ಕಾರವಾರ: ಅರಬ್ಬಿಸಮದ್ರದಲ್ಲಿ ಹಡಗು ಚಲಿಸುತ್ತಿರುವಾಗಲೇ ಹಡಗಿನ ಕ್ಯಾಪ್ಟನ್ ಏಕಾಏಕಿ ಮೃತಪಟ್ಟಿದ್ದಾರೆ. ಆ ಹಡಗು ಈಗ ಕಾರವಾರ ಬಂದರಿಗೆ ಬಂದಿದೆ.

ಹಡಗಿನ ಕ್ಯಾಪ್ಟನ್ ಮೃತದೇಹವನ್ನು ಕಾರವಾರ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪಾಟ್ನಾ ಮೂಲದ ವಿಜೇಂದ್ರಕುಮಾರ್ ಸಿಂಗ್ (45) ಮೃತಪಟ್ಟಿದ್ದಾರೆ. ಕ್ಯಾಪ್ಟನ್ ಸಾವು ಹಡಗಿನ ಸಿಬ್ಬಂದಿಯಲ್ಲಿ ಆಘಾತವನ್ನುಂಟುಮಾಡಿದೆ.

‘ಗ್ಲೋಬಲ್ ಲೇಡಿ‌’ ಎಂಬ ಹೆಸರಿನ ವಾಣಿಜ್ಯ ಹಡಗು ಚೆನ್ನೈನಿಂದ ಇರಾಕ್ ಗೆ ಹೊರಟಿತ್ತು. ಡಾಂಬರು ತುಂಬಿಕೊಂಡು ಬಂದಿದ್ದ ಹಡಗು ಚೆನ್ನೈನಲ್ಲಿ ಖಾಲಿ ಮತ್ತೆ ಇರಾಕ್ ಕಡೆಗೆ ಹೊರಟಿತ್ತು. ಭಟ್ಕಳದಿಂದ 100 ನಾಟಕಿಕಲ್ ದೂರದಲ್ಲಿದ್ದಾಗ ಹಡಗಿನ ಕ್ಯಾಪ್ಟನ್ ಮೃತಪಟ್ಟಿರಬಹುದು ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಕ್ಯಾಪ್ಟನ್​ ವಿಜೇಂದ್ರಕುಮಾರ ಸಿಂಗ್ ಅವರಿಗೆ ಶುಕ್ರವಾರವೇ ಸಮುದ್ರ ಮಧ್ಯೆ ಹೃದಯಾಘಾತವಾಗಿದೆ. ಹೃದಯಾಘಾತವಾದ ಕೆಲ ಸಮಯದಲ್ಲಿಯೇ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಹಡಗು ಕಾರವಾರ ಬಂದರು ಕಡೆಗೆ ಬಂದಿತ್ತು.

ಅಂದರೆ, ಶುಕ್ರವಾರ ರಾತ್ರಿಯೇ ಹಡಗು ಕಾರವಾರಕ್ಕೆ ಬಂದಿತ್ತು. ಆದರೆ, ಪರವಾನಗಿ ಸೇರಿ ಕಾನೂನು ಪ್ರಕ್ರಿಯೆ ಮುಗಿದ ಶನಿವಾರ ಸಂಜೆ ಹಡಗು ಕಾರವಾರ ಬಂದರು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಸದ್ಯ ಹಡಗು ಕಾರವಾರ ಬಂದರಿನಲ್ಲಿ ಲಂಗರು ಹಾಕಿದೆ. ಸ್ಥಳಕ್ಕೆ ಕಾರವಾರ ಬಂದರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹವನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊರೊನಾ ಇರುವ ಕಾರಣಕ್ಕೆ ಪರವಾನಗಿ ವಿಷಯದಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಹಡಗು ಭಾರತೀಯ ಬಾವುಟ ಹೊಂದಿದೆ. ಡಾಂಬರು ಆಮದು ಮಾಡುತ್ತಿತ್ತು ಎಂದು ಬಂದರು ಮೂಲಗಳು ತಿಳಿಸಿವೆ.