ರಾಜ್ಯದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಸುಕಿನ ಜೋಳದ (ಮೆಕ್ಕೆಜೋಳ) ಬಿತ್ತನೆ ಪ್ರಾರಂಭವಾಗಿದೆ. ಮುಸುಕಿನ ಜೋಳ ರಾಜ್ಯದಲ್ಲಿ ಬಹು ಬೇಡಿಕೆ ಇರುವ ಬೆಳೆ. ಆದರೆ ಈ ಬೆಳೆಗೆ ಆರಂಭದಲ್ಲಿಯೇ ಅಲ್ಲಲ್ಲಿ ಲದ್ದಿ ಹುಳುವಿನ ಬಾದೆ ಕಂಡುಬಂದಿದೆ.

ಲದ್ದಿ ಹುಳು ಅಥವಾ ಸೈನಿಕ ಹುಳು ಎಂಬ ಹೆಸರಿನ ಈ ಹುಳುವಿನ ಬಾದೆಯು ಹಿಂದಿನ ವರ್ಷವು ಕಂಡುಬಂದಿತ್ತು. ಆಗಲೂ ಕೀಟನಾಶಕಗಳನ್ನು ಬಳಸಾಗಿತ್ತು. ಆದರೆ, ಬಹುತೇಕ ರೈತರು ಕೀಟ ನಾಶಕಗಳ ಸಿಂಪಡಣೆ ಹೊರತಾಗಿಯೂ ಬೆಳೆ ನಷ್ಟ ಅನುಭವಿಸಿದ್ದರು.

ಅದಕ್ಕೆ ಕಾರಣ ಕೀಟ ನಾಶಕಗಳ ಬಳಕೆ ಬಗ್ಗೆ ಗೊಂದಲ. ಬೇಸಾಯದ ಆರಂಭದಲ್ಲಿ ಮಾಡುವ ಸಣ್ಣ ತಪ್ಪುಗಳು. ಬೆಸಾಯದ ಆರಂಭದಲ್ಲಿಯೇ ಒಂದಷ್ಟು ಮುಂಜಾಗೃತೆ ಕ್ರಮ ಗಳನ್ನು ಕೈಗೊಂಡರೆ ನಂತರ ಬೆಳೆಗಳನ್ನು ಉಳಿಸಿಕೊಳ್ಳಲು ಅನಗತ್ಯ ಹೆಣಗಾಡುವುದು ತಪ್ಪಿಸಬಹುದು.

ಅದು ಹೇಗೆ, ಲದ್ದಿ ಹುಳು ನಾಶಕ್ಕೆ ಏನು ಮಾಡಬೇಕು ಎನ್ನುವ ಬಗ್ಗೆ ಕೀಟಶಾಸ್ತ್ರ ತಜ್ಞರಾದ ಡಾ. ಬಸವರಾಜ್ ರವರು ಸಲಹೆಗಳನ್ನು ನೀಡಿದ್ದಾರೆ.

ಓದಿ: ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ: ಕಾರ್ಡ್ ಪಡೆಯುವುದು ಹೇಗೆ?

ಸಾಗುವಳಿ ಕ್ರಮಗಳು:
ಬಿತ್ತನೆಗೆ ಮೊದಲು ಆಳವಾದ ಉಳುಮೆ ಮಾಡುವುದರಿಂದ ಫಾಲ್ ಸೈನಿಕ ಹುಳುವಿನ ಕೋಶಗಳು ಪರಭಕ್ಷಕಗಳಿಗೆ ಸುಲಭವಾಗಿ ದೊರೆಯುತ್ತವೆ. ಎಲ್ಲರೂ ಸಕಾಲದಲ್ಲಿ ಬಿತ್ತನೆ ಮಾಡಿದರೆ, ಕೀಟನಾಶಕಗಳ ಸಿಂಪರಣೆ ಏಕಕಾಲದಲ್ಲಿ ಮಾಡಬಹುದು.

