ಸಾವಯವ ಕೃಷಿಯ ಮೂಲಕವೇ ತಿಂಗಳಿಗೆ 35-40 ಸಾವಿರ ರೂ ಆದಾಯ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಅದನ್ನು ಸಾಬೀತು ಮಾಡಿದ್ದಾರೆ ಮೈಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು.

ಇವರ ಕೃಷಿಯೇ ಭಿನ್ನ. ಸಾವಯವ ಕೃಷಿ ಬಗ್ಗೆ ಗೊತ್ತಿಲ್ಲದೆ ಇದ್ದರೂ ಅದರಲ್ಲಿ ತರಬೇತಿ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೃಷಿ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯ ಹಂಗು ಇವರಿಗಿಲ್ಲ. ರಾಸಾಯನಿಕ ಗೊಬ್ಬರಗಳ ಉಸಾಬರಿಗೂ ಇವರು ಹೋಗಿಲ್ಲ.

ಹೇಗಿದೆ ಶಂಕರೇಗೌಡ ಕೃಷಿ:

ಶಂಕರೇಗೌಡ ಅವರು ಮೊದಲು ಟ್ರ್ಯಾಕ್ಟರನಲ್ಲಿ ಸುತ್ತಮುತ್ತಲಿನ ಜಮೀನನಲ್ಲಿ  ಬಾಡಿಗೆ ಹೊಡೆಯುತ್ತಿದ್ದರು. ಕ್ರಮೇಣ ಕೃಷಿ ಮಾಡಲೇ ಬೇಕು ಎನ್ನುವ ಹಠಕ್ಕೆ ಬಿದ್ದ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದರು. ಇಂದು ಅವರು ಯಾವ ಸರ್ಕಾರಿ ಉದ್ಯೋಗಿಗಿಂತ ಕಡಿಮೆ ಇಲ್ಲವೆಂಬಂತೆ ಸ್ವಾವಲಂಭಿಯಾಗಿದ್ದಾರೆ.

ವ್ಯವಸಾಯ ಪ್ರಾರಂಭಿಸಿದಾಗ ಐದು ಎಕೆರೆ ಭೂಮಿಯನ್ನು ಹಂತಹಂತವಾಗಿ ಹದಮಾಡಿದೆ. ಮೊದಲು ಬಾಳೆಹಣ್ಣು ಬೆಳೆದೆ. ಅದರಿಂದ ನಷ್ಟವಾಯಿತು. ಸಾವಯವ ಕೃಷಿ ಅಂದರೆ ಎಲ್ಲಿಲದ ಪ್ರೀತಿ, ಆಸಕ್ತಿ. ಆದರೆ ಇದರ ಬಗ್ಗೆ ನನಗೆ ಅಷ್ಟೊಂದು ತಿಳಿದಿರಲಿಲ್ಲ. ಸುತ್ತೂರಿನ ಜೆ.ಎಸ್.ಎಸ್. ಕೃಷಿ ವಿಜ್ಞಾನ ಕೇಂದ್ರದ ತರಬೇತಿಗೆ ತೆರಳಿ ಅಲ್ಲಿರುವ ತಜ್ಞರ ಮಾಹಿತಿಯ ಮೇರೆಗೆ ಸಾವಯವ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಲು ಸಾಧ್ಯವಾಯಿತು ಎನ್ನುತ್ತಾರೆ ಕೃಷಿಕ ಶಂಕರೇಗೌಡ.

ಕೃಷಿಕ ಶಂಕರೇಗೌಡ

ಬಾಳೆಯ ವಿವಿಧ ತಳಿಗಳಾದ ಕಾಡುಬಾಳೆ, ನೇಂದ್ರನ್, ನಂಜನಗೂಡು ರಸಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆಗಳ ಸುಮಾರು 400 ಗಿಡಗಳನ್ನು ಟ್ರೆಂಚ್ ಪದ್ದತಿಯಲ್ಲಿ ಬೆಳೆದರು. ತಮ್ಮ ಭೂಮಿಯನ್ನು ಹಂತ ಹಂತವಾಗಿ ಸಂಪೂರ್ಣ ಸಾವಯವ ಭೂಮಿಯಾಗಿ ಪರಿವರ್ತಿಸಿದರು.

