Select Page

ಪ್ರಜಾಸೇವಾ ಅಭಿಯಾನ: ಸರಕಾರಿ ಕೆಲಸ ಮಾಡಿಕೊಳ್ಳಲು ಇದನ್ನು ತಿಳಿಯಿರಿ

ಪ್ರಜಾಸೇವಾ ಅಭಿಯಾನ: ಸರಕಾರಿ ಕೆಲಸ ಮಾಡಿಕೊಳ್ಳಲು ಇದನ್ನು ತಿಳಿಯಿರಿ

ಬೆಂಗಳೂರು: ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ಪಡೆಯಲು, ಕುಂದುಕೊರತೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಇನ್ನು ಮುಂದೆ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಅಲ್ಲದೆ, ನಿರ್ದಿಷ್ಟ ಅವಧಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಸರಕಾರಿ ಕೆಲಸವನ್ನು ಹಕ್ಕಿನಿಂದ ಮಾಡಿಸಿಕೊಳ್ಳುವ ವ್ಯವಸ್ಥೆ ಈಗ ರೂಪಿಸಲಾಗಿದೆ. ಆ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಬರೆದ ಲೇಖನ ಇಲ್ಲಿದೆ.

ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಕಚೇರಿಗಳಿಗೆ ಅಲೆಯುವುದು ತಪ್ಪಿಸಲು ಮತ್ತು ಸಾರ್ವಜನಿಕರ ದೂರನ್ನು ಇಂತಿಷ್ಟು ದಿನಗಳಲ್ಲಿ ಮುಗಿಸಬೇಕು ಎಂದು ರಾಜ್ಯ ಸರಕಾರ ಪ್ರಜಾಸೇವಾ ಅಭಿಯಾನ ರೂಪಿಸಿದೆ. ಹಾಗಾದರೆ ಈ ಅಭಿಯಾನದ ಮೂಲಕ ಸಾರ್ವಜನಿಕರು ತಮ್ಮ ಕೆಲಸಗಳನ್ನು ಹೇಗೆ ಮಾಡಿಸಿಕೊಳ್ಳಬಹುದು. ಅಧಿಕಾರಿಗಳು ಸತಾಯಿಸುತ್ತಿದ್ದರೆ ಏನು ಮಾಡಬೇಕು ಎನ್ನುವ ಪೂರ್ಣ ವಿವರ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಬೇಕು.

ಹೇಗಿದೆ ವ್ಯವಸ್ಥೆ:
ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವುದು ಪ್ರಜಾಸೇವಾ ಇಲಾಖೆಯ ಉದ್ದೇಶ. ಪ್ರತಿ ಶನಿವಾರ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆಗಳನ್ನು ನಡೆಸಲಾಗುತ್ತದೆ.

ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು/ ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯುತ್ತವೆ. ಈ ಸಭೆಗಳಲ್ಲಿ ಸಂಬAಧಿಸಿದ ಅಧಿಕಾರಿಗಳು, ಶಾಸಕರು, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಎಲ್ಲರೂ ಇರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ:
ಪ್ರಜಾಸೇವಾ ಅಭಿಯಾನದ ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮನೆ-ಮನೆಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಗುತ್ತದೆ. ಈ ಕರಪತ್ರಗಳಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿ ಒಳಗೊಂಡಿರುತ್ತದೆ. ಅಲ್ಲದೆ, ತಾಲ್ಲೂಕು ಅಥವಾ ಹೋಬಳಿ ವ್ಯಾಪ್ತಿಯ ನಿವಾಸಿಗಳಿಗೆ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯ ವಿವರಗಳನ್ನು ತಿಳಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಾಲ್ ಸೆಂಟರ್ ಮೂಲಕ ಹೊರಹೋಗುವ ಕರೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಸಮಸ್ಯೆ ಬಗೆಹರಿಸಿಕೊಳ್ಳಲು ವ್ಯವಸ್ಥೆ:
ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಕಂಪ್ಯೂಟರ್ ಲ್ಯಾಪ್‌ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯಗಳು ಇರುತ್ತವೆ. ಸಾರ್ವಜನಿಕರಿಗೆ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ ಇರುತ್ತದೆ.

ಪ್ರಜಾಸೇವಾ ಅಭಿಯಾನ ಸಭೆಯ ದಿನದಂದು ಅಹವಾಲುಗಳನ್ನು ಎರಡು ಪ್ರತ್ಯೇಕ ಸರತಿಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲು ಹೊಸ ಅಹವಾಲುಗಳ ಸರತಿ ಇರುತ್ತದೆ. ಇದರಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ನೋಂದಾಯಿಸುವ ಅಹವಾಲುಗಳನ್ನು ದಾಖಲಿಸಲಾಗುತ್ತದೆ.

ಎರಡನೆಯ ಸರತಿಯಲ್ಲಿ ಪರಿಹಾರವಾಗದ ಅಥವಾ ಅಸಮಾಧಾನಕರವಾಗಿ ಪರಿಹರಿಸಲಾದ ಅಹವಾಲುಗಳು ಇರುತ್ತವೆ. ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣೆ ತಂತ್ರಾAಶದಲ್ಲಿ ನೋಂದಾಯಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳನ್ನು ಈ ಸರತಿಯಲ್ಲಿ ಪರಿಗಣಿಸಲಾಗುತ್ತದೆ.

ಸ್ಥಳದಲ್ಲಿಯೇ ಪರಿಹಾರ
ಪ್ರಜಾಸೇವಾ ಅಭಿಯಾನ ಸಭೆಯ ಸಂದರ್ಭದಲ್ಲಿ ಅರ್ಹತೆ ಹೊಂದಿರುವ ಯೋಜನಾ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಬಹುದಾಗಿದೆ. ಅದೇ ರೀತಿ ಈಗಾಗಲೇ ಪರಿಹರಿಸಲಾದ ಅಹವಾಲುಗಳಿಗೆ ಸಂಬAಧಿಸಿದAತೆ ಪರಿಹಾರದ ಸೂಕ್ತ ಅನುಮೋದನೆ, ದೃಢೀಕರಣ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ.

ಅರ್ಜಿಗಳು ಹಾಗೂ ಅಹವಾಲುಗಳ ಪ್ರಗತಿಯನ್ನು ಸಾರ್ವಜನಿಕರು ತಿಳಿದುಕೊಳ್ಳಲು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇದರ ಮೂಲಕ ಅರ್ಜಿದಾರರು ತಮ್ಮ ಅರ್ಜಿ ಅಥವಾ ಅಹವಾಲಿನ ಪ್ರಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಪ್ರತಿ ಸಭೆ ಸ್ಥಳದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಸಂಬAಧಿಸಿದ ಸರ್ಕಾರಿ ಯೋಜನೆಗಳ ಅರ್ಹತಾ ಮಾನದಂಡಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಇಲಾಖಾವಾರು, ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.

ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ನಂತರ ಸಭೆಯ ಸಂಪೂರ್ಣ ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಸಭೆಯ ಪ್ರಮುಖ ಅಂಶಗಳು, ಛಾಯಾಚಿತ್ರಗಳು, ವೀಡಿಯೋಗಳು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.

ಸಹಾಯವಾಣಿ:
ಸಾರ್ವಜನಿಕರು 1902 ಅಥವಾ ಮೂಲಕ ಕುಂದುಕೊರತೆಗಳನ್ನು ದಾಖಲಿಸಬಹುದು. ಅಲ್ಲದೆ, ನಾಗರೀಕರಿಂದ ಕುಂದುಕೊರತೆ, ದೂರುಗಳನ್ನು ಕೃತಕ ಬುದ್ಧಿ ಮತ್ತೆ (ಎಐ) ತಂತ್ರಜ್ಞಾನ ಉಪಯೋಗಿಸಿ ಮೂರು ಹಂತದ ದೂರು ನಿವಾರಣಾ ವ್ಯವಸ್ಥೆಯ ಮೂಲಕ ಸಾರ್ವಜನಿಕ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ.

ಮೂರು ಹಂತದ ಪರಿಶೀಲನೆ:
ಪ್ರಜಾಸೇವಾ ಅಭಿಯಾನ ಸಭೆಗಳಲ್ಲಿ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಬೆಳಿಗ್ಗೆ 9 ರಿಂದ 11 ಗಂಟೆಯ ವರೆಗೆ ತಾಲ್ಲೂಕು ಮಟ್ಟದ ಪರಿಶೀಲನೆ. ಈ ಹಂತದಲ್ಲಿ ನಿವಾರಣೆ ಆಗದೆ ಇರುವ ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳಿಗೆ ಇ-ಕಛೇರಿ ಮೂಲಕ ಮಂಡಿಸುತ್ತಾರೆ.

ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಉಪವಿಭಾಗ ಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲಿ ನಿವಾರಣೆ ಆಗದೆ ಇರುವ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತಾರೆ. ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯ ವರೆಗೆ ಜಿಲ್ಲಾ ಮಟ್ಟದ ಪರಿಶೀಲನೆ ನಡೆಯಲಾಗುತ್ತದೆ. ಜಿಲ್ಲಾಧಿಕಾರಿಗಳು ಎಲ್ಲವನ್ನು ಪರಿಶೀಲಿಸುತ್ತಾರೆ.

ಪ್ರತಿ ಹಂತದಲ್ಲಿಯೂ ಪರಿಹಾರದ ಬಗ್ಗೆ ಅಸಮಾಧಾನ ಹೊಂದಿರುವ ಸಾರ್ವಜನಿಕರು ಸಂಬAಧಿಸಿದ ಅಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಅಹವಾಲನ್ನು ಮಂಡಿಸಲು ಅವಕಾಶ ಇರುತ್ತದೆ.

ಮೇಲ್ಮನವಿ ಅವಕಾಶ:
ಜಿಲ್ಲೆಯಲ್ಲಿ ಬಗೆಹರಿಯದೇ ಇರುವ ಅರ್ಜಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪರಿಶೀಲಿಸುತ್ತಾರೆ. ಅಲ್ಲಿಯೂ ಪರಿಹಾರ ಆಗದೇ ಇದ್ದರೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗುತ್ತದೆ.

 

Leave a reply

Your email address will not be published. Required fields are marked *