಕ್ಷಣಗಳು ಆಮ್ಲಜನಕವಿಲ್ಲದಿದ್ದರೂ ಸಹ ಕೇಂದ್ರ ನರ ಮಂಡಲದ ಜೀವಕೋಶಗಳು ತಮ್ಮ ಕಾರ್ಯವನ್ನೇ ನಿಲ್ಲಿಸಿಬಿಡುತ್ತವೆ. ಇದರಿಂದ ಸಾವು ಅತೀ ಶೀಘ್ರವಾಗಿ ಸಂಭವಿಸುತ್ತದೆ. ಚಪ್ಪರ ಅವರೆ ಗಿಡವನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದಾಗ ಅಥವಾ ಚಪ್ಪರ ಅವರೆ ಗಿಡದಲ್ಲಿರುವ ಸಯನೈಡ್ ಅಂಶ ಕಡಿಮೆ ಇದ್ದಾಗ ದೇಹದ ಆಮ್ಲಜನಕ ಬಳಕೆ ಕಡಿಮೆಯಾಗಿ ಶ್ವಾಸೋಚ್ವಾಸಗಳು ಜಾಸ್ತಿಯಾಗುತ್ತದೆ.
ಜಾನುವಾರಿಗೆ ಹೊಟ್ಟೆ ಉಬ್ಬರ ಬಂದು ಒದ್ದಾಡಲು ಪ್ರಾರಂಭಿಸುತ್ತದೆ. ಉಸಿರಾಟಕ್ಕೆ ತೀವ್ರತರವಾದ ತೊಂದರೆ ಉಂಟಾಗಿ ಜಾನುವಾರು ಬಾಯಿಯಿಂದ ಶ್ವಾಸೋಚ್ವಾಸ ಮಾಡಲು ಪ್ರಾರಂಭಿಸುತ್ತದೆ. ಇದಾದ ಸ್ವಲ್ಪ ಹೊತ್ತಿನ ನಂತರ ಬಾಯಿ ಹಾಗೂ ಕಣ್ಣಿನಿಂದ ನೀರು ಬರುವುದು ಪ್ರಾರಂಭವಾಗಿ ನಂತರ ತೀವ್ರತರವಾದ ಒದ್ದಾಟ ಶುರುವಾಗುತ್ತದೆ. ಲಕ್ಷಣಗಳು ಶುರುವಾಗಿ 2-3 ಗಂಟೆಯೊಳಗೆ ಜಾನುವಾರು ಮರಣ ಹೊಂದುತ್ತದೆ.

ಹೆಚ್ಚಿನ ಪ್ರಮಾಣದ ಚಪ್ಪರ ಅವರೆ ತಿಂದಾಗ ಬಹಳಷ್ಟು ಸಂದರ್ಭದಲ್ಲಿ ತಜ್ಞ ಪಶುವೈದ್ಯರು ಚಿಕಿತ್ಸೆ ಕೊಡುವುದರೊಳಗೆ ಜಾನುವಾರು ಜೀವ ಬಿಡುತ್ತವೆ. ಅದಕ್ಕೆ ಪಮ್ಮಣ್ಣ ಓಡೋಡಿ ಬಂದರೂ ಆಯಿಯ ದನಗಳ ಪ್ರಾಣ ಉಳಿಸಲು ಸಾಧ್ಯವಾಗದ್ದೇ ಇದ್ದದ್ದು. ಹಾಗೆಂದು ಚಪ್ಪರೆ ಅವರೆಯ ಕಾಯಿಯ ಸೊಗಡು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದರಲ್ಲಿ ವಿಷದ ಅಂಶ ಸ್ವಲ್ಪವೂ ಇರುವುದಿಲ್ಲ. ಆರಾಮವಾಗಿ ಮೆಲ್ಲಬಹುದು.

