ಕಾರವಾರ: ಕರ್ನಾಟಕದ ಜನತೆಯ ತೀವ್ರ ಒತ್ತಡ, ರಾಜಕೀಯ ಮುಖಂಡರ ಕೋರಿಕೆಯ ಮೇರೆಗೆ ಗೋವಾ ಸರಕಾರವು ಅಂತೂ ತನ್ನ ಗಡಿ ನಿರ್ಬಂಧವನ್ನು ತೆರವುಗೊಳಿಸಿದ್ದು ಇಂದಿನಿಂದ ಗೋವಾ ಪ್ರವೇಶಿಸುವ ಎಲ್ಲಾ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿವೆ.

ಇಂದು ಬೆಳಿಗ್ಗೆಯಿಂದಲೇ ಗೋವಾದತ್ತ ಉದ್ಯೋಗಿಗಳು ತಮ್ಮ ತಮ್ಮ ವಾಹನಗಳಲ್ಲಿ ಪ್ರಯಾಣಿಸಿದ್ದು ಅವರಿಗೆ ಯಾವುದೇ ತಡೆ ಒಡ್ಡಲಾಗಿಲ್ಲ. ಕೊರೋನಾ ಮಹಾಮಾರಿಯ ನಿಮಿತ್ತ ಕಳೆದ 5 ತಿಂಗಳ ದೀರ್ಘಾವಧಿಯ ನಿರ್ಬಂಧದ ಬಳಿಕ ಇದೀಗ ಮತ್ತೆ ಗಡಿ ತೆರೆದುಕೊಂಡಿದ್ದು ಗೋವಾದಲ್ಲಿ ಉದ್ಯೋಗ ಮಾಡುತ್ತಿದ್ದ ಉತ್ತರ ಕನ್ನಡದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಗೋವಾ ರಾಜ್ಯ ಪ್ರವೇಶಿಸುವ ಎಲ್ಲಾ ಮಾರ್ಗಗಳು ಸೆ.1ರಿಂದ ಮುಕ್ತವಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನಿನ್ನೆಯೇ ತಿಳಿಸಿದ್ದರು. ಈಗಾಗಲೇ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಹೊರಡಿಸಿದ್ದು, ಅದನ್ನು ಗೋವಾದಲ್ಲಿ ಜಾರಿಗೆ ತರಲಾಗುತ್ತದೆ. ಲಾಕ್ ಡೌನ್ ಮತ್ತು ಸಾಂಕ್ರಾಮಿಕ ರೋಗದ ನಿಯಂತ್ರಣದ ಎಲ್ಲಾ ನಿಯಮಗಳನ್ನು ಗೋವಾ ಸರ್ಕಾರ ಇಲ್ಲಿಯವರೆಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

ಗೋವಾಕ್ಕೆ ಬಂದು ಹೋಗುವ ನೆರೆ ರಾಜ್ಯದ ಯಾರನ್ನೂ ನಾವು ತಡೆದಿಲ್ಲ. ಆದರೆ ಕೊರೋನಾದ ಭಯ ಮತ್ತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೇರಿದ್ದ ಕಾರಣ ಗಡಿಗಳನ್ನು ಮುಚ್ಚಲಾಗಿತ್ತು. ಈಗ ಕೇಂದ್ರ ಸರ್ಕಾರವು ನಿಷೇಧವನ್ನು ತೆಗೆದು ಹಾಕಿದ್ದು, ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಸಿಲುಕಿಕೊಂಡವರು ತಮ್ಮ ತವರಿಗೆ ಮರಳಲು, ಕೆಲಸಕ್ಕಾಗಿ ಗೋವಾಕ್ಕೆ ಬಂದವರಿಗೆ ಮರಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದರು. ಅವರು ಹೇಳಿದಂತೆ ಇಂದಿನಿಂದ ಗಡಿ ಸಂಚಾರ ಪುನರಾರಂಭವಾಗಿದೆ.

