ಹೈನುಗಾರಿಕೆಯಲ್ಲಿ ಮೊಲ ಸಾಕಾಣಿಕೆ ಕೂಡ ಉತ್ತಮ ಆದಾಯ ತಂದು ಕೊಡುತ್ತಿದೆ. ಮೊಲಗಳನ್ನು ವಿಶೇಷವಾಗಿ ಮಾಂಸ, ಚರ್ಮ ಹಾಗೂ ಉಣ್ಣೆಗಳಿಗಾಗಿ ಸಾಕಲಾಗುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಮೊಲ ಸಾಕಣೆ ಮಾಡಬಹುದು. ಮೊಲ ಸಾಕಲು ಕಡಿಮೆ ಸ್ಥಳವಕಾಶ ಸಾಕು. ಮನೆಯ ಹಿತ್ತಿಲ ಜಾಗದಲ್ಲಿ ಕೂಡ ಮೊದಲ ಸಾಕಣೆ ಮಾಡಬಹುದು.

ಮೊಲಗಳು 5ರಿಂದ ಆರು ತಿಂಗಳಲ್ಲಿ ಪ್ರಾಯಕ್ಕೆ ಬಂದು ಬೇಗ ವಂಶಾಭಿವೃದ್ಧಿ ಆರಂಭಿಸುತ್ತವೆ. ವರ್ಷಕ್ಕೆ 4ರಿಂದ 5 ಬಾರಿ ಮರಿ ಹಾಕುತ್ತದೆ. ಪ್ರತಿ ಬಾರಿಯೂ 7-8 ಮರಿಗಳನ್ನು ಹಾಕುತ್ತದೆ. ಒಂದು ಹೆಣ್ಣು ಮರಿಯಿಂದ ಒಂದು ವರ್ಷಕ್ಕೆ ಸರಾಸರಿ 35ರಿಂದ 40 ಮರಿಗಳನ್ನು ಪಡೆಯಬಹುದು.

ಮೊಲ ಸಾಕಲು ದೊಡ್ಡ ಬಂಡವಾಳ ಬೇಕಾಗಿಲ್ಲ. ನಿರ್ವಹಣಾ ವೆಚ್ಚ ಕೂಡ ಕಡಿಮೆ. ಹಾಕಿದ ಬಂಡಾವಳವೂ ಬೇಗ ವಾಪಸ್ಸಾಗುತ್ತದೆ. ಕಾಳುಗಳು, ಹಸಿರು ಹುಲ್ಲು, ಮನೆಯಲ್ಲಿ ಉಳಿದಿರುವ ಅನುಪಯೋಗಿ ತರಕಾರಿ, ಕಾಯಿಪಲ್ಯಗಳನ್ನು ತಿಂದು ಮೊಲಗಳು ಬೆಳೆಯುತ್ತವೆ.

ಮೊಲದ ಮಾಂಸದಲ್ಲಿ ಅತಿ ಕಡಿಮೆ “ಕೊಲೆಸ್ಟೆರಾಲ್” ಅಂಶ ಇರುವುವುದರಿಂದ ಮಾಂಸಾಹಾರಿಗಳಿಗೆ ಇದು ಅತ್ಯಂತ ಆರೋಗ್ಯದಾಯಕ ಆಹಾರ. “ಹೃದಯ ಕಾಯಿಲೆ” ಇರುವವರೂ ಇದನ್ನು ತಿನ್ನಬಹುದೆಂದು ಹೃದಯ ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಮೊದಲ ಮರಿಗಳಿಗೆ ಅಪಾರ ಬೇಡಿಕೆಯಿದೆ.

ಮೊಲಗಳಲ್ಲಿ ರೋಗವೂ ಕಡಿಮೆ. ಅಪರೂಪಕ್ಕೆ ಬರುವ ಕಾಕ್ಸಿಡಿಯೋಸಿಸ್, ಕಜ್ಜಿ, ನ್ಯುಮೋನಿಯಾ ಮತ್ತು ಪಾಶ್ಚುರೆಲ್ಲೋಸಿಸ್ ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದು. ಮೊಲದ ಚರ್ಮಕ್ಕೆ ತುಂಬಾ ಬೇಡಿಕೆ ಇದೆ. ಮೊಲದ ಗೊಬ್ಬರ ಅತ್ಯಂತ ಸಾರಯುಕ್ತವಾಗಿದ್ದು ಹಣ್ಣು ತರಕಾರಿ ಬೆಳೆಯಲು ಉಪಯೋಗಿಸಬಹುದು.