ಇದನ್ನೂ ಓದಿ: ಕನ್ನಡ ನೆಲದಲ್ಲಿ ಅಣ್ಣಾ ಹಜಾರೆ ತವರಿನ ಜೋಳದ ಕಮಾಲ್

ಕಾಪಾಡುವ ಉಪಾಯವೇನು?
ಸಾಮಾನ್ಯವಾಗಿ ಸಸ್ಯ ಜನ್ಯ ವಿಷಬಾಧೆಯಲ್ಲಿ ಹುಳಿ ಮಜ್ಜಿಗೆ ಅಥವಾ ಹುಣಸೆ ಹಣ್ಣನ್ನು ಪ್ರಥಮ ಉಪಚಾರವಾಗಿ ನೀಡುವುದು ವಾಡಿಕೆ, ಆದರೆ ಚಪ್ಪರ ಅವರೆ ವಿಷಬಾಧೆಯಲ್ಲಿ ಕಂಡಿತ ಕೊಡಬಾರದು. ಏಕೆಂದರೆ ಚಪ್ಪರ ಅವರೆಯಲ್ಲಿ ಸಯನೋಜನಿಕ್ ಗ್ಲೈಕೋಸೈಡ್ ರೂಪದಲ್ಲಿರುವ ಸಯನೈಡ್ ಅಂಶವು ಹುಳಿ ಅಥವಾ ಆಮ್ಲದ ಸಂಪರ್ಕಕ್ಕೆ ಬಂದಾಗ ಅತಿ ಶೀಘ್ರವಾಗಿ ಹೈಡ್ರೋಸೈನಿಕ್ ಆಮ್ಲವಾಗಿ ಪರಿವರ್ತನೆಗೊಂಡು ವಿಷಬಾಧೆ ಉಲ್ಬಣಗೊಳ್ಳುತ್ತದೆ.
ಇಂತಹ ಸಂದರ್ಭದಲ್ಲಿ ಜಾನುವಾರಿಗೆ ಸ್ವಲ್ಪ ಪ್ರಮಾಣದ  ಅಡುಗೆ ಸೋಡಾವನ್ನು ಕೊಡಬಹುದು. ಜಾನುವಾರು ನೀರು ಕುಡಿಯುವ ಸ್ಥಿತಿಯಲ್ಲಿದ್ದರೆ ತಂಪಾದ ನೀರನ್ನು ತುಂಬಾ ಸಾವಧಾನದಿಂದ ಕುಡಿಸಬಹುದು.

ಚಪ್ಪರ ಅವರೆ ಸೊಪ್ಪು ತಿಂದು ಪ್ರಾಣ ಬಿಟ್ಟು ಹಸುಗಳು

ತಜ್ಞ ಪಶುವೈದ್ಯರು ಚಪ್ಪರ ಅವರೆ ವಿಷಬಾಧೆಯನ್ನು ಸೋಡಿಯಂ ಥಯೋಸಲ್ಫೇಟ್ ಎಂಬ ರಾಸಾಯನಿಕವನ್ನು ಸೂಕ್ತ ಪ್ರಮಾಣದಲ್ಲಿ ರಕ್ತನಾಳಕ್ಕೆ ನೀಡಿ ಜಾನುವಾರನ್ನು ಬದುಕಿಸಬಲ್ಲರು. ಆದರೆ ಈ ವಿಷ ಬಾಧೆಯು ಬಹಳ ತೀವೃತರವಾಗಿರುವುದರಿಂದ ಅವರಿಗೆ ಅತೀ ಶೀಘ್ರವಾಗಿ ತಿಳಿಸಿ ಬಹಳ ಬೇಗ ಚಿಕಿತ್ಸೆ ನೀಡುವುದು ಒಳ್ಳೆಯದು. ಈ ವಿಷಬಾಧೆ ಪತ್ತೆ ಹಚ್ಚುವಷ್ಟರಲ್ಲಿಯೇ ಜಾನುವಾರು ಅನೇಕ ಸಲ ಮರಣವನ್ನಪ್ಪುತ್ತವೆ. ಕಾರಣ ರೈತರು ಚಪ್ಪರೆ ಅವರೆ ತಿಂದ ಬಗ್ಗೆ ಪಶುವೈದ್ಯರಿಗೆ ಮೊದಲೇ ತಿಳಿಸಿದಲ್ಲಿ ಅವರು ಸೂಕ್ತ ಔಷಧ ನೀಡುವಲ್ಲಿ ಸಹಕಾರಿಯಾಗುತ್ತದೆ.

ಇದನ್ನೂ ಓದಿ: ಕೂದಲು ಕಪ್ಪಾಗಬೇಕ? ಕರಿಬೇವಿನಲ್ಲಿದೆ ಆರೋಗ್ಯದ ಗುಟ್ಟು

ರೈತರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಎಂದರೆ ಯಾವುದೇ ಕಾರಣಕ್ಕೂ ಚಪ್ಪರ ಅವರೆ ಗಿಡವನ್ನು ಜಾನುವಾರಿಗೆ ಆಹಾರವಾಗಿ ಬಳಸಬಾರದು ಅಥವಾ ಆಕಸ್ಮಿಕವಾಗಿ ತಿನ್ನಲು ಬಿಡಬಾರದು. ಅವರೆ ಕಾಯಿಯನ್ನು ಬಿಡಿಸಿಕೊಂಡ ನಂತರ ಜಾನುವಾರಿಗೆ ಸಿಗದ ಹಾಗೆ ಗೊಬ್ಬರ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡಬೇಕು. ಈ ಗಿಡವು ಜಾನುವಾರುಗಳಿಗೆ ತಿನ್ನಲು ಬಹು ರುಚಿಯಾದರೂ ಸಹ ಅವುಗಳನ್ನು ಯಮಲೋಕಕ್ಕೆ ಸುಲಭವಾಗಿ ಅಟ್ಟಿಬಿಡಬಹುದು. ಆದ್ದರಿಂದ ಈ ಬಗೆಗೆ ಎಚ್ಚರ ವಹಿಸುವುದು ಒಳ್ಳೆಯದು.

ಚಿತ್ರ ಲೇಖನ: ಡಾ. ಎನ್.ಬಿ.ಶ್ರೀಧರ,
ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಮುಖ್ಯಸ್ಥರು. KVAFSU, ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗ.