ಖಾಕಿ ಕಣ್ತಪ್ಪಿಸಲು 20kg ತೂಕ ಇಳಿಸಿದ್ದ ಕಳ್ಳ: ಕನ್ಫ್ಯೂಸ್ ಆದ ಪೊಲೀಸ್ರು ಮುಂದೆನಾಯ್ತು..?
ಬೆಂಗಳೂರು: ಸಿನಿಮಾಗಾಗಿ ತೂಕ ಇಳಿಸುವುದು, ಪಿಟ್ ಆಗಿ ಕಾಣಿಸಲು ವರ್ಕ್ ಔಟ್ ಮಾಡಿ ಸಣ್ಣ ಆಗೋದು ಇವೆಲ್ಲ ಕಾಮನ್. ಆದ್ರೆ, ಇಲ್ಲೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು 20 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾನೆ.
ಹೌದು, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಕಳ್ಳ, ಇದೀಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಐನಾತಿ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರೊಬ್ಬರಿ 20 ಕೆ.ಜಿ. ತೂಕ ಇಳಿಸಿದ್ದ ಈತನನ್ನು ನೋಡಿದ ಪೊಲೀಸರೆ ದಂಗಾಗಿದ್ದರು.
ಕತ್ರಿಗುಪ್ಪೆಯ ಸಿದ್ದಾರ್ಥ ಲೇಔಟ್ ನಿವಾಸಿ ಮಂಜುನಾಥ ಅಲಿಯಾಸ್ ಜಿಮ್ ಮಂಜ (28) ಬಂಧಿತ. ಆತನಿಂದ 2.20 ಲಕ್ಷ ರೂಪಾಯಿ ಮೌಲ್ಯದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ
2022ರ ಡಿಸೆಂಬರ್ 4 ರಂದು ಸಂಜೆ 6.30ರ ಸುಮಾರಿಗೆ ರುಕ್ಮಿಣಿ ಎಂಬುವರು ಪಾರ್ಕ್‌ನಲ್ಲಿ ವಾಯು ವಿಹಾರ ಮುಗಿಸಿ ಮನೆಗೆ ನಡೆದು ಹೋಗುವಾಗ ಹಿಂದಿನಿಂದ ಬಂದ ಆರೋಪಿ, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ಮಾತನಾಡಿಸಿದ್ದಾನೆ. ಬಳಿಕ ಮಹಿಳೆ ಕೊರಳಲ್ಲಿದ್ದ 45 ಗ್ರಾಂ ತೂಕದ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ರು.
20 ಕೆ.ಜಿ. ತೂಕ ಕಡಿಮೆ
ಈ ಪ್ರಕರಣದಲ್ಲಿ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಶೋಧಿಸಲಾಗುತ್ತಿತ್ತು. ಕ್ಯಾಮೆರಾದಲ್ಲಿ ದಪ್ಪವಾಗಿದ್ದ ವ್ಯಕ್ತಿ ಕಾಣಿಸಿಕೊಂಡಿದ್ದ. ಹೀಗಾಗಿ ಆತನ ದೇಹ ರಚನೆ ಮತ್ತು ಮುಖ ಚಹರೆ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇತ್ತ ಕಡೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜಿಮ್‌ಗೆ ಸೇರಿಕೊಂಡು ಬರೋಬ್ಬರಿ, 20 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದ.
ಈ ಆರೋಪಿ ಠಾಣೆ ಹಿಂದಿನ ಮನೆಯಲ್ಲೇ ಬಾಡಿಗೆಗೆ ವಾಸವಾಗಿದ್ದ. ಈ ಮಧ್ಯೆ ಕೆಲ ದಿನಗಳ ಹಿಂದೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಕೇವಲ ಒಂದೂವರೆ ತಿಂಗಳಲ್ಲಿ ಸಣ್ಣಗಾಗಿರುವುದನ್ನು ಕಂಡು ಪೊಲೀಸರು ಒಂದು ಕ್ಷಣ ಗೊಂದಲಕ್ಕೀಡಾಗಿದ್ದರು. ಕೊನೆಗೆ ಅನುಮಾನದ ಮೇರೆಗೆ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ 2.20 ಲಕ್ಷ ರೂ. ಮೌಲ್ಯದ 45 ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಟ್ಟೆಯನ್ನೂ ಸುಟ್ಟು ಹಾಕಿದ್ದ. ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಈತ ಬರುವ ಸಂಬಳ ಸಾಲದೇ ಮೊದಲ ಬಾರಿಗೆ ಸರಗಳ್ಳತನದ ಹಾದಿ ಹಿಡಿದಿದ್ದ. ಠಾಣೆಯ ಹಿಂಬದಿಯಲ್ಲೇ ಈತನ ಬಾಡಿಗೆ ಮನೆಯಾಗಿದ್ದರಿಂದ ಠಾಣೆ ಮುಂಭಾಗದ ಟೀ ಅಂಗಡಿಯಲ್ಲಿ ನಿಂತು ಪೊಲೀಸರ ಚಲನವಲನಗಳನ್ನು ಗಮನಿಸುತ್ತಿದ್ದ. ಹೀಗಾಗಿ ತೂಕ ಕಡಿಮೆ ಮಾಡಿ ನಮ್ಮಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ, ಆದ್ರೆ ಸಿಕ್ಕಿ ಬಿದ್ದ ಎಂದು ಪೊಲೀಸರು ಹೇಳಿದರು.