ಧನುರಾಸನ ನಮ್ಮ ದೇಹವನ್ನು ಧನಸ್ಸಿನ ರೀತಿಯಲ್ಲಿ ಮಾಡುವಂಥ ಒಂದು ಯೋಗದ ಭಂಗಿ. ಸಂಸ್ಕೃತದಲ್ಲಿ ಧನಸ್ಸು ಅಂದರೆ ಬಿಲ್ಲು, ಈ ಆಸನ ಮಾಡುವ ಸಮಯದಲ್ಲಿ ದೇಹವು ಬಿಗಿಯಾಗಿ ಬಿಲ್ಲಿನ ರೀತಿಯಲ್ಲಿ ಭಾಗುವದರಿಂದ ಇದಕ್ಕೆ ಧನುರಾಸನ ಎಂದು ಕರೆಯಲಾಗಿದೆ.

ಉಪಯೋಗಗಳು:

1) ಎದೆ, ಹೃದಯ, ಹೊಟ್ಟೆ ಮತ್ತು ಶ್ವಾಸಕೋಶಗಳು ಸದೃಢವಾಗುವುದು.

2) ಬೆನ್ನು ಮೂಳೆಯ ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ.

3) ಜಠರಾಗ್ನಿ ಉದ್ದೀಪನಗೊಂಡು ಜೀರ್ಣಶಕ್ತಿ ವೃದ್ಧಿಸುತ್ತದೆ.

4) ಭುಜಗಳಲ್ಲಿನ ಬಿಗಿತ ಮತ್ತು ನೋವು ದೂರವಾಗುವುದು.

5) ಸೊಂಟದ ನೋವು ಕಡಿಮೆಮಾಡಲು ಸಹಕಾರಿ.

6) ಉದರದ ದೋಷ ಮತ್ತು ಬೆನ್ನು ನೋವಿಗೆ ಉತ್ತಮವಾಗಿದೆ.

7) ಗೋನುಬೆನ್ನಿನ ದೋಷ ನಿವಾರಣೆಯಾಗುವುದು.

8) ತೋಳು ಮತ್ತು ತೊಡೆಯ ಭಾಗಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ.

ಮಾಡುವ ವಿಧಾನ:

1) ಮೊದಲು ನೆಲದ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ಹೊಟ್ಟೆಯ ಮೇಲೆ ನೇರವಾಗಿ ಮಲಗಿಕೊಳ್ಳಿ.

2) ಆನಂತರ ಎರಡು ಕಾಲುಗಳನ್ನು ಮಂಡಿಯ ಬಳಿ ಹಿಂದಕ್ಕೆ ಮಡಚಿಕೊಳ್ಳಿ.

3) ಈಗ ಎಡಕಾಲನ್ನು ಎಡಗೈಯಿಂದ ಮತ್ತು ಬಲಗಾಲನ್ನು ಬಲಗೈಯಿಂದ ಹಿಡಿದುಕೊಳ್ಳಿ.

4) ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ಇಲ್ಲಿ ನಿಮ್ಮ ದೇಹದ ಸಂಪೂರ್ಣ ಭಾರ ಹೊಟ್ಟೆಯ ಮೇಲಿರಿಸಿ ಇದೇ ಸ್ಥಿತಿಯಲ್ಲಿ 10 ರಿಂದ 15 ಸೆಕೆಂಡುಗಳ ಕಾಲ ಇರಿ.

5) ನಂತರ ಉಸಿರನ್ನು ಹೊರ ಹಾಕುತ್ತಾ (ರೇಚಕ) ಕಾಲುಗಳನ್ನು ನಿಧಾನವಾಗಿ ಕೆಳಗೆ ಇಳಿಸಿ. ಮಕರಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಸೂಚನೆಗಳು:

ಸ್ಲೀಪ್ ಡಿಸ್ಕ್, ಹರ್ನಿಯಾ, ಅಲ್ಸರ್, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇರುವವರು ಮತ್ತು ಹೊಟ್ಟೆ, ಬೆನ್ನಿನ ಹಾಗೂ ಭುಜಗಳ ಭಾಗಗಳ ಶಸ್ತ್ರಚಿಕಿತ್ಸೆ ಆದವರು ಈ ಆಸನ ಮಾಡಬಾರದು.