ಕಾರವಾರ: ತೂಫಾನ್ ನಿಂದಾಗಿ ದಡಕ್ಕೆ ಬರಲಾಗದೆ ಅರಬ್ಬಿ ಸಮುದ್ರದ ಮಧ್ಯದಲ್ಲಿಯೇ ಸಿಲುಕಿದ್ದ ಅಳ್ವೆಕೋಡಿ ಮೀನುಗಾರರನ್ನು ಎಂಟು ತಾಸಿನ ಬಳಿಕ ಮೀನುಗಾರರೇ ಕಾಪಾಡಿದ್ದಾರೆ.

ಮೀನುಗಾರಿಕೆ ದೋಣಿಯನ್ನು ಸಮುದ್ರದಲ್ಲಿಯೇ ಬಿಟ್ಟು ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ನೆರವು ಇಲ್ಲದೆ, ಮೀನುಗಾರರೇ ಮೀನುಗಾರರನ್ನು ಕಾಪಾಡಿ ದಡಕ್ಕೆ ತಂದಿದ್ದಾರೆ. ಆದರೆ, ದೋಣಿ ಸಮುದ್ರ ಮಧ್ಯದಲ್ಲಿಯೇ ಇದ್ದು, ಮೀನುಗಾರರ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಬೆಳಗ್ಗೆ 6ಕ್ಕೆ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುವಾರರು ಬೆಳಗ್ಗೆ 8 ಗಂಟೆಗೇ ವಾಪಸ್ ಮರಳುವವರಿದ್ದರು. ಆದರೆ, ತೂಫಾನ್ ಆಗಿದ್ದರಿಂದ ದೋಣಿಯನ್ನು ತಡಕ್ಕೆ ತರಲು ಆಗಲೇ ಇಲ್ಲ. ಸ್ವಲ್ಪ ಪ್ರಯತ್ನಿಸಿದರೂ ಅಲೆಗಳ ರಭಸಕ್ಕೆ ದೋಣಿ ಸಮುದ್ರದ ಆಳಕ್ಕೆ ತಿರಗುತ್ತಿತ್ತು. ಹಾಗಾಗಿ ಮೀನುಗಾರರು ಜೀವ ಉಳಿಸಿಕೊಳ್ಳಲು ನೆರವು ಬೇಡಿದ್ದೆವು ಎಂದು ಸಚಿನ್ ತಿಳಿಸಿದರು.

ಈ ಮಧ್ಯೆ ನಾಲ್ವರು ಮೀನುಗಾರರು ದೋಣಿಯ ಎಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ. ಮೀನುಗಾರರು ಅವರನ್ನು ಕಾಪಾಡುವಂತೆ ಮೀನುಗಾರಿಕೆ ಇಲಾಖೆ ನಿರ್ದೇಶಕರು ಮನವಿ ಮಾಡಿರುವ ಪ್ರಕಟಣೆಯೊಂದು ವಾಟ್ಸಾಪ್ ನಲ್ಲಿ ಹರಿದಾಡಿತ್ತು. ಆದರೆ, ಕರಾವಳಿ ರಕ್ಷಣೆಗಾಗಿಯೇ ಇರುವ ಯಾವ ಇಲಾಖೆಯೂ ನೆರವಿಗೆ ಬರಲಿಲ್ಲ.

ಸಂಜೆ 4.45 ರಷ್ಟೊತ್ತಿಗೆ ಸಚಿನ್ ಅವರ ಸಂಬಂಧಿಕರೇ ಬೇರೊಂದು ದೋಣಿ ಮೂಲಕ ಸಮುದ್ರಕ್ಕೆ ಇಳಿದರು. ಸಚಿನ್ ಅವರು ಇದ್ದ ದೋಣಿ ದೊಡ್ಡದಾಗಿದ್ದರಿಂದ ಅದನ್ನು ದಡಕ್ಕೆ ತರಲು ಆಗಲಿಲ್ಲ. ತೂಫಾನ್ ಹೆಚ್ಚಾಗಿದ್ದಕ್ಕೆ ಮೊದಲು ಜನರ ಜೀವ ಉಳಿಸುವುದಕ್ಕಾಗಿ ದೋಣಿಯನ್ನು ಸಮುದ್ರದಲ್ಲಿ ಲಂಗರು ಹಾಕಿ ಬಿಟ್ಟು ಬಂದಿದ್ದಾರೆ. ಸಂಜೆ ಸುಮಾರು 5 ಗಂಟೆಯಷ್ಟೊತ್ತಿಗೆ ಮೀನುಗಾರರು ಮೀನುಗಾರರ ನೆರವಿನಿಂದ ದರ ಸೇರಿದ್ದಾರೆ.

ಅನ್ನ ನೀಡಿದ ದೋಣಿ ನೀರು ಪಾಲು

ಜನರ ಜೀವ ಉಳಿಸುವುದಕ್ಕಾಗಿ ದೋಣಿಯನ್ನು ಸಮುದ್ರ ಮಧ್ಯದಲ್ಲಿಯೇ ಬಿಟ್ಟು ಬಂದಿರುವ ಮೀನುಗಾರರು ಈಗ ಲಕ್ಷಾಂತರ ರೂ. ಬೆಲೆ ದೋಣಿ ಕಳೆದುಕೊಳ್ಳುವ ಸಂಕಟದಲ್ಲಿದ್ದಾರೆ.

ಕರಾವಳಿಯಲ್ಲಿ ಮಳೆ ಜೋರಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದೇ ರೀತಿ ಮಳೆ ಸುರಿದರೆ ದೋಣಿಯಲ್ಲಿ ನೀರು ತುಂಬಿ ಮುಳುಗಲಿದೆ. ಇಷ್ಟು ದಿನ ಅನ್ನ ನೀಡಿದ ದೋಣಿ ನೀರು ಪಾಲಾಗಲಿದೆ. ದಯಮಾಡಿ ಏನಾದರೂ ಸಹಾಯ ಕೊಡಿಸಿ ಎಂದು ಸಚಿನ್ ಮರುಗಿದರು. ಮೀನುಗಾರರ ನಷ್ಟಕ್ಕೆ ಏನು ಪರಿಹಾರ ಇದೆ ಎನ್ನುವುದೇ ಗೊತ್ತಿಲ್ಲ. ಸರ್ಕಾರ ನೆರವು ಕೊಟ್ಟರೆ ನಮ್ಮ ಬುದುಕು ಉಳಿಯಲಿದೆ ಎನ್ನುವುದು ಮೀನುಗಾರ ಸಚಿನ್ ಅವರ ಕೊರಗು.