ಕಾರವಾರ/ಗೋವಾ: ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಮತ್ಸ್ಯಕ್ಷಾಮ, ಸಾಲದ ಹೊರೆ, ಬಂದರು ಸಮಸ್ಯೆಗಳಿಂದ ಬಳಲುತ್ತಿದ್ದರೂ ಕರ್ನಾಟಕ ಸರ್ಕಾರ ತಿರುಗಿ ನೋಡುತ್ತಿಲ್ಲ ಎನ್ನುವ ಕೊರಗಿದೆ.

ಉತ್ತರ ಕನ್ನಡ ಜಿಲ್ಲೆಯಷ್ಟೇ ಕರಾವಳಿ ತೀರ ಹೊಂದಿರುವ ಗೋವಾ ಸರ್ಕಾರ ಮೀನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿಯೇ ಭರ್ಜರಿ ಯೋಜನೆಗಳನ್ನು ರೂಪಿಸಿಕೊಂಡಿದೆ. ಇದರಿಂದ ಗೋವಾ ರಾಜ್ಯದ ಜತೆಗೆ ಗೋವಾಕ್ಕೆ ಮೀನುಗಾರಿಕೆಗೆ ಹೋಗುವ ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಕಾರ್ಮಿಕರಿಗೂ ಸಾಕಷ್ಟು ಅನುಕೂಲಗಳು ಸಿಗುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿಯೇ ಗೋವಾ ರಾಜ್ಯ ಸರಕಾರ 163.1 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. ಒಟ್ಟು 24 ರೀತಿಯ ಯೋಜನೆಗಳನ್ನು ರೂಪಿಸಿದೆ. ಗೋವಾ ಸರ್ಕಾರದ ನಿರ್ಧಾರ ಕರ್ನಾಟಕಕ್ಕೂ ಅನುಕರಣೀಯವಾಗಿದೆ.

ಗೋವಾ ಸರ್ಕಾರ ನಿರ್ಧರಿಸಿರುವ ಯೋಜನೆಗಳಲ್ಲಿ ಆಳ ಸಮುದ್ರ ಮೀನುಗಾರಿಕೆ, ಮೀನುಗಾರಿಕೆ ಬಂದರು ಸುಧಾರಣೆ. ಮೀನು ಮಾರಾಟ ಕೇಂದ್ರಗಳು ಮತ್ತು ಮೀನು ಸಾಕಾಣಿಗೆ ಹೀಗೆ ಮೀನುಗಾರರ ಉದ್ಯಮ ವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಿಕೊಂಡಿದೆ. ಮೀನು ಸಾಕಾಣಿಕೆಗೂ ಉತ್ತೇಜನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಒಟ್ಟಾರೆ ಯೋಜನೆಯಲ್ಲಿ 82.87 ಕೋಟಿ ರೂ. ಕೇಂದ್ರ ಸರಕಾರದ ಹೂಡಿಕೆ ಇದ್ದರೆ, 48.58 ಕೋಟಿ ರೂ. ಗೋವಾ ಸರ್ಕಾರ ಹೂಡಿಕೆ ಮಾಡುತ್ತಿದೆ. 31.62 ಕೋಟಿ ರೂ. ಫಲಾನುಭವಿ ಹೂಡಿಕೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿಕೊಂಡಿದೆ. ಇದರಿಂದ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯ ಒದಗಿಸುವುದು ಗೋವಾ ಸರ್ಕಾರದ ಉದ್ದೇಶ.

ಇದನ್ನೂ ಓದಿ: ಹಡಗು ಚಲಿಸುತ್ತಿರುವಾಗಲೇ ಕ್ಯಾಪ್ಟನ್ ಸಾವು: ಕಾರವಾರ ಬಂದರಿಗೆ ಬಂದ ಹಡಗು

ಇದೇ ರೀತಿಯ ಉತ್ತೇಜನವನ್ನು ಕರ್ನಾಟಕದ ಕರಾವಳಿ ಜಿಲ್ಲೆಯ ಜನರು ಕೂಡ ಬಯಸುತ್ತಿದ್ದಾರೆ. ರಾಜ್ಯಕ್ಕೆ ಮೀನುಗಾರಿಕೆಯಿಂದಲೂ ಸಾವಿರಾರು ಕೋಟಿ ರೂ. ಆದಾಯ ಬರುತ್ತಿದೆ. ಆದರೂ ಕರ್ನಾಟಕದಲ್ಲಿ ಕರಾವಳಿ ತೀರದ ಮೀನುಗಾರರಿಗೆ ನಿರೀಕ್ಷಿತ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವ ಕೊರಗು ಹಲವು ವರ್ಷಗಳಿಂದಲೂ ಇದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮುಳುಗುತ್ತಿದ್ದ ಮತ್ತೊಂದು ಬೋಟ್ ರಕ್ಷಣೆ: 24 ಮೀನುಗಾರರು ಪಾರು