ಬೆಳಗಾವಿ: ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಿಲ್ಲ ಅಂದ ಮಾತ್ರಕ್ಕೆ ಅವರನ್ನು ಬಹಿಷ್ಕಕರಿಸಲಾಗಿದೆ ಎಂದಲ್ಲಾ, ಇಬ್ಬರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ಅವರು ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಚಿಂತನೆಯಲ್ಲಿದ್ದಾರೆ. ಅವರ ಈ ನಿಲುವು ಸರಿಯಾಗಿದೆ.

ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಸಿಬಿಐ ದಾಳಿ
ಸಿಬಿಐ ದಾಳಿ ಕುರಿತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಉತ್ತರಿಸಿ ಸಿಎಂ, ಸಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ ಬಳಿ ಇರುವ ಪ್ರಕರಣದ ಆಧಾರದ ಮೇಲೆ ಅವರು ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರ ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿದೆ ಎಂದರು.

ಹಾಲಾಲ್ ಕಟ್
ಹಾಲಾಲ್ ಕಟ್ ಕುರಿತು ಸುದ್ದಿದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಹಾಲಾಲ್ ವಿಷಯಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.