ಗಾಳಿಯ ಹೊಡೆತಕ್ಕೆ ಕಾರವಾರ ಬೀಚ್ ಗೆ ಬಂದು ಬಿದ್ದ ಬೋಟುಗಳು

ಕಾರವಾರ: ಅರಬ್ಬಿ ಸಮುದ್ರದಲ್ಲಿ ಗಾಳಿ ಅಬ್ಬರ ಜೋರಾಗಿದ್ದು, ಭಾನುವಾರ ಗಾಳಿ ಹೊಡೆತಕ್ಕೆ ಸಿಕ್ಕ ಎರಡು ಬೋಟುಗಳು ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಬಂದು ಬಿದ್ದಿವೆ.
ಮಲ್ಪೆಯ ಎರಡು ಬೋಟ್ ಗಳು ರಾತ್ರಿ ಸಮಾರು 2.30ರಷ್ಟೊತ್ತಿಗೆ ಕಾರವಾರ ಬಂದರಿಗೆ ಬರಲು ಯತ್ನಿಸಿದ್ದವು. ಆ ವೇಳೆ ಗಾಳಿಗೆ ನಿಯಂತ್ರಣ ತಪ್ಪಿ ಅಲೆಗಳ ರಭಸಕ್ಕೆ ಸಿಲುಕಿ ಕಾರವಾರದ ಬೀಚ್ ನಲ್ಲಿ ಬಂದು ಉಸುಕಿನಲ್ಲಿ ಸಿಲುಕಿಕೊಂಡಿವೆ. ಕಾರವಾರ ನಗರದ ಆರ್ ಟಿಓ ಕಚೇರಿ ಎದುರು ಇರುವ ಬೀಚ್ ನಲ್ಲಿ ಈ ಬೋಟುಗಳು ಇವೆ.
ಅದರ ಜತೆಯಲ್ಲಿಯೇ ನಾಡ ದೋಣಿ ಕೂಡ ಗಾಳಿ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದು ಬಿದ್ದಿದೆ. ಆ ದೋಣಿ ಕೂಡ ಹಾನಿಗೊಂಡಿವೆ. ಅದೃಷ್ಟವಶಾತ್ ಬೋಟ್ ನಲ್ಲಿದ್ದ ಮೀನುಗಾರರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೋಟುಗಳಿಗೆ ಹಾನಿಯಾಗಿವೆ.
ಅರಬ್ಬಿ ಸಮುದ್ರದಲ್ಲಿ ತೂಫಾನ್ ಹೆಚ್ಚಾಗಿರುವುದರಿಂದ ಎಲ್ಲೆಡೆ ರೆಡ್ ಅಲರ್ಟ್ ಘೊಷಣೆ ಮಾಡಲಾಗಿದೆ. ಆದರೆ, ಕಳೆದ ವರ್ಷದ ಮತ್ಸ್ಯಕ್ಷಾಮ, ಈ ವರ್ಷದ ಕೊರೊನಾದಿಂದ ಮೀನುಗಾರರ ಬದುಕು ಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಕೆಲ ಮೀನುಗಾರರು ತೂಫಾನ್ ನಡುವೆಯೂ ಸಮುದ್ರಕ್ಕಿಳಿಯುವ ಸಾಹಸ ಮಾಡಿ ಅಪಾಯಕ್ಕೆ ಸಿಲುಕುತ್ತಿರುವುದು ಶೋಚನೀಯವಾಗಿದೆ.
ಕಳೆದೆರಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೋಟುಗಳೇ ಹೆಚ್ಚಾಗಿ ಇಂಥ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ. ಎರಡೇ ದಿನಗಳಲ್ಲಿ ಉಡುಪಿ, ಮಂಗಳೂರು ಸೇರಿ ಸುಮಾರು 4-5 ಬೋಟುಗಳು ಮುಳುಗಡೆಯಾಗಿವೆ. ಗಾಳಿಯ ಒತ್ತಡದ ನಡುವೆಯೂ ಸಮುದ್ರಕ್ಕಿಳಿದ ಹಲವು ಬೋಟುಗಳು ಕಾರವಾರ ಬಂದರಿನಲ್ಲಿ ಲಂಗರು ಹಾಕಿಕೊಂಡಿವೆ.
ನಿನ್ನೆಯಷ್ಟೇ ಅಳ್ವೆಕೋಡಿಯಲ್ಲಿ ಮೀನುಗಾರಿಕೆಗೆ ತೆರಳಿ ಗಾಳಿಯ ಅಬ್ಬರದಿಂದ ಮೀನುಗಾರರು ದೋಣಿ ಬಿಟ್ಟು ಜೀವ ಉಳಿಸಿಕೊಂಡಿದ್ದಾರೆ. ನಾಲ್ವರು ಮೀನುಗಾರರು ಬದುಕಿಗಾಗಿ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಅವರನ್ನು ಕಾಪಾಡಲು ಮೀನುಗಾರರೇ ಸಮುದ್ರಕ್ಕಿಳಿಯುವ ಸಂದರ್ಭ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಸಮುದ್ರದಲ್ಲೇ ದೋಣಿ ಬಿಟ್ಟು ದಡ ಸೇರಿದ ಮೀನುಗಾರರು
ವಾಯು ವಿಹಾರಿಗಳು ಕಂಗಾಲು
ಬೆಳಗ್ಗೆ ವಾಯು ವಿಹಾರಕ್ಕೆ ಹೊರಟವರು ದಡದಲ್ಲಿ ಬಿದ್ದಿರುವ ಬೋಟುಗಳನ್ನು ನೋಡಿ ಕಂಗಾಲಾಗಿದ್ದಾರೆ. ಮಲ್ಪೆ ಮೂಲದ ಎರಡು ಬೋಟುಗಳು ಮನುಷ್ಯರೇ ಎಳೆತಂದು ನಿಲ್ಲಿಸಿದ ರೀತಿಯಲ್ಲಿ ದಡಕ್ಕೆ ಬಂದಿವೆ. ಈಗ ನೀರಿನ ಮಟ್ಟ ಕಡಿಮೆ ಇರುವುದರಿಂದ ಬೋಟುಗಳು ಉಸುಕಿನಲ್ಲಿ ಸಿಲುಕಿಕೊಂಡಿದೆ.
