ಬೆಂಗಳೂರು : ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು, ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿ, ಮಾತನಾಡಿದರು.

ಸ್ತ್ರೀ ಸಾಮರ್ಥ್ಯ ಯೋಜನೆಯಡಿ 3 ರಿಂದ 5 ಲಕ್ಷ ನೀಡಲಾಗುತ್ತಿದ್ದು ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯ ಧನವನ್ನು ಬಳಸಿ ಸುಮಾರು 1000 ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಮುಂದಾಗಬೇಕು ಎಂದರು.

ಮೀನುಗಾರರಿಗೆ ಮನೆ ನಿರ್ಮಾಣ

ಮೀನುಗಾರರು ಆರ್ಥಿಕವಾಗಿ ಸಬಲರಾಗಲು 5000 ಮೀನುಗಾರರ ಮನೆಗಳಿಗೆ ಮಂಜೂರಾತಿ ನೀಡಿದೆ. ಈ ಮನೆಗಳನ್ನು ಜನವರಿಯೊಳಗೆ ಪೂರ್ಣ ಗೊಳಿಸಿದರೆ ಖುದ್ದಾಗಿ ಬಂದು ಮೀನುಗಾರರಿಗೆ ಹಂಚಲಾಗುವುದು ಎಂದರು.

ಹೊಸ ತಳಿ ಮೀನು

ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿಸಬೇಕು. ಹೊಸ ತಳಿಗಳನ್ನು ತಯಾರು ಮಾಡಿದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ. ಮಾರುಕಟ್ಟೆ ಹಾಗೂ ಉತ್ಪಾದನೆಯ ನಡುವೆ ದೊಡ್ಡ ಅಂತರವಿದೆ. ಈ ಅಂತರ ತುಂಬಲು ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ ಹೊಸ ತಳಿಗಳನ್ನು ಪ್ರಯೋಗ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳಸಬೇಕು.

ಸಮುದ್ರದ ಮೀನುಗಾರಿಕೆಗೆ ಹಲವಾರು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರತಿ ಹೆಕ್ಟೇರ್ ಹೊಸದಾಗಿ ಪ್ರಾರಂಭಿಸಿದರೆ 1 ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ 100 ಹೊಸ ಆಳ ಸಮುದ್ರ ಬೋಟುಗಳನ್ನು ಒದಗಿಸುತ್ತಿದ್ದು, 40 % ಸಹಾಯಧನವಿದ್ದು ಅತಿ ಸುಲಭ ದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದೆ. 100 ಬೋಟುಗಳನ್ನು ನೀಡಿದರೆ, ಮುಂದಿನ ವರ್ಷ 300 ಬೋಟುಗಳಿಗೆ ವಿಸ್ತರಣೆ ಮಾಡುವ ಉದ್ದೇಶವಿದೆ ಎಂದರು.

5600 ಗ್ರಾಮ ಪಂಚಾಯಿತಿಯಲ್ಲಿ 5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ

ಕರಾವಳಿ ಪಕ್ಕದಲ್ಲಿ ಕಡಲ ಕೊರೆತವಾಗಿ ಹೂಳು ತುಂಬಿ ತೊಂದರೆಯಾಗುತ್ತಿರುವುದರಿಂದ ಎಂಟು ಮೀನುಗಾರಿಕೆ ಬಂದರುಗಳಿಗೆ ವಿಶೇಷ ಅನುದಾನ ನೀಡಿ ಹೂಳು ತೆಗೆಯಲು ಈ ವರ್ಷ ಅನುಮೋದನೆ ನೀಡಲಾಗಿದೆ.

ಮೀನುಗಾರರಿಗೆ ಡೀಸಲ್ ಹಾಗೂ ಸೀಮೆ ಎಣ್ಣೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಮೀನುಗಾರರ ಹಡುಗುಗಳು ಹಾಳಾಗುತ್ತವೆ. ಅದಕ್ಕೆ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಅನುದಾನ ನೀಡಲು ಅವಕಾಶವಿಲ್ಲ. ರಾಜ್ಯ ಸರ್ಕಾರ ದಿಂದಲೇ ಮೀನುಗಾರರ ದೋಣಿಗಳಿಗೆ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ.

ಒಳನಾಡು ಮೀನುಗಾರಿಕೆಗೂ ಪ್ರೋತ್ಸಾಹ ನೀಡಲು 5600 ಗ್ರಾಮ ಪಂಚಾಯಿತಿಯಲ್ಲಿ 5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ ನೀಡಿದೆ. ಆಲಮಟ್ಟಿ, ಕೆ.ಆರ್.ಎಸ್ ಹಿನ್ನೀರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೀನುಗಾರಿಕೆ ಆಗುತ್ತಿಲ್ಲ. ಕೆಲವರೇ ಸ್ವಾಮ್ಯತೆ ಮಾಡಿಕೊಂಡಿದ್ದು, ಇದನ್ನು ತಪ್ಪಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಎಲ್ಲ ಬಿಬಿಎಂಪಿ ವಾರ್ಡ್ ಗಳಲ್ಲಿ ಮೀನು ಆಹಾರ ಮಳಿಗೆ ಪ್ರಾರಂಭ :

ಬಿಬಿಎಂಪಿ ವಲಯಗಳಲ್ಲಿ ಮೀನಿನ ಆಹಾರಕ್ಕೆ ಬಹಳ ಬೇಡಿಕೆಯಿದೆ. ಪ್ರತಿಯೊಂದು ವಾರ್ಡಿನಲ್ಲಿ 1500-2000 ಚ.ಮೀ. ವಿಸ್ತೀರ್ಣದಲ್ಲಿ ಮೀನಿನ ಆಹಾರವನ್ನು ಒದಗಿಸುವ ಮಳಿಗೆಯನ್ನು ಪ್ರಾರಂಭಿಸುವ ಯೋಜನೆ ಇದೆ.

ಬೆಂಗಳೂರಿನ 243 ವಾರ್ಡ್ ಗಳಲ್ಲಿಯೂ ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಖಾಸಗಿ ವಲಯದವರು ಇಲ್ಲಿ ಮಳಿಗೆಯನ್ನು ತೆರೆಯಬಹುದು. ಬೆಂಗಳೂರು ನಗರದಲ್ಲಿ ಈ ಯೋಜನೆ ಸಫಲವಾದರೆ, ರಾಜ್ಯದ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.

1 ಲಕ್ಷ ಮೀನುಗಾರರ ಮಕ್ಕಳಿಗೆ ರೈತವಿದ್ಯಾನಿಧಿ ನೀಡುವ ಗುರಿ :

ಇದೇ ವರ್ಷ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿತರಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ವಿದ್ಯಾನಿಧಿ ಯೋಜನೆಯನ್ನು 14 ಲಕ್ಷ ಜನ ರೈತಮಕ್ಕಳಿಗೆ ಕೊಡುತ್ತಿದ್ದೇನೆ. ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿದಿ ಯೋಜನೆ ವಿಸ್ತರಿಸಲಾಗಿದೆ ಎಂದರು.