ಗೋವಾ ಪ್ರವೇಶಿಸವವರಿಗೆ 2000 ರೂ. ಪಡೆಯುತ್ತಿದ್ದ ಗೋವಾ ಸರಕಾರ:
ಕಳೆದ ಮಾರ್ಚ್ನಲ್ಲಿ ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ತಾನೇ ಹೇರಿದ್ದ ಅಂತರರಾಜ್ಯ ಗಡಿ ಸಂಚಾರ ನಿರ್ಬಂಧವನ್ನು ಕೇಂದ್ರ ಸರಕಾರವು ವಾರದ ಹಿಂದೆಯೇ ಹಿಂಪಡೆದಿದ್ದರೂ ಗೋವಾ ಸರಕಾರ ಮಾತ್ರ ತನ್ನ ನೀತಿಯನ್ನು ಬದಲಿಸಿರಲಿಲ್ಲ. ಗೋವಾ ಪ್ರವೇಶಿಸುವ ಅವಶ್ಯಕ ವಸ್ತುಗಳ ಸರಕು ಸಾಗಾಣಿಕೆ ವಾಹನಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಪ್ರಯಾಣಿಕರ ವಾಹನಗಳಿಗೆ ಪ್ರವೇಶ ನೀಡುತ್ತಿರುಲಿಲ್ಲ. ಒಂದು ವೇಳೆ ಗೋವಾಗೆ ಪ್ರವೇಶಿಸಲೇ ಬೇಕೆಂದರೆ ಗಡಿಯಲ್ಲಿ 2000 ರೂ. ಶುಲ್ಕ ಪಾವತಿಸಬೇಕಿತ್ತು. ಬಳಿಕ ಅವರ ಗಂಟಲದ್ರವವನ್ನ ಪರೀಕ್ಷಿಸಿ ವರದಿ ನೆಗೆಟಿವ್ ಬಂದರೆ ಪ್ರವೇಶ ನೀಡಲಾಗುತ್ತಿತ್ತು. ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ನಿರ್ಬಂಧ ತೆರವಿಗೆ ಆಗ್ರಹಿಸಿದ್ದ ಜನತೆ:
ಆದರೆ ಗೋವಾ ಗಡಿಭಾಗವಾದ ಕಾರವಾರ ಹಾಗೂ ಅಂಕೋಲಾಗಳಿAದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಉದ್ಯೋಗಕ್ಕಾಗಿ ಗೋವಾವನ್ನೇ ಅವಲಂಬಿಸಿದ್ದಾರೆ. ಇವರೆಲ್ಲರೂ ಲಾಕ್ಡೌನ್ಗೂ ಮುನ್ನ ಪ್ರತಿ ದಿನ ಗೋವಾ ಹೋಗಿ ಬರುವುದು ಮಾಡುತ್ತಿದ್ದರು. ಆದರೆ ಗೋವಾ ಸರಕಾರದ ಈ ನಿಯಮದಿಂದಾಗಿ ಹಲವರು ತಮ್ಮ ಕೆಲಸವನ್ನೇ ಕಳೆದುಕೊಂಡರೆ ಹಲವರು ಒಮ್ಮೆ 2000 ಪಾವತಿಸಿ ಗೋವಾ ಪ್ರವೇಶಿಸಿ ಅಲ್ಲಿಯೇ ಬಾಡಿಗೆ ರೂಮುಗಳನ್ನು ಪಡೆದು ಇರುತ್ತಿದ್ದರು. ಆದರೂ ತುರ್ತು ಕಾರ್ಯವಿದ್ದಾಗ ಇವರು ತಮ್ಮ ತವರಿಗೆ ಮರಳಲೇ ಬೇಕಾಗುತ್ತಿದ್ದು ಮತ್ತೆ ವಾಪಸ್ಸು ಉದ್ಯೋಗಕ್ಕೆ ತೆರಳುವಾಗ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ಈ ನಿಯಮವನ್ನು ಸಡಿಲಿಸುವಂತೆ ಹಲವಾರು ಬಾರಿ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಸತೀಶ ಸೈಲ್, ಆನಂದ ಅಸ್ನೋಟಿಕರ್, ವಿವಿಧ ಸಂಘಟನೆಗಳ ಮುಖಂಡರು ಮನವಿ ಮಾಡುತ್ತಲೇ ಬಂದಿದ್ದರು. ಆದರೂ ಗೋವಾ ಸಿಎಂ ಪ್ರಮೋದ ಸಾವಂತ ಮಾತ್ರ ನಮ್ಮ ಗೋವಾದ ಜನರ ಆರೋಗ್ಯವೇ ನನಗೆ ಮುಖ್ಯವಾಗಿದ್ದು ಯಾವುದೇ ಕಾರಣಕ್ಕೂ ಗಡಿ ನಿರ್ಬಂಧ ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಕೇಂದ್ರ ಸರಕಾರದ ಆದೇಶಕ್ಕೂ ಕೇರ್ ಮಾಡಿರಲಿಲ್ಲ:
ಈ ಮಧ್ಯೆ ಆಗಸ್ಟ್ ಕೊನೇಯ ವಾರದಲ್ಲಿ ಕೇಂದ್ರ ಸರಕಾರವೇ ತಾನು ವಿಧಿಸಿದ್ದ ಅಂತರರಾಜ್ಯ ಗಡಿ ನಿರ್ಬಂಧವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಡುವಂತೆ ಆದೇಶಿಸಿತ್ತು. ಆದೇಶದ ಮರುಕ್ಷಣವೇ ಕರ್ನಾಟಕ ಸರಕಾರವು ತನ್ನ ಎಲ್ಲಾ ಅಂತರರಾಜ್ಯ ಗಡಿ ನಿರ್ಬಂಧವನ್ನು ತೆರವುಗೊಳಿಸಿ ಗೋವಾ ಸೇರಿದಂತೆ ಎಲ್ಲಾ ರಾಜ್ಯಗಳ ವಾಹನಗಳ ಪ್ರವೇಶಕ್ಕೂ ಮುಕ್ತ ಅವಕಾಶ ಕಲ್ಪಿಸಿತ್ತು. ಕೇಂದ್ರದ ಈ ಆದೇಶದಿಂದ ಗೋವಾ ತೆರಳುವ ಕರ್ನಾಟಕದ ಜನತೆಯೂ ಖುಷಿ ಪಟ್ಟಿದ್ದರು. ಆದರೆ ಕೇಂದ್ರದ ಆದೇಶವಿದೆ ಎಂದು ಗೋವಾಗೆ ಹೋಗಲು ಗಡಿಗೆ ತೆರಳಿದ್ದ ಜನರಿಗೆ ಶಾಕ್ ಕಾದಿತ್ತು. ನಮ್ಮ ಸರಕಾರ ಇನ್ನೂ ಗಡಿ ನಿರ್ಬಂಧ ತೆರವುಗೊಳಿಸಿಲ್ಲ ಎಂದು ಗಡಿಯಲ್ಲಿದ್ದ ಅಧಿಕಾರಿಗಳು ಇವರನ್ನು ವಾಪಾಸ್ ಕಳುಹಿಸಿದರೆ ಕೆಲವರು 2000 ಭರಿಸಿ ಮುಂದೆ ಸಾಗಿದ್ದರು. ಆದರೆ ಗೋವಾ ಸರಕಾರದ ಈ ನಡೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.