ಬಳಿಕ ಎಂಟು ಗುಂಟೆ ಪ್ರದೇಶದಲ್ಲಿ ಅರಿಶಿಣ, ಪರಂಗಿ 50 ಗಿಡ, ಹುಣಸೆ ಮರ 2, ತೆಂಗು-130, ನೇರಳೆ-2, ಹಲಸು-6, ಸೀಬೆ-40, ಮಾವು-6. ಮೊಸಂಬಿ-2, ಚಕ್ಕೊತಾ-1, ನೆಲ್ಲಿಕಾಯಿ-1, ನುಗ್ಗೆ-15, ಸೀತಾಫಲ-2, ಇರಳೆಕಾಯಿ-20, ಗಜನಿಂಬೆ-25, ನಿಂಬೆ-12, ಕರಿಬೇವು-15, ಸೊಪ್ಪುಗಳಾದ ಕೊತ್ತಂಬರಿ, ಸಬ್ಬಸಿಗೆ, ಹೊನಗೊನೆ, ಕೀರೆ, ಪುದೀನಾ, ಮೆಂತ್ಯಾ, ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.

ಜಮೀನಿನ ಸುತ್ತಲು ಬದುಗಳಲ್ಲಿ ಸಿಲ್ವರ್ ಓಕ್-200, ಟೀಕ್-100, ಹೆಬ್ಬೇವು-20, ಕಹಿಬೇವು-6, ಜೇನು ಪೆಟ್ಟಿಗೆ-2, ಹಾಗೂ ಕುರಿಗಳು-15, ಕೋಳಿ-15, ಹೆಚ್.ಎಫ್ ಹಸು-2, ಮೆಣಸು-4, ಅಡಿಕೆ-2, ಮರಗೆಣಸು-5, ಶುಂಠಿ-1 ಗುಂಟೆ, ಹಾಗೂ 4 ಎರೆಹುಳು ಗೊಬ್ಬರ ಘಟಕಗಳನ್ನು ಹೊಂದಿದ್ದಾರೆ.

ಒಂದು ಬೋರ್‍ವೆಲ್ ಮತ್ತು ಕೃಷಿ ಇಲಾಖೆ ವತಿಯಿಂದ  ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡದ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ.

ದಿನನಿತ್ಯ ಉಪಯೋಗಿಸುವಂತಹ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಸೊಪ್ಪು ಹಾಗೂ ತರಕಾರಿಗಳನ್ನು ಮಾತ್ರ ಬೆಳೆಯುತ್ತಿದ್ದರು. ಇವುಗಳಿಗೆ  ಮಾರುಕಟ್ಟೆಯಲ್ಲಿ ಸದಾಕಾಲ ಬೇಡಿಕೆ ಇದ್ದೇ ಇರುತ್ತಿತ್ತು. ಇದನ್ನರಿತ ಶಂಕರೇಗೌಡರು ಕೃಷಿ ತಜ್ಞರ ಸಲಹೆಯಂತೆ ವಿವಿಧ ಹಂತಗಳಲ್ಲಿ ಕಟಾವಿಗೆ ಬರುವಂತೆ ಉಪಚರಿಸಿ, ಯತೇಚ್ಚವಾಗಿ ಜೀವಾಮೃತ ಮತ್ತು ಪಂಚಗವ್ಯಗಳನ್ನು ಬಳಸಿ ಬಿತ್ತನೆ ಮಾಡುತ್ತಿದ್ದಾರೆ.

ತಮ್ಮದೇ ಮಾರುಕಟ್ಟೆ

ಇವರು ವಾರಕ್ಕೊಮ್ಮೆ ಭಾನುವಾರ ಎಲ್ಲಾ ಬೆಳೆಗಳು ಮತ್ತು ಪದಾರ್ಥಗಳನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ಮೈಸೂರಿನ ವಿವೇಕಾನಂದ ಸರ್ಕಲ್‍ನ ಬಳಿ ತಮ್ಮದೇ ಸಂತೆ (ಮಾರುಕಟ್ಟೆ) ಕಲ್ಪಿಸಿಕೊಂಡಿದ್ದಾರೆ.

