
ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಗಾಭ್ಯಾಸ

ಇವತ್ತಿನ ದಿನಗಳಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಅತ್ಯವಶ್ಯಕವಾಗಿದೆ.
ಉತ್ತಮ ಆಹಾರ ಸೇವಿಸುವುದು ಮತ್ತು ದೇಹಕ್ಕೆ ವ್ಯಾಯಾಮ ಮಾಡುವುದರ ಮೂಲಕ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳವಾದ ಯೋಗಾಸನ ಇಲ್ಲಿದೆ.
1) ವಜ್ರಾಸನ:
ಎರಡು ಕಾಲುಗಳನ್ನು ಮುಂದೆ ಚಾಚಿ ನೇರವಾಗಿ ಕುಳಿತುಕೊಳ್ಳಿ. ಬಲ ಮಂಡಿಯನ್ನು ಮಡಚಿ ಬಲ ಪ್ರಷ್ಠದ ಬದಿಗಿರಿಸಿ. ನಂತರ ಎಡ ಮಂಡಿ ಮಡಚಿ ಎಡ ಪ್ರಷ್ಠದ ಬದಿಗಿರಿಸಿ. ಸಂಪೂರ್ಣ ದೇಹದ ಭಾರವನ್ನು ಹಿಮ್ಮಡಿಯ ಮೇಲಿರಿಸಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ, ಹಸ್ತಗಳು ಮಂಡಿಯ ಮೇಲಿರಿಸಿ ಕೈಗಳು ನೇರವಾಗಿರಲಿ. ಇದೇ ಭಂಗಿಯಲ್ಲಿ ಕನಿಷ್ಠ 60 ಸೆಕೆಂಡುಗಳ ಕಾಲ ಇದ್ದು, ನಂತರ ಕಾಲುಗಳನ್ನು ಮುಂದೆ ಚಾಚಿ ವಿಶ್ರಾಂತಿ ತೆಗೆದುಕೊಳ್ಳಿ.
2) ಪಶ್ಚಿ ಮೊತ್ತಾಸನ:
ಕಾಲುಗಳನ್ನು ಮುಂದೆ ಚಾಚಿ ಬೆನ್ನು ನೇರವಾಗಿಸಿ ಕುಳಿತುಕೊಳ್ಳಿ. ಎರಡು ಹಸ್ತ ಪ್ರಷ್ಠದ ಬದಿಗಿರಲಿ. ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ತಲೆಯ ಮೇಲಕ್ಕೆತ್ತಿ. ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಭಾಗಿ ಪಾದದ ಹೆಬ್ಬೆರಳನ್ನು ಹಿಡಿದುಕೊಳ್ಳಿ ನಿಮ್ಮ ಹಣೆ ಅಥವಾ ಗದ್ದ ಮಂಡಿಗೆ ತಾಗಿಸಲು ಪ್ರಯತ್ನಿಸಿ.
ಉಸಿರಾಟ ಸಹಜವಾಗಿರಲಿ. ಇದೇ ಭಂಗಿಯಲ್ಲಿ ಕನಿಷ್ಠ 10 ಸೆಕೆಂಡುಗಳ ಕಾಲ ಇರಿ ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿ ಹಾಗೆ ಉಸಿರನ್ನು ಹೊರ ಹಾಕುತ್ತಾ ಕೈಗಳನ್ನು ಕೆಳಗಿಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.
3) ಪಾದಹಸ್ತಾಸನ:
ತಾಡಾಸನ ಸ್ಥಿತಿಯಲ್ಲಿ ನೇರವಾಗಿ ನಿಂತುಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ಹಾಗೆ ಉಸಿರನ್ನು ಹೊರ ಹಾಕುತ್ತಾ ಸೊಂಟದ ಭಾಗದಿಂದ ಮುಂದಕ್ಕೆ ಬಾಗಿ. ನಿಮ್ಮ ಎರಡು ಹಸ್ತಗಳು ಪಾದದ ಬದಿಗಿರಿಸಿ ಹಣೆಯನ್ನು ಮಂಡಿಗೆ ತಾಗಿಸಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ 10-15 ಸೆಕೆಂಡುಗಳ ಕಾಲ ಇದ್ದು ನಂತರ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಮೇಲಕ್ಕೆ ಬಂದು ಉಸಿರನ್ನು ಹೊರ ಹಾಕುತ್ತಾ ಕೈಗಳನ್ನು ಕೆಳಗಿಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.