ಹೆಸರಘಟ್ಟದಲ್ಲಿರುವ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದವರು ಮೊಲಸಾಕಣೆಯಲ್ಲಿ 10 ದಿನಗಳ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರು, ಸಿರಸಿ, ಅಜ್ಜಂಪುರ, ಗಂಗಾವತಿ, ಮತ್ತು ಕೂಡಿಗೆಗಳಲ್ಲಿ ಮಾಂಸದ ಮೊಲ ಉತ್ಪಾದನಾ ಕೇಂದ್ರಗಳಿವೆ. ಮೊಲ ಸಾಕುವುದಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಂದ, ಸರ್ಕಾರದ ವತಿಯಿಂದ ಹಾಗೂ ಇತರೇ ಸಹಕಾರಿ ಸಂಘ ಸಂಸ್ಥೆಗಳಿಂದ ಧನ ಸಹಾಯ ಸಹ ದೊರೆಯುತ್ತದೆ.

ಸಾಕಾಣಿಕೆ ಸ್ಥಳ ಹೀಗಿರಲಿ
ಮೊಲಗಳಿಗೆ ಕಡಿಮೆ ಜನಸಂದಣಿ, ನಿಶ್ಯಬ್ದ ವಾತಾವರಣ, ಉತ್ತಮ ಚರಂಡಿ ವ್ಯವಸ್ಥೆ, ಸಾಕಷ್ಟು ಮರಗಳ ನೆರಳು ಹಾಗೂ ಉತ್ತಮ ಗಾಳಿ, ಬೆಳಕು ದೊರೆಯಬಹುದಾದ ಸ್ಥಳದಲ್ಲಿ ಮನೆ ನಿರ್ಮಿಸಬೇಕು. ಗೂಡುಗಳ ಸಮೀಪದಲ್ಲಿ ನಾಯಿ, ನರಿ, ಬೆಕ್ಕು, ಇಲಿ, ಹೆಗ್ಗಣ, ಮುಂಗುಸಿ ಇತ್ಯಾದಿ ಪ್ರಾಣಿಗಳು ಹೋಗದಂತೆ ನಿಯಂತ್ರಿಸಬೇಕು.

ಸ್ಥಳೀಯವಾಗಿ ಸಿಗುವ ಮರಗಳ ದಿಮ್ಮಿ, ಹಲಗೆ, ಬಿದಿರು, 14 ರಿಂದ 16 ಗೇಜ್ ದಪ್ಪವಿರುವ 1:4 ಅಂಗುಲ ಉದ್ದವಿರುವ ತಂತಿ ಜಾಲವನ್ನು ಉಪಯೋಗಿಸಿಕೊಂಡು ಕಡಿಮೆ ಖರ್ಚಿನಲ್ಲಿ ಗೂಡುಗಳನ್ನು ನಿರ್ಮಿಸಬಹುದು. ಮೊಲಗಳು ವಿಸರ್ಜಿಸಿದ ಮಲಮೂತ್ರಗಳು ಹೊರಗಡೆ ಬಸಿದುಹೋಗುವಂತೆ ಇರಬೇಕು.

ಒಣ ಹುಲ್ಲಿನ ಹಾಸಿಗೆ ವ್ಯವಸ್ಥೆ ಒದಗಿಸಿದಲ್ಲಿ ಪ್ರತಿ ದಿನವೂ ಮಲಿನಗೊಂಡ ಹುಲ್ಲನ್ನು ಬದಲಿಸಬೇಕು. ಹೀಗೆ ಮಾಡಿದರೆ  ರೋಗಗಳನ್ನು ತಡೆಗಟ್ಟಬಹುದು. ಪ್ರತಿಯೊಂದು ಮೊಲಕ್ಕೂ ಪ್ರತ್ಯೇಕವಾಗಿ ಗೂಡುಗಳನ್ನು ಇಲ್ಲವೇ ಹೆಚ್ಚು ಮೊಲಗಳನ್ನು ಒಂದೆಡೆ ಸಾಕುವಂತೆ ಕಾಲೋನಿ ಮಾದರಿಯಲ್ಲಿ ವಸತಿ ವ್ಯವಸ್ಥೆ ಮಾಡಬಹುದು.

ಅಂಗೋರಾ

ಉದ್ಯಮವಾಗಿ ಮೊಲ ಸಾಕುವುದಿದ್ದರೆ ಕಾಲೋನಿ ಮಾದರಿಯ ಗೂಡುಗಳು ಸೂಕ್ತ. ಕಾಲೋನಿ ಮಾದರಿ ವಸತಿಯಲ್ಲಿ ಮೊಲವೊಂದಕ್ಕೆ 1.5 ರಿಂದ 2.0 ಚದರ ಅಡಿ ಜಾಗ ಬೇಕು. 4 ರಿಂದ 5 ವಾರದ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿದ ನಂತರ ಅವು ಪ್ರಾಯಕ್ಕೆ ಬರುವವರೆಗೂ ಕಾಲೋನಿ ಮಾದರಿಯ ವಸತಿ ವ್ಯವಸ್ಥೆ ಉತ್ತಮ.

