ಸರ್ವರೋಗಕ್ಕೂ ಯೋಗ ಮದ್ದು. ಯೋಗದ ಬಹುತೇಕ ಎಲ್ಲಾ ಆಸನಗಳು ಎಲ್ಲಾ ರೀತಿಯ ರೋಗಗಳಿಗೂ ಮದ್ದಾಗಿ ಪರಿಣಮಿಸಬಲ್ಲದು. ನೇಗಿಲ ರೀತಿಯಲ್ಲಿ ಅನುಸರಿಸುವ ಆಸನವೇ ಹಾಲಾಸನ. ಇದರಿಂದ ದೇಹದ ಆರೋಗ್ಯ ಸುಧಾರಿಸುವುದಲ್ಲದೆ, ಮನಸ್ಸು ಮತ್ತು ಆತ್ಮಕ್ಕೂ ನವ ಚೈತನ್ಯ ನೀಡುತ್ತದೆ.

ಉಪಯೋಗಗಳು:

1) ಹಾಲಾಸನದ ಅಭ್ಯಾಸ ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ.

2) ಉದಾಸೀನ ಮತ್ತು ಜಡತ್ವವನ್ನು ಹೋಗಲಾಡಿಸುತ್ತದೆ.

3) ಸೊಂಟ, ತೊಡೆ, ಕಿಬ್ಬೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.

4) ಥೈರಾಯಿಡ್ ಮತ್ತು ಪ್ಯಾರಾಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

5) ಮುಖ ಮತ್ತು ಮೆದುಳಿಗೆ ರಕ್ತ ಸಂಚಾರ ಉತ್ತಮಗೊಳಿಸುತ್ತದೆ.

ಮಾಡುವ ವಿಧಾನ:

1) ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ಕೈಗಳು ದೇಹದ ಪಕ್ಕದಲ್ಲಿರಿಸಿ ಹಸ್ತ ಕೆಳಮುಖವಾಗಿರಲಿ.

2) ಉಸಿರು ತೆಗೆದುಕೊಳ್ಳುತ್ತಾ ( ಪೂರಕ) ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆತ್ತಿ. ( ಕಾಲುಗಳು ಒಂದಕ್ಕೊಂದು ಪರಸ್ಪರ ಕೂಡಿರಲಿ)

3) ಉಸಿರನ್ನು ಹಿಡಿದು ಎರಡು ಕಾಲುಗಳನ್ನು ತಲೆಯ ಹಿಂದಕ್ಕೆ ತೆಗೆದುಕೊಂಡು ಬನ್ನಿ. ಕಾಲ್ಬೆರಳು ತಲೆಯ ಹಿಂಭಾಗದ ನೆಲವನ್ನು ತಾಗಿಸಲು ಪ್ರಯತ್ನಿಸಿ. ಇಲ್ಲಿ ನಿಮ್ಮ ಕತ್ತು ಮತ್ತು ಭುಜ ನೆಲಕ್ಕೆ ತಾಗಿರಲಿ ಮತ್ತು ಬೆನ್ನು ನೆಲಕ್ಕೆ ಸಮಾನಾಂತರವಾಗಿರಲಿ.

4) ಇದೇ ಭಂಗಿಯಲ್ಲಿ ಕನಿಷ್ಠ ಒಂದು ನಿಮಿಷವಾದರೂ ಇರಲು ಪ್ರಯತ್ನಿಸಿ. ಉಸಿರಾಟ ಸಹಜವಾಗಿ ಇರಲಿ . ಭಂಗಿಯ ಸಮಯವನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಹೆಚ್ಚಿಸುತ್ತಾ ಹೋಗಿ.

5) ನಂತರ ಉಸಿರನ್ನು ಹೊರ ಹಾಕುತ್ತಾ (ರೇಚಕ) ಬೆನ್ನಿನ ಭಾಗ, ಪ್ರಷ್ಟ ಭಾಗ ಹಾಗೆ ಕಾಲುಗಳನ್ನು ನಿಧಾನವಾಗಿ ಕೆಳಗೆ ಇಳಿಸಿ. ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಸೂಚನೆ:

ಗರ್ಭಿಣಿಯರು ಮತ್ತು ಮಹಿಳೆಯರು ತಮ್ಮ ಋತುಸ್ರಾವದ ಸವಯದಲ್ಲಿ ಈ ಆಸನ ಅಭ್ಯಾಸ ಮಾಡಬಾರದು. ಕಿಬ್ಬೊಟ್ಟೆಯ ಭಾಗದಲ್ಲಿ ನೋವು, ಹೃದಯ ತೊಂದರೆ, ಅಧಿಕ ರಕ್ತದೊತ್ತಡ ಮತ್ತು ಹರ್ನಿಯಾ ಸಮಸ್ಯೆ ಇರುವವರು ಈ ಆಸನ ಮಾಡಬಾರದು.