ಮಾಜಿ ಶಾಸಕರಿಂದ ಪ್ರತಿಭಟನೆಯ ಎಚ್ಚರಿಕೆ:
ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕ ಸತೀಶ ಸೈಲ್ ಅವರು ಗೋವಾ ತನ್ನ ನೀತಿಯನ್ನು ಬದಲಿಸದಿದ್ದರೆ ಆಗಸ್ಟ್ 29ರಂದು ಗೋವಾ ಹಾಗೂ ಕಾರವಾರದ ಗಡಿ ಪ್ರದೇಶವಾದ ಪೊಲೇಮ್ನಲ್ಲಿ ರಸ್ತೆ ತಡೆ ಚಳುವಳಿ ನಡೆಸುವುದಾಗಿ ಆಗಸ್ಟ್ 27ರಂದು ಎಚ್ಚರಿಸಿದ್ದರು. ಗೋವಾದಿಂದ ಬರುವ ಹಾಲು, ಔಷಧ ವಸ್ತುಗಳು ಹೊರತು ಪಡಿಸಿ ಉಳಿದ ಯಾವುದೇ ವಾಹನಗಳನ್ನು ಕರ್ನಾಟಕದ ಗಡಿಯೊಳಗೆ ಸೇರಿಸುವುದಿಲ್ಲ ಎಂದು ಎಚ್ಚರಿಸಿದ್ದರು.
ಆದರೆ ಈ ಮಧ್ಯೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಗೋವಾ ಸಿಎಂ ಪ್ರಮೋದ ಸಾವಂತ ಅವರೊಂದಿಗೆ ಮಾತನಾಡಿದಾಗ ಅವರು ಸೆಪ್ಟೆಂಬರ್ 1 ರಿಂದ ಗಡಿ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಸೈಲ್ ತಮ್ಮ ಪ್ರತಿಭಟನೆಯನ್ನು ಮುಂದೂಡಿ ಸೆ. 1 ರಂದು ನಿರ್ಬಂಧ ತೆರವುಗೊಳಿಸದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದ್ದರು.

ವಿವಿಧ ಸಂಘಟನೆಗಳಿಂದ ಗಡಿಯಲ್ಲಿ ಹೋರಾಟ:
ಗಡಿ ನಿರ್ಬಂಧ ತೆರವುಗೊಳಿಸದ ಹಿನ್ನೆಲೆಯಲ್ಲಿ ಕನ್ನಡ ವಾಟಾಳ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲವು ಸಂಘಟನೆಗಳು ಆ.29ರಂದು ಪೊಲೇಮ್ ಗಡಿಯಲ್ಲಿ ಹೋರಾಟ ಮಾಡಿದ್ದವು. ಸ್ಥಳದಲ್ಲಿ ಜಮಾಯಿಸಿದ್ದ ಸುಮಾರು ಇನ್ನೂರರಷ್ಟು ಜನರು ಗೋವಾ ಸರಕಾರದ ನಿಯಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಗೋವಾ ಅಧಿಕಾರಿಗಳು ಸರಕಾರದ ನಿಯಮದಂತೆ ತಾವು ನಡೆದುಕೊಳ್ಳುತ್ತೇವೆ ಎಂದು ಹೇಳಿ ಹೋಗಿದ್ದರು. ಬಳಿಕ ಪ್ರತಿಭಟನಾಕಾರರು ಆ.31 ರವರೆಗೆ ಅವಕಾಶ ನೀಡಿ ಒಂದು ವೇಳೆ ಸೆ.1 ರಿಂದ ಗಡಿ ನಿರ್ಬಂಧ ತೆರವು ಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದರು.

ಅಂತೂ ವಿವಿಧ ಸಂಘಟನೆಗಳ ಹೋರಾಟ, ಮಾಜಿ ಶಾಸಕರ ಎಚ್ಚರಿಕೆ ಹಾಗೂ ಹಾಲಿ ಶಾಸಕಿಯ ಕೋರಿಕೆಯ ಮೇರೆಗೆ ಇಂದಿನಿಂದ ಗೋವಾ ಗಡಿ ಸಂಚಾರದ ವಿವಾದ ಬಗೆ ಹರಿದಿದ್ದು ಗೋವಾ ಸಿಎಂ ಪ್ರಮೋದ ಸಾವಂತ ಗಡಿ ನಿರ್ಬಂಧವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ಗೋವಾ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.