ಉಚಿತವಾಗಿ ತೋಟ ಮಾಡುವುದಲ್ಲದೆ, ನಮ್ಮದೇ ಹೊದಲ್ಲಿ ದುಡಿದಿದ್ದಕ್ಕೆ ಹಣವೂ ಸಿಕ್ಕರೆ ಯಾರಿಗೆ ತಾನೇ ಬೇಡ. ತೋಟಗಾರಿಕೆ ಇಲಾಖೆ ಮತ್ತು ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ದಡಿ ಇಂಥದ್ದೊಂದು ವ್ಯವಸ್ಥೆ ಜಾರಿಯಲ್ಲಿದೆ.

ರೈತರು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಖರ್ಚಿಲ್ಲದೆ ತೆಂಗು, ಅಡಿಕೆ, ಗೇರು, ಕೋಕೋ, ಕಾಳುಮೆಣಸು, ಅಂಗಾಂಶ ಬಾಳೆ, ಮಾವು, ಸಪೋಟ, ಅಡಿಕೆ, ವೀಳ್ಯೆದೆಲೆ ಹೀಗೆ ಇನ್ನಿತರ ಬೆಳೆಗಳ ತೋಟ ಬೆಳೆಸಬಹುದು. ಅಲ್ಲದೆ, ತಮ್ಮ ಹೊಲದಲ್ಲಿ ತಾವೇ ಮಾಡಿದ ದುಡಿಮೆಗೂ ಹಣ ಪಡೆಯಬಹುದು.

ಅದಕ್ಕೆ ರೈತರು ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕು. ಹಾಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  2020-21ನೇ ಸಾಲಿನಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ವಿವಿಧ ಕೆಲಸ ಕೈಗೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯ ಉದ್ದೇಶ:
ತೋಟಗಾರಿಕೆಯಡಿ ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ತೆಂಗು, ಗೇರು, ಕೋಕೋ, ಕಾಳುಮೆಣಸು, ಅಂಗಾಂಶ ಬಾಳೆ, ಮಾವು, ಸಪೋಟ, ಅಡಿಕೆ, ವೀಳ್ಯೆದೆಲೆ, ಇನ್ನಿತರೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಗೇರು, ತೆಂಗು, ಹಾಗೂ ಅಡಿಕೆ ತೋಟಗಳ ಪುನಶ್ಚೇತನ ನೀಡಲಾಗುತ್ತದೆ.

ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಆಸ್ತಿಗಳ ಸೃಜನೆ ಮಾಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ರೂ. 275 ಕೂಲಿ ಕೂಡ ನೀಡಲಾಗುತ್ತದೆ.

ಫಲಾನುಭವಿಗಳ ಅರ್ಹತೆ:
ಬಿಪಿಎಲ್ ಕಾರ್ಡ್ ಹೊಂದಿರುವ ರೈತರು, ಅಂಗವಿಕಲ ರೈತರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ರೈತರು, ಸ್ತ್ರೀ ಪ್ರಧಾನ ಕುಟುಂಬದ ರೈತರು,  ಭೂ ಸುಧಾರಣೆ ಫಲಾನುಭವಿಗಳು, ಸಣ್ಣ ರೈತರು ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು. ರೈತರು ಸ್ವಂತ ಜಮೀನು ಹೊಂದಿರಬೇಕು ಹಾಗೂ  ಉದ್ಯೋಗ ಚೀಟಿ ಹೊಂದಿರಬೇಕು.

ತೋಟಗಾರಿಕೆ ಬೆಳೆಗಳ ಅಂದಾಜು ಮೊತ್ತ (1 ಹೆಕ್ಟೆರ್‍ಗೆ):
ತೆಂಗು ಬೆಳೆ ಪ್ರದೇಶ ವಿಸ್ತರಣೆಗೆ 177 ಮಾನವದಿನಗಳ ಕೆಲಸ ಪಡೆಯಬಹುದು. 123 ಗಿಡಗಳನ್ನು ನಡೆಬಹುದು. ನರೇಗಾದಡಿ ರೂ. 66,480 ವಿನಿಯೋಗಿಸುವ ಅವಕಾಶ ಇದೆ.
ಗೇರುಬೆಳೆ ಪ್ರದೇಶ ವಿಸ್ತರಣೆ: ಗಿಡಗಳ ಸಂಖ್ಯೆ-277, ನರೇಗಾ ವೆಚ್ಚ ರೂ. 76,017 ಮತ್ತು 180 ಮಾನವ ದಿನಗಳ ಕೆಲಸ ಪಡೆಯಬಹುದು.
ಕೋಕೋ ಬೆಳೆ ಪ್ರದೇಶ ವಿಸ್ತರಣೆ: ಗಿಡಗಳ ಸಂಖ್ಯೆ-685, ನರೇಗಾ ವೆಚ್ಚ ರೂ. 2,28,485, ಮಾನವ ದಿನಗಳು-658.

