ಗೋಕರ್ಣ: ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಮುಳುಗಿ ಅಪಾಯದಲ್ಲಿದ್ದ ಐವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಕಾಪಾಡಿದ್ದಾರೆ.

ಗೋಕರ್ಣದ ದುಬ್ಬನಸಸಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಐವರು ಮೀನುಗಾರರಿದ್ದ ದೋಣಿ ಇನ್ನೇನು ಅಲೆಗಳನ್ನು ದಾಟಿ ಸಮುದ್ರ ಮಧ್ಯಕ್ಕೆ ಹೋಗಬೇಕು ಎನ್ನುವಾಗ ದೋಣಿ ಮುಳುಗಿದೆ. ಅಲೆಗಳ ರಭಸ ಜೋರಾಗಿದ್ದರಿಂದ ಮೀನುಗಾರರಿಗೆ ದೋಣಿಯನ್ನು ಹಿಡಿದುಕೊಳ್ಳುವುದಕ್ಕೂ ಆಗದೇ ಅಪಾಯದ ಹಂತಕ್ಕೆ ತಲುಪಿದ್ದರು.

ಅದರಲ್ಲಿ ಮೂವರು ಮೀನುಗಾರರು ಜೀವ ಉಳಿಸಿಕೊಳ್ಳುವುದಕ್ಕಾಗಿ ತೀರದ ಕಡೆ ಈಜುತ್ತಿದ್ದರು. ಇನ್ನಿಬ್ಬರು ದೋಣಿ ಬಳಿಯೇ ಇದ್ದರು. ಮೂವರು ಮೀನುಗಾರರು ಸುಮಾರು 100 ಮೀಟರ್ ವರೆಗೆ ಈಜಿ ಬಂದಿದ್ದರು. ತೀರ ಪ್ರದೇಶ ತಲುಪಲು ಇನ್ನೂ ಹಲವು ದೂರವಿತ್ತು. ಆಳದಲ್ಲಿ ನೆಲೆ ಸಿಗದೆ ಮೀನುಗಾರರು ಸಾಹಸ ಪಡುತ್ತಿದ್ದರು.

ಬೆಳಗ್ಗೆ ಸಮುದ್ರದ ತೀರದಲ್ಲಿ ಪರಿಶೀಲನೆಯಲ್ಲಿದ್ದ ಕರಾವಳಿ ಕಾವಲು ಪಡೆಯ ಮೂವರು ಸಿಬ್ಬಂದಿ ಮೀನುಗಾರರು ಕಷ್ಟದಲ್ಲಿರುವ ಮಾಹಿತಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈಜಿಕೊಂಡೇ ಹೋಗಿ ಹಗ್ಗ, ತೇಲುವ ಕಟ್ಟಿಗೆ ಕೊಟ್ಟು ಐವರು ಮೀನುಗಾರರನ್ನು ಕಾಪಾಡಿದ್ದಾರೆ. ಸ್ವಲ್ಪ ಸಮಯದ ವ್ಯತ್ಯಾಸವಾಗಿದ್ದರೂ ಅನಾಹುತ ಎದುರಿಸಬೇಕಾಗಿತ್ತು.

ಮೀನುಗಾರರ ಜತೆಗೆ ಮುಳುಗಿದ್ದ ದೋಣಿಯನ್ನೂ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸಾಹಸಕ್ಕೆ ಮೀನುಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.