ಕಾರವಾರ: ಈ ವರ್ಷದ ಮುಂಗಾರು ಆರಂಭದಲ್ಲಿ ಮಹಾ ಮಳೆಯಿಂದಾದ ಪ್ರವಾಹ ಹಾನಿ ಪರಿಗಣಿಸಿ ರಾಜ್ಯ ಸರಕಾರ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಾಗಿ ಘೋಷಣೆ ಮಾಡಿದೆ.

ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಸೇರಿದೆ. ಆದರೆ, ಜಿಲ್ಲೆಯ ಒಂದು ತಾಲೂಕನ್ನು ಪ್ರವಾಹ ಪೀಡಿತ ತಾಲೂಕು ಪಟ್ಟಿಯಿಂದ ಹೊರಗಿಡಲಾಗಿದೆ. ಜಿಲ್ಲೆಯ ಒಟ್ಟು 11 ತಾಲೂಕುಗಳ ಪೈಕಿ 10 ತಾಲೂಕುಗಳನ್ನು ಮಾತ್ರ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪ್ರವಾಹ ಪೀಡಿತ ಪ್ರದೇಶದ ವ್ಯಾಪ್ತಿಗೆ ಸೇರುವುದರಿಂದ ಜನರಿಗೆ ಹಾನಿ ಪರಿಹಾರ ಪಡೆಯಲು ಅನುಕೂಲ ಆಗಲಿದೆ. ಯಾವುದೇ ತಾಲೂಕು ಪ್ರವಾಹ ಪಟ್ಟಿಯಲ್ಲಿ ಸೇರದೆ ಇದ್ದರೆ, ಮನೆ ಹಾನಿ ಮತ್ತು ಇತರ ಹಾನಿ ಪರಿಹಾರ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಹಾಗಾಗಿ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿ ಸಾಕಷ್ಟು ಮಹತ್ವದ್ದಾಗಿದೆ.

ರಾಜ್ಯ ಸರಕಾರ ಹೊರಡಿಸಿದ ಆದೇಶದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಳಿಯಾಳ ತಾಲೂಕನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಜಿಲ್ಲೆಯಲ್ಲಿ ಆಗಸ್ಟ್ ನಲ್ಲಿ ಎಲ್ಲೆಡೆ ವ್ಯಾಪಕ ಮಳೆಯಾಗಿದ್ದರಿಂದ ನದಿಗಳು ಉಕ್ಕಿ ಹರಿದಿದ್ದವು. ಎಷ್ಟೋ ಮನೆಗಳಿಗೆ ನದಿ ನೀರು ನುಗ್ಗಿದ್ದರಿಂದ ಜನರು ಗಂಜಿ ಕೇಂದ್ರ ಸೇರಿದ್ದರು. ಈಗ ಜಿಲ್ಲೆ ಮತ್ತೆ ಮಳೆ ಅಪಾಯ ಎದುರಿಸುತ್ತಿದೆ.