ಆಯಾ ಪ್ರದೇಶಗಳಿಗೆ ಸೂಕ್ತವಾಗುವಂತೆ ಮುಸುಕಿನಜೋಳದ ಜೊತೆಗೆ ಮಿಶ್ರ ಬೆಳೆ ಪದ್ಧತಿ (ಮುಸುಕಿನ ಜೋಳ+ತೊಗರಿ/ಹೆಸರು/ಉದ್ದು) ಅನುಸರಿಸುವುದರಿಂದ ಭೂಮಿಯ ಫಲವತ್ತತ್ತೆ ಹೆಚ್ಚುತ್ತದೆ. ಸಮತೋಲನ ರಾಸಾಯನಿಕ ಗೊಬ್ಬರ ಬಳಸುವುದು. ಸ್ವಚ್ಚ ಸಾಗುವಳಿ ಮಾಡಿ ಕಳೆ ನಿಯಂತ್ರಣ ಇರಲಿ.

ಓದಿ: ರೈತ ಆದಾಯ ವೃದ್ಧಿಗೆ ಬಂಪರ್ ಕೊಡುಗೆ

ಯಾಂತ್ರಿಕ ನಿರ್ವಹಣೆ:
ಮೊಟ್ಟೆಗಳ ಸಂಕೀರ್ಣವನ್ನು ಕೈಯಿಂದ ಆರಿಸಿ ನಾಶಪಡಿಸುವುದು (ಹೊಸಕವುದು ಅಥವಾ ಸೀಮೆ ಎಣ್ಣೆಯಲ್ಲಿ ಹಾಕುವುದು) ಮೋಹಕ ಬಲೆಗಳನ್ನು 15/ಎಕರೆಯಂತೆ ಜಮೀನಿನಲ್ಲಿ ಅಳವಡಿಸಿ, ಕೀಟದ ಹಾನಿ ತೀವ್ರತೆಯನ್ನು ಅರಿಯುವುದು ಮತ್ತು ಹತೋಟಿ ಮಾಡುವುದು.

ಓದಿ: ಬಿತ್ತನೆಗೂ ಮೊದಲು ಮಣ್ಣು ಪರೀಕ್ಷೆ ಮಾಡಿಸುವುದು ಹೇಗೆ?

ಜೈವಿಕ ನಿರ್ವಹಣೆ:
ಸಸ್ಯ ವೈವಿಧ್ಯತೆ ಕಾಪಾಡಿಕೊಳ್ಳುವುದು, ದ್ವಿಧಳ ಧಾನ್ಯ ಬೆಳೆ ಹಾಗೂ ಹೂವಿನ ಗಿಡಗಳನ್ನು ಬೆಳೆವುಸುದರಿಂದ, ಕೀಟದ ಸ್ವಾಭಾವಿಕ ಶತ್ರುಗಳಿಗೆ ಆಶ್ರಯ ನೀಡಬಹುದು. ತತ್ತಿ ಪರತಂತ್ರ ಜೀವಿಗಳಾದ ಟ್ರೈಕೋಗ್ರಾಮಾ ಮತ್ತು ಟೆಲಿನೋಮಸ್ ರೀಮಸ್ ಗಳನ್ನು ಎಕರೆಗೆ 50,000 ದಂತೆ ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿತ್ತನೆಯಾದ 25 ದಿನಗಳ ನಂತರ ಬಿಡಬೇಕು.