ವಾತಾವರಣ
ಮೊಲಗಳು ತಂಪಾದ, ಆಹ್ಲಾದಕರವಾದ ವಾತಾವರಣದಲ್ಲಿ ಚೆನ್ನಾಗಿ ಒಗ್ಗಿಕೊಂಡು ಬೆಳೆಯುತ್ತವೆ. ವಾತಾವರಣದ ಉಷ್ಣಾಂಶ 320 ಸೆ. ಗಿಂತ ಹೆಚ್ಚಾಗಿದ್ದಲ್ಲಿ ಉಷ್ಣದಿಂದ ಸೊರಗಿ ಬಳಲುತ್ತವೆ. 18 ರಿಂದ 220ಸೆ. ಈ ವಾತಾವರಣದಲ್ಲಿ ಮೊಲಗಳು ಚೆನ್ನಾಗಿ ಬೆಳೆಯುತ್ತವೆ. ವಾತಾವರಣದ ತೇವಾಂಶ ಸಹ ಶೇಕಡಾ 65 ರಿಂದ 70 ರಷ್ಟು ಇರಬೇಕು. ಗಾಳಿ ಬೆಳಕು ಯಥೇಚ್ಛವಾಗಿ ಬರಬೇಕು. ಮೊಳಕೆಯೊಡೆದ ಕಾಳುಗಳು, ಕಡಲೆಕಾಳು, ಕುದುರೆ ಮಸಾಲೆ ಸೊಪ್ಪು ಮತ್ತು ಕ್ಯಾರೆಟ್ ಅನ್ನು ಮೊಲಗಳು ತುಂಬಾ ಇಷ್ಟಪಡುತ್ತವೆ. ಮೊಲಗಳಿಗಾಗಿ ದಾಣಿ ಮಿಶ್ರಣ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಯಾವ ತಳಿಗಳು ಉತ್ತಮ?
ಉಣ್ಣೆ ಮತ್ತು ಚರ್ಮಕ್ಕೆ ಹೆಸರಾದ ತಳಿಗಳು

ಅಂಗೋರಾ, ಜರ್ಮನ್ ಅಂಗೋರಾ ಹಾಗೂ ರಷ್ಯನ್ ಅಂಗೋರಾ ಉಪತಳಿಗಳು ಉಣ್ಣೆ ಮತ್ತು ಚರ್ಮಕ್ಕೆ ಹೆಸರಾಗಿವೆ. ಇವು ಸಮಶೀತೋಷ್ಣವಲಯ ಹಾಗೂ ತಂಪಾದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಈ ತಳಿಗಳಿಂದ ರೇಷ್ಮೆಗಿಂತ ಉತ್ತಮವಾದ ಹಾಗೂ ನಾಜೂಕಾದ ಉಣ್ಣೆ ದೊರೆಯುತ್ತದೆ. ವರ್ಷಂಪತ್ರಿ 600 ರಿಂದ 900 ಗ್ರಾಂ ನಷ್ಟು ಇಳುವರಿ ಬರುತ್ತದೆ. ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕಿಲೋ ಗ್ರಾಂ ಗೆ 900 ರಿಂದ 1,500 ರೂಪಾಯಿಗಳ ವರೆಗೆ ಇದೆ.

ಮಾಂಸದ ತಳಿ
ಮುಖ್ಯವಾದ ಮಾಂಸದ ತಳಿಗಳೆಂದರೆ ರಷ್ಯನ್ ಗ್ರೇಜಯಂಟ್, ರಷ್ಯನ್  ವೈಟ್ ಜಯಂಟ್, ಪ್ಲೆಮಿಷ್ ಜಯಂಟ್, ಸೋವಿಯತ್ ಚಿಂಚಿಲ್ಲಾ (5 – 6 ಕೆಜಿ) ನ್ಯೂಜಿಲೆಂಡ್ ವೈಟ್, ಕ್ಯಾಲಿಪೋರ್ನಿಯನ್ ವೈಟ್ (3.5 – 5.5 ಕೆಜಿ).
ಈ ತಳಿಗಳಿಂದ ರುಚಿಕರವಾದ, ಹೆಚ್ಚಿನ ಪೌಷ್ಠಿಕಾಂಶ ಹಾಗೂ ಕಡಿಮೆ ಕೊಬ್ಬಿನಾಂಶವಿರುವ ಮಾಸಲು ಬಿಳಿ ಬಣ್ಣದ ಮಾಂಸ ದೊರೆಯುತ್ತದೆ. ಮಾಂಸ ತಳಿಗಳು ಬಹು ಶೀಘ್ರವಾಗಿ ಬೆಳೆಯುತ್ತವೆ. 6 ರಿಂದ 8 ವಾರಗಳಲ್ಲಿ 850 ರಿಂದ 900 ಗ್ರಾಂ ಗಳಷ್ಟು ದೇಹ ತೂಕ ಪಡೆಯುತ್ತವೆ.  12 ರಿಂದ 14 ವಾರಗಳಲ್ಲಿ 1.80 ರಿಂದ 2 ಕೆಜಿ ತೂಗುತ್ತದೆ.

