ಬೆಂಗಳೂರು: ನೇಕಾರಿಕೆ ಸಮುುದಾಯದವರು ನೇಕಾರಿಕೆಗೆ ಸಂಬಧಿಸಿದ ಉದ್ಯಮಗಳನ್ನು ಪ್ರಾರಂಭಿಸಲು 2 ಲಕ್ಷ ರೂಪಾಯಿಗಳ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೇಕಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಸುದ್ದಿಗಾರರ ಜತೆ ಮಾತನಾಡಿದರು.

ಈ ಸಂದರ್ಭದಲ್ಲಿ ನೇಕಾರರ ಹಲವು ಬೇಡಿಕೆಗಳನ್ನು ಈಡೇರಿಸುವ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದ್ದು, ನೇಕಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಲು ನೀಡುವ ಸಹಾಯಧನದ ಮೊತ್ತವನ್ನು ಶೇಕಡ 30ರಿಂದ ಶೇ. 50ಕ್ಕೆ ಹೆಚ್ಚಿಸಲಾಗುವುದು ಎಂದರು.

ಪವರ್ ಲೂಮ್ ನಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರಿಗೆ ನೇಕಾರ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಯಿತು. ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ವಾಸ್ತವ್ಯ ಪ್ರಮಾಣ ಪತ್ರ ನೀಡಲಾಗುವುದು. ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಗುಡಿ ಕೈಗಾರಿಕೆಗಳೆಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಲು ಆದೇಶ ಹೊರಡಿಸಲಾಗುವುದು ಎಂದರು.

ಸರ್ಕಾರದ ನೇಕಾರ (ಕೈಮಗ್ಗ ಮತ್ತು ವಿದ್ಯುತ್ ಚಾಲಿತ) ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ವಿದ್ಯಾ ವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಬಟ್ಟೆ ಪ್ರಮಾಣಕ್ಕೆ ಟೆಂಡರ್ ಕರೆಯುತ್ತೇವೆ. ಇದನ್ನು ಈ ತಿಂಗಳಲ್ಲಿಯೇ (ಡಿಸೆಂಬರ್) ಕಾರ್ಯಾದೇಶ ನೀಡಿ, ಸಕಾಲದಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ. 25ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ಮಾನಿಸಿದ್ದು, ‍5 ಎಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್ ಹಾಗೂ ನಿಶ್ಚಿತ ಶುಲ್ಕದಲ್ಲಿ ಶೇ. 50 ರಿಯಾಯಿತಿ ನೀಡುತ್ತೇವೆ ಎಂದರು.

ನೇಕಾರರನ್ನು ಅಸಂಘಟಿತ ವಲಯದಲ್ಲಿ ಸೇರಿಸಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ವೃತ್ತಿಪರ ಕೂಲಿ ನೇಕಾರರಿಗೂ ವಿಸ್ತರಿಸುವ ಬಗ್ಗೆ ಪರಿಶೀಲಿಸಿ, ಆಯವ್ಯಯದ ಮಂಡನೆಯ ಸಂದರ್ಭದಲ್ಲಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಅಭಯ್ ಪಾಟೀಲ್, ಮಹದೇವಪ್ಪ ಯಾದವಾಡ, ಮಾಜಿ ಶಾಸಕ ಎಂ.ಡಿ ಲಕ್ಷ್ಮೀನಾರಾಯಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐ.ಎಸ್. ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸಭೆಯಲ್ಲಿ ಹಾಜರಿದ್ದರು.