ಇವರ ರಾಸಾಯನಿಕ ಮುಕ್ತವಾದ ಸಾವಯವ ಪದಾರ್ಥಗಳಿಗೆ ಎಲ್ಲಿಲ್ಲದ ಬೇಡಿಕೆ. ಒಂದು ವಾರಕ್ಕಾಗುವಷ್ಟು  ದಿನಬಳಕೆ ಪದಾರ್ಥಗಳನ್ನು ಭಾನುವಾರದ ದಿನ ಶಂಕರೇಗೌಡರಿಂದ ಖರೀದಿಸುತ್ತಾರೆ. ಹೆಚ್ಚಿನ ತರಕಾರಿ ಬೇಕಾದಲ್ಲಿ ಗ್ರಾಹಕರು ಶಂಕರೇಗೌಡರಿಗೆ ದೂರವಾಣಿಯ ಮೂಲಕವೂ ಕರೆ ಮಾಡುತ್ತಾರೆ.

ತಾವು ಬೆಳೆದ ಅರಿಶಿಣವನ್ನು ತಾವೇ ಸಂಸ್ಕರಿಸಿ ಚನ್ನಾಗಿ ಒಣಗಿಸಿ ಪುಡಿಗೊಳಿಸಿ ಅದನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ.  ಇವರ ಅರಿಶಿಣ ಪಾರ್ಸಲ್ ಮೂಲಕ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತಲುಪುತ್ತದೆ. ಪೋಸ್ಟ್ ಮೂಲಕವೇ ಮನಿ ಆರ್ಡರ್ ಮಾಡಿ ತಮಗೆ ಬೇಕಾದ ಪದಾರ್ಥವನ್ನು ಪಡೆಯುತ್ತಾರೆ.

ಹೈನುಗಾರಿಕೆಯಲ್ಲೂ ಸೈ

ಕಳೆದ 7 ವರ್ಷಗಳಿಂದಲೂ ಯಾವುದೇ ರಾಸಾಯನಿಕಗಳನ್ನು ಭೂಮಿಗೆ ಸೋಕಿಸದೇ ಇರುವ ಶಂಕರೇಗೌಡರು ಕುರಿ ಮತ್ತು ಕೋಳಿ ಸಾಕಣೆಯನ್ನೂ ಸಹ ವಿಶಿಷ್ಟ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. 15 ಕುರಿಗಳು ಮತ್ತು 15 ಕೋಳಿಗಳನ್ನು ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಸಾಕುತ್ತಿದ್ದಾರೆ.

ಇವುಗಳಿಂದ ಬಂದ ಗೊಬ್ಬರಗಳನ್ನು ಚೆನ್ನಾಗಿ ಕಲಸಿ, ಅದನ್ನು ತಮ್ಮ ಭೂಮಿಗೆ ಸಿಂಪಡಿಸುತ್ತಾರೆ. ಜೊತೆಗೆ 4 ಎರೆಹುಳು ಘಟಕಗಳನ್ನು ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಿಸಿಕೊಂಡಿದ್ದಾರೆ.  ಆ ಗೊಬ್ಬರವನ್ನೂ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಾರೆ.

ಹೆಚ್ಚಾದ ಎರೆಹುಳು ಗೊಬ್ಬರವನ್ನು ಬೇರೆ ರೈತರಿಗೆ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ರೋಟರಿ ಟಿಲ್ಲರ್ ಯಂತ್ರ ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ವೈವಿಧ್ಯತೆ ಸಾಧಿಸಿರುವ ಇವರ ಬಳಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ರೈತರು ಬಂದು ಸಲಹೆ ಸೂಚನೆ ಪಡೆಯುತ್ತಾರೆ.

ಏಕಬೆಳೆ ಪದ್ದತಿ ಬಿಟ್ಟು ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ, ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡರೆ ರೈತನು ಆತ್ಮಹತ್ಯೆಯ ದಾರಿ ಹಿಡಿಯುವುದಿಲ್ಲ. ಬದಲಾಗಿ ನಾಲ್ಕು ಜನರಿಗೆ ಕೆಲಸ ನೀಡುವ ಸಾಹುಕಾರನಾಗಿ ಬೆಳೆಯುತ್ತಾನೆ ಎನ್ನುತ್ತಾರೆ ಪ್ರಗತಿಪರ ರೈತ ಶಂಕರೇಗೌಡ.

ಕೃಪೆ- ವಾರ್ತಾ ಇಲಾಖೆ