ಕಾಳುಮೆಣಸು ಬೆಳೆ ಪ್ರದೇಶ ವಿಸ್ತರಣೆ: ಗಿಡಗಳ ಸಂಖ್ಯೆ-1370, ನರೇಗಾ ವೆಚ್ಚ ರೂ. 1,18,501, ಮಾನವ ದಿನಗಳು-297.
ಅಂಗಾಂಶ ಬಾಳೆ ಬೆಳೆ ಪ್ರದೇಶ ವಿಸ್ತರಣೆ:  ಗಿಡಗಳ ಸಂಖ್ಯೆ-3000, ನರೇಗಾ ವೆಚ್ಚ ರು. 2,22,644, ಮಾನವ ದಿನಗಳು-503.
ಅಡಿಕೆ ಬೆಳೆ ಪ್ರದೇಶ ವಿಸ್ತರಣೆ: ಗಿಡಗಳ ಸಂಖ್ಯೆ-1370, ನರೇಗಾ ವೆಚ್ಚ ರೂ. 2,58,961, ಮಾನವ ದಿನಗಳು-787.
ತೆಂಗು ಬೆಳೆ ಪುನಶ್ಚೇತನ (ಎತ್ತರ ತಳಿ): ಗಿಡಗಳ ಸಂಖ್ಯೆ-123,  ನರೇಗಾ ವೆಚ್ಚ ರೂ. 42,261, ಮಾನವ ದಿನಗಳು-125.
ತೆಂಗು ಬೆಳೆ ಪುನಶ್ಚೇತನ (ಗಿಡ್ಡ ತಳಿ): ಗಿಡಗಳ ಸಂಖ್ಯೆ-123, ನರೇಗಾ ವೆಚ್ಚ ರೂ. 43,044, ಸೃಜಿಸುವ ಮಾನವ ದಿನಗಳು-125.

ಗೇರು ಬೆಳೆ ಪುನಶ್ಚೇತನ: ಗಿಡಗಳ ಸಂಖ್ಯೆ-150, ನರೇಗಾ ವೆಚ್ಚ ರೂ. 60368, ಮಾನವ ದಿನಗಳು-130.
ಅಡಿಕೆ ಬೆಳೆ ಪುನಶ್ಚೇತನ (25% ಮರುನಾಟಿ): ಗಿಡಗಳ ಸಂಖ್ಯೆ-1370, ನರೇಗಾ ವೆಚ್ಚ ರೂ. 78947, ಮಾನವ ದಿನಗಳು-212.
ಅಡಿಕೆ ಬೆಳೆ ಪುನಶ್ಚೇತನ (50% ಮರುನಾಟಿ): ಗಿಡಗಳ ಸಂಖ್ಯೆ-1370, ನರೇಗಾ ವೆಚ್ಚ ರೂ. 148819, ಮಾನವ ದಿನಗಳು-404.

ಅರ್ಜಿಗಳೊಂದಿಗೆ ಸಲ್ಲಿಸಬೇಕಾಗಿರುವ ದಾಖಲಾತಿಗಳು: ಜಾಬ್ ಕಾರ್ಡ್, ಆರ್.ಟಿ.ಸಿ., ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ.

ಎಲ್ಲಿ ಸಿಗುತ್ತದೆ ಗಿಡಗಳು:
ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯಗಳ ನರ್ಸರಿಗಳಲ್ಲಿ ಗಿಡಗಳ ಲಭ್ಯತೆ ಇರುತ್ತದೆ. ತೋಟಗಾರಿಕೆ ಇಲಾಖೆಯ ಇತರೆ ಯೋಜನೆಗಳಡಿ ಸಹಾಯಧನ ಪಡೆಯದ ರೈತರು ಈ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಬಹುದು. ಈ ಯೋಜನೆ ಗ್ರಾಮ ಪಂಚಾಯತ್ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಆಸಕ್ತರು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು. ತೋಟಗಾರಿಕೆ ಇಲಾಖೆ ಬೆಂಗಳೂರು ಕಚೇರಿಯ ದೂರವಾಣಿ ಸಂಖ್ಯೆ 080- 22253751- 22033413, 22353939, 22353878, 22032226, 22032101, 22032172​.