ಕಾರವಾರ: ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಮಾರ್ಚ್ ನಿಂದ ಸ್ಥಗಿತಗೊಳಿಸಲಾಗಿದ್ದ ಕಾರವಾರ- ಬೆಂಗಳೂರು ನಡುವಿನ ರೈಲು ಸಂಚಾರವು ಇಂದಿನಿಂದ ಮತ್ತೆ  ಆರಂಭವಾಗುತ್ತಿದೆ.

ಈ ಕುರಿತು ಕೊಂಕಣ ರೈಲ್ವೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇಂದು ಯಶವಂತಪುರ-ಕಾರವಾರ (ರೈಲು ಸಂ.06585) ಹಾಗೂ ನಾಳೆ ಕಾರವಾರ-ಯಶವಂತಪುರ (ರೈಲು ಸಂ.06586)  ಸಂಚಾರ ಆರಂಭಿಸಲಿದೆ ಎಂದು ತಿಳಿಸಿದೆ.

ಇಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ನಾಳೆ ಬೆಳಿಗ್ಗೆ 8.25ಕ್ಕೆ ತಲುಪಲಿದೆ. ಬಳಿಕ ನಾಳೆ  ಸಂಜೆ 6ಕ್ಕೆ ಕಾರವಾರದಿಂದ ರೈಲು ಬೆಂಗಳೂರಿಗೆ  ಹೊರಡಲಿದ್ದು ಬಳಿಕ ಇದು ನಿರಂತರವಾಗಿ ವಾರದಲ್ಲಿ ಮೂರು ದಿನ ಕಾರವಾರ-ಯಶವಂತಪುರ ಹಾಗೂ ಮೂರುದಿನ ಯಶವಂತಪುರ-ಕಾರವಾರ ರೈಲು ಸಂಚಾರ ನಡೆಸಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೈಲುಗಳಲ್ಲಿ 7 ಸ್ಲೀಪರ್‌, ಒಂದು 3 ಟೈರ್‌ ಎ.ಸಿ, ಒಂದು 2 ಟೈರ್‌ ಎ.ಸಿ, 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ಆದರೆ ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್‌ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಗೋವಾಗೆ ಇಂದಿನಿಂದ ಬಸ್ ಸಂಚಾರ ಆರಂಭ

ಇದು ಬೆಂಗಳೂರಿನಿಂದ ಮಂಗಳೂರು, ಉಡುಪಿ ಹಾಗೂ ಕಾರವಾರಕ್ಕೆ ಬರುವ ಹಾಗೂ ಕರಾವಳಿ ಭಾಗದಿಂದ ಬೆಂಗಳೂರಿಗೆ  ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು ಸಂತಸದ ವಿಷಯವಾಗಿದೆ.