ಮಧ್ಯಪ್ರದೇಶ: ನಾಲ್ಕು ಕಾಲುಗಳಿರುವ ಅಪರೂಪದ ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಸಂಭವಿಸಿದ್ದು, ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗ್ವಾಲಿಯರ್ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಬುಧವಾರ (14/12/2022) ನಾಲ್ಕು ಕಾಲಿನ ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಆಸ್ಪತ್ರೆಯ ಅಧೀಕ್ಷಕರೊಂದಿಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷೆ ಮಾಡಿದೆ. ನವಜಾತ ಶಿಶು ಆರೋಗ್ಯವಾಗಿದ್ದು, ಅದರ ತೂಕ 2.3 ಕೆಜಿ ಇದೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ. ಆರ್.ಕೆ.ಎಸ್ ಧಕಡ್ ಎಎನ್‌ಐಗೆ ತಿಳಿಸಿದ್ದಾರೆ.

ತಾಯಿ ಕೂಡ ಆರೋಗ್ಯವಾಗಿದ್ದು, ಮಗುವಿಗೆ ನಾಲ್ಕು ಕಾಲುಗಳಿವೆ. ಆ ಮಗು ದೈಹಿಕ ವಿಕಲತೆ ಹೊಂದಿದ್ದು, ಇಂತಹ ಸಮಸ್ಯೆ ಕಂಡುಬರುವುದು ಸಹಜ. ಕೆಲವೊಂದು ಭ್ರೂಣಗಳಲ್ಲಿ ಇಂತಹ ಹೆಚ್ಚುವರಿ ಅಂಗಗಳು ಕಂಡು ಬರುತ್ತದೆ. ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ. ಅಂತ ಸಂದರ್ಭದಲ್ಲಿ ಈ ರೀತಿಯ ಅಪರೂಪದ ಮಕ್ಕಳ ಜನನವಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗದಲ್ಲಿ ಎರಡು ಹೆಚ್ಚುವರಿ ಕಾಲುಗಳು ಬೆಳವಣಿಗೆಯಾಗಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ. ಅವು ಚಾಲನಾ ಶಕ್ತಿಯನ್ನು ಹೊಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳ ವಿಭಾಗದ ವೈದ್ಯರು ಈ ಮಗುವಿನ ದೇಹದ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ತಪಾಸಣೆ ನಡೆಸಿದ್ದಾರೆ. ಈ ಪರೀಕ್ಷೆ ಬಳಿಕ ಆಕೆ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಆ ಹೆಚ್ಚುವರಿ ಕಾಲುಗಳನ್ನು ತೆಗೆಯಲಾಗುತ್ತದೆ. ಇದರಿಂದ ಆ ಮಗು ಸಹಜ ಜೀವನ ನಡೆಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಅಧೀಕ್ಷಕರ ಪ್ರಕಾರ ಸದ್ಯ ಕಮಲರಾಜ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಈ ಮಗುವನ್ನು ಇರಿಸಲಾಗಿದೆ. ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸದ್ಯ ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

ಈ ರೀತಿಯ ಅಪರೂಪದ ಮಗು ಜನಿಸಿರುವುದು ಇದೇ ಮೊದಲೆನಲ್ಲ. ಇದೇ ವರ್ಷ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು 2 ತಲೆ, 3 ಕೈಗಳು ಮತ್ತು 2 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು ಎಂದು ಡಾ.ಬ್ರಜೇಶ್ ಲಾಹೋಟಿ ಎಎನ್‌ಐಗೆ ತಿಳಿಸಿದ್ದಾರೆ.