ಕಾರವಾರ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ ಪರ್ಶಿನ್ ಬೋಟ್ ಮತ್ತು ಅದರಲ್ಲಿದ್ದ 24 ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ನೌಕೆ ರಕ್ಷಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ತೀರದಿಂದ ಸುಮಾರು 15 ಕಿಮೀ ಆಳ ಸಮುದ್ರದಲ್ಲಿ ನೇತ್ರಾಣಿ ನಡುಗಡ್ಡೆ ಸಮೀಪದಲ್ಲಿ ಕಮರುಲ್ ಬಾಹರ್ ಎಂಬ ಮೀನುಗಾರಿಕೆ ಬೋಟ್ ಗುರುವಾರದಿಂದ ಅಪಾಯಕ್ಕೆ ಸಿಲುಕಿಕೊಂಡಿತ್ತು.

ಬೋಟ್ ನ ಇಂಜಿನ್ ಗೆ ಹಾನಿಯಾಗಿತ್ತು. ಇನ್ನೊಂದೆಡೆ ಬಿರುಗಾಳಿ ಜೋರಾಗಿದ್ದರಿಂದ ಬೋಟ್ ಬೋಟ್ ಮುಳುಗುವ ಹಂತದಲ್ಲಿತ್ತು. ಬೋಟ್ ನಲ್ಲಿದ್ದ 24 ಮೀನುಗಾರರು ರಕ್ಷಣೆಗೆ ನೆರವು ಕೋರಿದ್ದವು. ಒಂದು ದಿನ ಮಳೆ, ಗಾಳಿಯಲ್ಲಿಯೇ ಜೀವ ಹಿಡಿದುಕೊಂಡಿದ್ದರು.

ಸುದ್ದಿ ತಲುಪಿದ ತಕ್ಷಣವೇ ಮಂಗಳೂರಿನಿಂದ ವಿಶೇಷ ನೌಕೆಯ ಮೂಲಕ ಆಗಮಿಸಿದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಎಲ್ಲ ಮೀನುಗಾರರನ್ನು ರಕ್ಷಿಸಿದ್ದಾರೆ. ರಕ್ಷಣೆ ವೇಳೆಯೂ ಮೀನುಗಾರರು ಭಾರೀ, ಕೋಸ್ಟ್ ಗಾರ್ಡ್ ಸಿಬ್ಬಂದಿ ಭಾರೀ ಪ್ರಮಾಣದ ಗಾಳಿ ಒತ್ತಡ ಎದುರಿಸಬೇಕಾಗಿತ್ತು.

ಕೊನೆಗೆ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಯಶಸ್ವಿಯಾಗಿದ್ದು. ಬೋಟ್ ಅನ್ನು ಕಾರವಾರ ಬಂದರಕ್ಕೆ ಕರೆ ತರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ ಪಿ ಶಿವ ಪ್ರಕಾಶ ದೇವರಾಜು ಕೋಸ್ಟ್ ಗಾರ್ಡ್ ಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೊಂದೆಡೆ ಕರಾವಳಿ ಭಾಗದಲ್ಲಿ ಮಳೆ ಜೋರಾಗಿದೆ. ಕಾರವಾರದಲ್ಲಿ ಶುಕ್ರವಾರ 60 ಮಿ.ಮೀ. ಗೂ ಅಧಿಕ ಮಳೆಯಾಗಿದೆ. ಎರಡು ದಿನಗಳ ಹಿಂದೆ 80 ಮಿ.ಮೀ. ಮಳೆ ದಾಖಲಾಗಿತ್ತು. ಸೆ.12 ರವರೆಗೂ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.