ಬಿತ್ತನೆಯಾದ 15-20 ದಿನಗಳಲ್ಲಿ ಮೆಟರೀಜಿಯಂ ಆನಿಸೋಪ್ಲಿಯೇ 5ಗ್ರಾಂ/ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯ ರಿಲೆಯಿ (1*108 ಸಿಎಫ್‍ಯು/ಗ್ರಾಂ) 3ಗ್ರಾಂ, ಪ್ರತಿ ಲೀಟರ್ ನೀರಿಗೆ ಸೇರಿಸಿ ಸುಳಿಗೆ ಸಿಂಪಡಿಸಬೇಕು. 10 ದಿನಗಳ ಅಂತರದಲ್ಲಿ ಇದೇ ಸಿಂಪರಣೆಯನ್ನು ಮತ್ತೆ ಕೈಗೊಳ್ಳಬಹುದು. ಅಥವಾ ಸುಳಿಗೆ ಬ್ಯಾಸಿಲಸ್ ಥುರೆಂಜಿನ್ಸಿಸ್ ಎ ಕುರ್‍ಸ್ವಾಕಿ ದ್ರಾವಣವನ್ನು 2 ಗ್ರಾಂ/ಪ್ರತಿ ಲೀಟರ್ ನೀರಿಗೆ ಅಥವಾ 400 ಗ್ರಾಂ/ಪ್ರತಿ ಎಕರೆಗೆ ಸಿಂಪಡಿಸಬೇಕು.

ರಾಸಾಯನಿಕ ನಿರ್ವಹಣೆ:
ಮೊದಲ ಹಂತ:
ಮೆಕ್ಕೆಜೋಳದ ಬೆಳೆಯಲ್ಲಿ 5% ರಷ್ಟು ಹಾನಿ ಕಂಡುಬಂದಲ್ಲಿ ಮೊದಲ ಹಂತದ ಮರಿಹುಳು ಒಳಗೊಂಡಂತೆ ಮೊಟ್ಟೆ ಒಡೆಯುವ ಕ್ರಿಯೆ ತಡೆಯಲು 5% ಬೇವಿನ ಕಷಾಯ ಅಥವಾ ಅಜಾಡಿರಕ್ಟಿನ್ 1500ಪಿಪಿಎಂ ಅನ್ನು 5ಮಿಲೀ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಓದಿ: ರಾಜ್ಯಕ್ಕೆ ಲಗ್ಗೆ ಇಟ್ಟಿರುವ ಮಿಡತೆ ಕೀಟ ನಿಯಂತ್ರಿಸುವ ಉಪಾಯಗಳು

ಎರಡನೇ ಹಂತ: ಎರಡು ಹಾಗೂ ಮೂರನೇ ಹಂತದ ಮರಿಹುಳುಗಳನ್ನು ನಿರ್ವಹಣೆ ಮಾಡಲು (10-20% ಹಾನಿಯಾಗಿದ್ದಲ್ಲಿ) ಎಮಾಮೆಕ್ಟಿನ್  ಬೆಂಜೋಯೇಟ್ 0.4 ಗ್ರಾಂ ಪ್ರತೀ ಲೀಟರ್ ನೀರಿಗೆ ಅಥವಾ ಕ್ಲೋರೋಂಟ್ರಾನಿಲಿಪ್ರೋಲ್ 18.5 ಎಸ್‍ಸಿ ಯನ್ನು 0.4 ಮಿಲೀ ಪ್ರತಿ ಲೀಟರ್ ನೀರಿಗೆ ಅಥವಾ ಸ್ಪೈನೋಟೋರಮ್ 11.7% ಎಸ್.ಸಿ. ಯನ್ನು 0.4 ಮಿಲೀ ಪ್ರತಿ ಲೀಟರ್ ನೀರಿಗೆ ಬೆರಿಸಿ ಇದರ ಜೊತೆಗೆ 1 ಲೀಟರ್ ನೀರಿಗೆ 10 ಗ್ರಾಂ ಬೆಲ್ಲದ ದ್ರಾವಣವನ್ನು ಮಿಶ್ರಣ ಮಾಡಿದರೆ ಹುಳಗಳು ಬೇಗ ಸಾಯುತ್ತವೆ.

ಓದಿ: ನುಗ್ಗೆ ಕೃಷಿ; ಬದುಕು ಖುಷಿ: ತಿಳಿಗಳ ಮಾಹಿತಿ

ಪ್ರತಿ ಸಿಂಪರಣೆಯನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುಬೇಕು. ಹಾಗೂ ಔಷದವು ಸುಳಿಯೊಳಗೆ ಬೀಳುವಂತೆ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಹೇಳಿದೆ.

ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.