ಕಾರವಾರ: ಅರಬ್ಬಿ ಸಮುದ್ರದಲ್ಲಿ ಮತ್ತೆ ಕಾರ್ಗಿಲ್ ಮೀನು ಕಾಣಿಸಿಕೊಂಡಿದ್ದು, ಮೀನುಗಾರರಲ್ಲಿ ಮತ್ಸ್ಯಕ್ಷಾಮದ ಭೀತಿ ಆವರಿಸಿದೆ.

ಬೈತಖೋಲ್ ಬಂದರಿನ ಕೆಲ ಬೋಟ್ ಗಳ ಬಲೆಗೆ ಕಾರ್ಗಿಲ್ ಮೀನು ಬಿದ್ದಿದೆ. ವಿಚಿತ್ರವಾಗಿ ಕಾಣುವ ಈ ಮೀನು ಬಲೆಗೆ ಬಿದ್ದರೆ ಆ ವರ್ಷ ಮತ್ಸ್ಯಕ್ಷಾಮ ಬರುತ್ತದೆ ಎನ್ನುವ ಭಯ ಇದೆ. ಹಿಂದಿನ ವರ್ಷವೂ ಇದೇ ಮೀನು ಬೋಟ್ ಗಳ ಬಲೆ ಬಿದ್ದಿದ್ದವು. ಆಗ ಮತ್ಸ್ಯಕ್ಷಾಮ ಸೃಷ್ಟಿಯಾಗಿ ಮೀನುಗಾರರು ತೀರಾ ಕಷ್ಟ ಅನುಭವಿಸಿದ್ದರು.

ಇದೇ ವರ್ಷ ಇನ್ನೇನು ಮೀನುಗಾರಿಕೆ ಕೈ ಹಿಡಿಯುತ್ತಲೇ ಎನ್ನುವಾಗ ತೂಫಾನ್ ಆವರಿಸಿತು. ಅದು ಮುಗಿಯಿತು ಎನ್ನುವಾಗಲೇ ಕಾರ್ಗಿಲ್ ಮೀನು ಕಾಣಿಸಿಕೊಂಡಿದೆ. ಈ ಮೀನು ಇದ್ದಲ್ಲಿ ಬೇರೆ ಮೀನುಗಳು ಇರುವುದಿಲ್ಲ. ಮೀನುಗಾರಿಕೆ ಪ್ರದೇಶದಲ್ಲಿ ಈ ಮೀನುಗಳು ಕಾಣಿಸಿಕೊಂಡರೆ ಮತ್ಸ್ಯೋದ್ಯಮದ ಮೇಲೆ ಆತಂಕ ಆವರಿಸುತ್ತದೆ.

ಸದ್ಯ ಅರಬ್ಬಿ ಸಮುದ್ರದಲ್ಲಿ ಕೇರಳದಿಂದ ರತ್ನಗಿರಿ ವರೆಗೆ  ಕಾರ್ಗಿಲ್ ಮೀನುಗಳು ಕಾಣಿಸಿಕೊಂಡಿವೆ. ಮೀನುಗಾರರ ಬಲೆಗೆ ಬೀಳುತ್ತಿದೆ.

ಏನಿದು ಕಾರ್ಗಿಲ್ ಮೀನು?

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈ ಮೀನು ಕಾಣಿಸಿಕೊಂಡಿದ್ದಕ್ಕಾಗಿ ಇದನ್ನು ಕಾರ್ಗಿಲ್ ಮೀನು ಎಂದು ಕರೆಯುತ್ತಾರೆ. ಈ ಮೀನು ಕಪ್ಪಗಾಗಿದ್ದು, ದುರ್ವಾಸನೆ ಹೊಂದಿದೆ. ಸಾಮಾನ್ಯವಾಗಿ ಇವು ಅಂಡಮಾನ್ ದ್ವೀಪಗಳಲ್ಲಿ ಕಾಣಸಿಗುತ್ತಿದ್ದವು. ಈಗ ಕೇರಳದಿಂದ ರತ್ನಗಿರಿ ವರೆಗೆ ಕಾಣುತ್ತಿವೆ.

ಈ ಮೀನುಗಳು ವಿಚಿತ್ರವಾಗಿ ಸದ್ದು ಮಾಡುತ್ತ ಸಾಗುವುದರಿಂದ ಈ ಮೀನುಗಳು ಇದ್ದಲ್ಲಿ ಉಳಿದ ಮೀನುಗಳು ಇರುವುದಿಲ್ಲ. ಕಾರ್ಗಿಲ್ ಮೀನುಗಳು ತೀರದ ಕಡೆಗೆ ಬಂದರೆ ತೀರದ ಮೀನುಗಳು ಆಳ ಸಮುದ್ರೆಡೆ ಸಾಗುತ್ತವೆ. ಸೆಪ್ಟೆಂಬರ್ ನಿಂದ ನವೆಂಬರ್ ಮೀನುಗಾರಿಗೆ ಹಂಗಾಮು ಆಗಿದೆ. ಇದೇ ವೇಳೆಯೇ ಕಾರ್ಗಿಲ್ ಮೀನು ಕಾಣಿಸಿಕೊಂಡಿದ್ದಕ್ಕೆ ಮೀನುಗಾರರು ಚಿಂತೆಗೀಡಾಗಿದ್ದಾರೆ.