ಇತ್ತೀಚಿನ ದಿನಗಳಲ್ಲಿ ಮಳೆ ಮತ್ತು ಅತಿಯಾದ ಮಂಜಿನಂಥ ಹವಾಮಾನ ವೈಪರೀತ್ಯದಿಂದ ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಮತ್ತು ದುಂಡಾಣುವಿನಿಂದ ಬರುವ ಕಜ್ಜಿರೋಗದ ಭಾದೆ ಹೆಚ್ಚಾಗುತ್ತಿದೆ.

ಆದರೆ, ರೈತರು ಒಂದೇ ರೀತಿಯ ಔಷಧ ಸಿಂಪಡಿಸುವುದರಿಂದ ರೋಗ ಹತೋಟಿಗೆ ಬರದೆ ಇರುವ ಪ್ರಕರಣಗಳು ಹೆಚ್ಚಾಗಿವೆ. ರೈತರಿಗಾಗಿ ಬೆಳೆ ರಕ್ಷಣೆಗೆ ಯೋಗ್ಯ ಔಷಧೋಪಚಾರವನ್ನು ಕೃಷಿ ಇಲಾಖೆ ಸೂಚಿಸಿದೆ. ರೈತರು ಈ ಕೆಳಗಿನ ಔಷಧೋಪಚಾರವನ್ನು ಅನುಸರಿಸಬಹುದು.

ಹೇಗಿದೆ ಔಷಧೋಪಚಾರ?

ಅಂಗಮಾರಿ ರೋಗದ ಲಕ್ಷಣಗಳು ಕಂಡುಬಂದರೆ, ಮೊದಲನೇ ಸಿಂಪರಣೆಯಾಗಿ ಕ್ಲೋರೋಥೆಲೋನಿಲ್ (ಕವಚ್) 2 ಮಿ.ಲೀ/ಲೀ. ಅಥವಾ ಮ್ಯಾಂಕೋಜೆಬ್ 3.0 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಎರಡನೇ ಸಿಂಪರಣೆಯಾಗಿ ಸೈಮೋಕ್ಸಾನಿಲ್ + ಮ್ಯಾಂಕೋಜೆಬ್ (ಮ್ಯಾಕ್ಸಿಮೇಟ್/ಕರ್ಜೇಟ್) 2.5 ಗ್ರಾಂ/ಲೀ. ಅಥವಾ ಡೈಮೀಥೋಮಾರ್ಫ್ (ಅಕ್ರೋಬ್ಯಾಟ್) 1 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ಬೆರೆಸಿ, ಆ ದ್ರಾವಣವನ್ನು ಪ್ರತಿ 7 ದಿನಗಳ ಅಂತರದಲ್ಲಿ ರೋಗ ಹತೋಟಿಯಾಗುವವರೆಗೆ ಒಂದೇ ಔಷಧವನ್ನು ಪದೇ ಪದೇ ಬಳಸದೆ ಔಷಧಿಗಳನ್ನು ಬದಲಾಯಿಸಿ ಸಿಂಪರಣೆಯನ್ನು ಕಡ್ಡಾಯವಾಗಿ ಮಾಡಬೇಕು.

ರೋಗದ ತೀವ್ರತೆ ಜಾಸ್ತಿಯಾದಲ್ಲಿ ಮೂರನೇ ಸಿಂಪರಣೆಯಾಗಿ ಸೆಕ್ಟಿನ್ 2-3 ಗ್ರಾಂ ಅಥವಾ ರಿಡೋಮಿಲ್ ಎಂ.45 2 ಗ್ರಾ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಶಿಲೀಂಧ್ರ ರೋಗಗಳ ಹತೋಟಿಗಾಗಿ ಟ್ರೈಸೈಕ್ಲೋಜೋಲ್ ಗುಂಪಿಗೆ ಸೇರಿದ ಶಿಲೀಂದ್ರ ನಾಶಕಗಳನ್ನು 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ 1 ಗ್ರಾಂ ಫಿಮೋಕ್ಷಡನ್ + ಸೈಮೋಕ್ಸನಿಲ್ ಅಥವಾ  ಅಝಾಕ್ಸಿಸ್ಟ್ರಾಬಿನ್ 1 ಮಿ.ಲೀ. / ಲೀ ಅಥವಾ ಅಝಾಕ್ಸಿಸ್ಟ್ರಾಬಿನ್ + ಡೈಫೆನ್‍ಕೊನಜೋಲ್ 1 ಮಿ.ಲೀ / ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ದುಂಡಾಣುವಿನಿಂದ ಬರುವ ಕಜ್ಜಿ ರೋಗದಿಂದ ಟೊಮ್ಯಾಟೊ ಕಾಯಿಗಳ ಮೇಲೆ ಸಣ್ಣ ಸಣ್ಣ ಚುಕ್ಕೆಗಳಾಗುವುದರಿಂದ, ಕಾಯಿಗಳ ಗುಣಮಟ್ಟ ಕಡಿಮೆಯಾಗಿ ಮಾರಾಟ ಧಾರಣೆ ಕಡಿಮೆಯಾಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.

ಇದರ ಹತೋಟಿಗಾಗಿ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ 0.5 ಗ್ರಾಂ ಜೊತೆಗೆ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಅಥವಾ ಬ್ರೋನೋಫಾಲ್ 0.5 ಗ್ರಾಂ ಜೊತೆಗೆ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಅಥವಾ 0.5 ಗ್ರಾಂ ಬ್ಯಾಕ್ಟ್ರಿನಾಶಕ್ ಸಿಂಪರಣೆ ಮಾಡುವುದು.

ಸಿಂಪರಣೆ ಮಾಡುವಾಗ ಜೊತೆಗೆ ಅಂಟನ್ನು 1 ಮಿ.ಲೀ / ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಲ್ಲದೇ ಕನಿಷ್ಠ ನಾಲ್ಕು ಗಂಟೆಗಳ ಕಾಲ ಮಳೆ ಬಾರದಿರುವ ಸಮಯದಲ್ಲಿ ಸಿಂಪರಣೆ ಕೈಗೊಳ್ಳಬೇಕು.

ತೋಟಗಳಲ್ಲಿ ಹೆಚ್ಚಿನ ನೀರು ನಿಲ್ಲದಂತೆ ನೋಡಿಕೊಳ್ಳಲು ರೈತರು ಬಸಿಗಾಲುವೆಗಳನ್ನು ಮಾಡಿಕೊಳ್ಳಬೇಕು. ಕೊಳವೆ/ಪೈಪ್ ಮೂಲಕ ನೀರು ಸಾಗಣೆ ಮಾಡುವುದು. ಹೆಚ್ಚುವರಿ ನೀರನ್ನು ಯಾಂತ್ರಿಕ ಪಂಪ್‍ನಿಂದ ಹೊರ ಹಾಕುವುದು. ಒಳ ಹಾಗೂ ಹೊರ ಚರಂಡಿಗಳ ಮೂಲಕ ನೀರು ಬಸಿದು ಹೋಗುವಂತೆ ಕಾಲುವೆಗಳನ್ನು ನಿರ್ವಹಿಸುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  7829512236 ಮತ್ತು ತೋಟಗಾರಿಕೆ ಸಲಹಾ ಕೇಂದ್ರ ಕೋಲಾರ ಸಂಪರ್ಕಿಸಬಹುದು ಎಂದು ತೋಟಗಾರಿಕೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.