ಖುಷಿಗಾಗಿ ಸಾಕುವ ತಳಿಗಳು
ನಾಯಿಗಳ ರೀತಿ ಮೊಲಗಳನ್ನೂ ವಿಲಾಸಿ ಜೀವನದ ಭಾಗವಾಗಿ ಸಾಕುತ್ತಾರೆ. ಪೊಲ್ಯಾಂಡ್, ಫಾಲೋಮಿನಾ, ಫ್ಲಾರಿಡಾ, ವೈಟ್, ಟಾನ್ ಹವಾನ, ಇಂಗ್ಲೀಷ್ ಬ್ಲ್ಯಾಕ್ ಆಂಡ್ ವೈಟ್ ಪ್ರಮುಖ ತಳಿಗಳು. ಈ ತಳಿಗಳು ಮುದ್ದಾಗಿ, ಸೌಮ್ಯವಾಗಿ ಕಾಣುತ್ತವೆ. ಈ ಮೊಲಗಳು ಮನೆ ಮಂದಿಯೊಂದಿಗೆ ಆಟವಾಡಿಕೊಂಡು ಉಲ್ಲಾಸದ ಸಹಜೀವನ ನಡೆಸುತ್ತವೆ.

ಮೊಲಗಳು ಎಲ್ಲಿ ದೊರೆಯುತ್ತವೆ?
ಪ್ರಾಧ್ಯಾಪಕರು, ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆ ವಿಭಾಗ, ಪಶುವೈದ್ಯಕೀಯ ಕಾಲೇಜು, ಕರ್ನಾಟಕ ಶು ವಿಜ್ಞಾನಗಳ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು.
ಸಹಾಯಕ ನಿರ್ದೇಶಕರು, ದನಗಳ ತಳಿ ಅಭಿವೃದ್ಧಿ ಹಾಗೂ ಸಂವರ್ಧನ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ.
ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳು, ಸಿರಸಿ, ಉತ್ತರ ಕನ್ನಡ ಜಿಲ್ಲೆ.
ಸಹಾಯಕ ನಿರ್ದೇಶಕರು, ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರ, ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಹೆಸರಘಟ್ಟ ಬೆಂಗಳೂರು ಉತ್ತರ ತಾಲ್ಲೂಕು.
ಮೇಧಾ ಮೊಲ ಸಾಕಾಣೆ ಉದ್ಯಮ ಸಲಹಾ ಕೇಂದ್ರ, ಗೊಡ್ಲಬೀಳು, ಸಿದ್ದಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಳಿ ಅಭಿವೃದ್ಧಿ ಕೇಂದ್ರ, ಬಂಕಾಪುರ, ಧಾರವಾಡ.
ಸಂಯೋಜಿತ ಜಾನುವಾರು ಕ್ಷೇತ್ರ, ಕುರಿಕುಪ್ಪಿ(ಬಳ್ಳಾರಿ).
ಜಾನುವಾರು ತಳಿ ಅಭಿವೃದ್ಧಿ ಕೇಂದ್ರ, ಕೂಡಿಗೆ (ಮಡಿಕೇರಿ).
ಪಶುವೈದ್ಯಶಾಲೆ, ಕೋಟೆಶಾಲೆ (ದಕ್ಷಿಣ ಕನ್ನಡ).
ಪಶುವೈದ್ಯಶಾಲೆ, ಕಳಸ (ಚಿಕ್ಕಮಗಳೂರು).
ಪಶುವೈದ್ಯಶಾಲೆ, ಹೊಳೆನರಸೀಪುರ (ಹಾಸನ).
ಪಶುವೈದ್ಯಶಾಲೆ, ಆರಸೀಕೆರೆ (ಹಾಸನ).