ಕೊವೀಡ್-19 ಲಾಕ್‍ಡೌನ್ ಅವಧಿಯಲ್ಲಿ ಹಣ್ಣು ಮತ್ತು ತರಕಾರಿ ಬೆಳೆದು ನಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರವು ಪ್ರತಿ ಒಂದು ಹೇಕ್ಟರ್ ಪ್ರದೇಶಕ್ಕೆ 15,000 ರೂ. ವರೆಗೆ ಪರಿಹಾರಧನ ಘೋಷಣೆ ಮಾಡಿದೆ. ನಷ್ಟವಾದ ಪ್ರತಿ ರೈತರಿಗೆ ಕನಿಷ್ಠ 2000 ರೂ.ಗಳ ಪರಿಹಾರ ಧನ ಖಚಿತವಾಗಿ ನೀಡುತ್ತಿದೆ.

ಇದಕ್ಕಾಗಿ ಅರ್ಹ ರೈತರು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಹಾನಿಯ ವರದಿ ಸಿದ್ಧವಾಗಿವೆ. ಅದರಲ್ಲಿ ಅನೇಕ ರೈತರು ಆಯ್ಕೆಯಾಗಿದ್ದಾರೆ. ಆದರೆ, ಪರಿಹಾರ ಧನ ಪಡೆಯಲು ಎಫ್ಐಡಿ ಹೊಂದಿರಲೇ ಬೇಕು. ಹಾನಿ ವರದಿಯಲ್ಲಿ ಸೇರಿದೆ ಇರುವ ರೈತರು ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಮಾಹಿತಿಯೂ ಈ ವರದಿಯಲ್ಲಿದೆ.

ಯಾವೆಲ್ಲ ಬೆಳೆಗಳಿಗೆ ಪರಿಹಾರ?
ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯ, ಅಂಜೂರ, ಅನಾನಸ್, ಕಲ್ಲಂಗಡಿ, ಖರಬೂಜ ಮತ್ತು ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿ ಗುಂಬಳ, ಭೂದ ಗುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಬೆಳೆಗಳನ್ನು ಮಾತ್ರ ಪರಿಹಾರಧನಕ್ಕಾಗಿ ಪರಿಗಣಿಸಲಾಗಿದೆ.

2019-20 ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಮುಂಗಾರು ಬೆಳೆ ಸಮೀಕ್ಷೆ ಹಾಗೂ ಹಿಂಗಾರು ಬೆಳೆ ಸಮೀಕ್ಷೆ ದೃಢೀಕರಿಸಿದ ಪಟ್ಟಿಯ ಪ್ರಕಾರ ತಾಲೂಕು ಮಟ್ಟದ ತೋಟಗಾರಿಕೆ ಕಚೇರಿ, ತಾಲೂಕಾ ಪಂಚಾಯತ್ ಕಚೇರಿ, ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳ ನಾಮಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವ ರೈತರು ಅರ್ಜಿ ಹಾಗೂ ದಾಖಲಾತಿಗಳು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಓದಲು ಲಿಂಕ್ ಒತ್ತಿ: ತಿರುಳು ನುಂಗುವ ಲದ್ದಿ ಹುಳು ಒದ್ದೋಡಿಸಿ

ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಇತರೆ ರೈತರು ಪ್ರಾಮಾಣಿಕವಾಗಿ ಮೇಲ್ಕಂಡ ಬೆಳೆ ಬೆಳೆದಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಓದಲು ಲಿಂಕ್ ಒತ್ತಿ: ಕಿಸಾನ್ ಕಾರ್ಡ್ ಇದ್ದರೆ ಮೂರು ಲಕ್ಷ ರೂ.ವರೆಗೆ ಸಾಲ

ಯಾವ ಅವಧಿ ಪರಿಗಣನೆ?
ರೈತರು ಮಾರ್ಚ್ 4 ನೇ ವಾರದ ನಂತರ ನಾಟಿ ಮಾಡಿರುವ ತರಕಾರಿ ಬೆಳೆಗಾರರಿಗೆ ಈ ಯೋಜನೆಯಡಿ ಪರಿಹಾರಕ್ಕೆ ಪರಿಗಣಿಸಲು ಅವಕಾಶವಿರುವುದಿಲ್ಲ. ಬಾಳೆ ಹಾಗೂ ಈರುಳ್ಳಿ ಬೆಳೆಗಳಿಗೆ ಸಂಬಂಧಿಸಿದಂತೆ ಮಾರ್ಚ್ 2 ನೇ ವಾರದ ನಂತರ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರ ನೀಡುವುದು.

ಓದಲು ಲಿಂಕ್ ಒತ್ತಿ: ಖರ್ಚಿಲ್ಲದೆ ಹೊಲದಲ್ಲಿ ಬಾವಿ, ಗೊಬ್ಬರ ಗುಂಡಿ, ಬದು ನಿರ್ಮಿಸಿ

ಏನು ದಾಖಲೆಗಳು ಬೇಕು?
ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್‍ಬುಕ್ ಪ್ರತಿ ಹಾಗೂ ಬೆಳೆಯ ಸ್ವಯಂ ದೃಢೀಕರಣದೊಂದಿಗೆ ಆಯಾ ತಾಲೂಕು ತೋಟಗಾರಿಕೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. 2020ರ ಜೂನ್ 10 ರೊಳಗಾಗಿ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಓದಲು ಲಿಂಕ್ ಒತ್ತಿ: ರೈತ ಆದಾಯ ವೃದ್ಧಿಗೆ ಬಂಪರ್ ಘೋಷಣೆ

ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.