ಜೀವನದಲ್ಲಿ ಸೋಲು ಎದುರಾದಾಗ ಇನ್ನೇನು ಇಲ್ಲ ಎಂದು ಕೈ ಚೆಲ್ಲುವವರಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಈ ರೈತ ಮಹಿಳೆ. ಕಷ್ಟದ ದಿನಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಅಂಥ ಸ್ಥಿತಿಯಲ್ಲಿ ಹೆಚ್ಚಿನ ಮಾಹಿತಿ ಇಲ್ಲದೆ ಇದ್ದರೂ ಅಲ್ಪ ಭೂಮಿಯಲ್ಲಿ ಕೃಷಿ ಆರಂಭಿಸಿ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂ.ಗೂ ಅಧಿಕ ಆದಾಯ ಗಳಿಸುತ್ತಿದ್ದಾರೆ ಈ ಸಾಧಕಿ ಮಹಿಳೆ. ಹಲವು ಕಲಿಕೆಗಳನ್ನು ಹೊಂದಿರುವ ಇವರ ಕೃಷಿಯಂತೆಯೇ ಅವರ ಬದಕು ಕೂಡ ರೋಚಕವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದ ರೈತ ಮಹಿಳೆ ಮಧುಮತಿ ರಾಜಶೇಖರ ಶೀಗೇಹಳ್ಳಿ ಕೃಷಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್‌ಗಿಂತಲೂ ತಾನೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಸಾಯನಿಕ ಬಳಸದೆ ತೋಟದ ನಿರ್ವಹಣೆ ಮಾಡಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸುತ್ತಿರುವ ಇವರ ಕೃಷಿಯು ಸಾಹಸದ ಕತೆಗಳನ್ನೇ ಹೇಳುತ್ತವೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ತವರು ಮನೆಯಾಗಿರುವ ಮಧುಮತಿ, ಪಟ್ಟಣದ ಪ್ರತಿಷ್ಠಿತ ಶೀಗೇಹಳ್ಳಿ ಕುಟುಂಬದ ರಾಜಶೇಖರ ಅವರನ್ನು ಮದುವೆಯಾಗಿ ಇಲ್ಲಿಗೆ ಬಂದರು. ಆದರೆ ಇವರ ದಾಂಪತ್ಯ ಜೀವನ ಬಹು ಕಾಲ ಮುಂದುವರೆಯಲಿಲ್ಲ. 2007ರಲ್ಲಿ ಪತಿ ರಾಜಶೇಖರ ಹೃದಯಾಘಾತದಿಂದ ಮೃತಪಟ್ಟಾಗ ಕುಟುಂಬ ನಡೆಸುವುದು ಹೇಗೆ ಎಂಬ ಪ್ರಶ್ನೆ ಕಾಡಿತು. ಕಾರಣ ತಮ್ಮಿಬ್ಬರ ಮಕ್ಕಳ ಜೊತೆ ವಯಸ್ಸಾದ ಅತ್ತೆ ನೋಡಿಕೊಳ್ಳಬೇಕಾಗಿತ್ತು. ಇಷ್ಟೇ ಅಲ್ಲದೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಇವೆಲ್ಲವನ್ನು ನಿಭಾಯಿಸುವ ಜವಾಬ್ದಾರಿ ಮಧುಮತಿಯವರ ಹೆಗಲೇರಿತು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕೈ ಹಿಡಿದಿದ್ದು ಕೃಷಿ. ಪತಿ ಇರುವಾಗ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಶಿರಳಗಿಗೆ ಬಂದು ತಮ್ಮ ತೋಟದ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಈಗ ಪಟ್ಟಣದಿಂದ ಹಳ್ಳಿಗೆ ಬಂದು ತೋಟ ನೋಡಿಕೊಳ್ಳುವುದು ಕಷ್ಟವಾಗಿದ್ದರಿಂದ ಹಿತೈಷಿಗಳ ಸಲಹೆಯಂತೆ ಹಳ್ಳಿಯಲ್ಲಿಯೇ ಬದುಕು ಕಟ್ಟಿಕೊಳ್ಳುವುದು ಒಳಿತು ಎಂಬ ನೀರ್ಣಯಕ್ಕೆ ಬಂದು ಕೃಷಿಗಾಗಿ ಪಟ್ಟಣ ತ್ಯಜಿಸಿ ಶಿರಳಗಿಯಲ್ಲಿ ಮನೆ ನಿರ್ಮಾಣ ಮಾಡುತ್ತಾರೆ.

ಕೃಷಿಯಲ್ಲಿ ಕೈಹಿಡಿದ ಕಾರ್ ಡ್ರೈವಿಂಗ್ :

ಕೃಷಿಯಲ್ಲಿ ಕಡಿಮೆ ಅನುಭವ ಒಂದು ಕಡೆಯಾದರೆ, ಎಲ್ಲದಕ್ಕೂ ಇವರೇ ಓಡಾಟ ಮಾಡಬೇಕಾಗಿರುವುದು ಇನ್ನೊಂದು ಕಡೆ. ಇದಕ್ಕೆ ಪರಿಹಾರವಾಗಿ ಪತಿಯಿಂದ ಕಲಿತ ಅಲ್ಪ-ಸ್ವಲ್ಪ ಕಾರ್ ಡ್ರೈವಿಂಗ್‌ನ್ನು ಪೂರ್ತಿಯಾಗಿ ಕಲಿತು ಮಕ್ಕಳನ್ನು ಶಾಲೆಗೆ ಬಿಡುವುದು ಹಾಗೂ ಕರೆತರುವುದರ ಜೊತೆ ಉಳಿದ ಅವಧಿಯಲ್ಲಿ ಮಧುಮತಿಯವರು ಸಂಪೂರ್ಣವಾಗಿ ತೋಟದಲ್ಲಿ ಕಳೆಯುತ್ತಿದ್ದರು. ಪತಿಯ ಅಕಾಲಿಕ ಮರಣದ ದುಃಖವನ್ನು ತೋಟದ ನಿರ್ವಹಣೆ ಮಾಡುತ್ತ ಕಳೆದರು.

ಕಾರಿನಲ್ಲಿ 1.5 ಲಕ್ಷ ಕಿ.ಮೀ. ಕ್ರಮಿಸಿರುವ ಇವರು ಬೆಳೆಗಳ ಮಾರ್ಕೇಟಿಂಗ್ ಮಾಡುವುದು, ಆಳುಗಳ ಕೊರತೆ ಇದ್ದಾಗ ದೂರದೂರಿನಿಂದ ಆಳುಗಳನ್ನು ಕರೆತರುವುದು ಇತ್ಯಾದಿ ಕಾರ್ಯಗಳನ್ನು ಇವರೇ ನಿರ್ವಹಿಸುತ್ತಾರೆ. ‘ಕಾರ್ ಡ್ರೈವಿಂಗ್ ಚೆನ್ನಾಗಿ ಕರಗತ ಮಾಡಿಕೊಂಡಿದ್ದರಿಂದ ತಾನು ಏನಾದರೂ ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ಬರತೊಡಗಿತು’ ಎನ್ನುತ್ತಾರೆ ಮಧುಮತಿ.

ಹೀಗೆಯೇ ಇವರ ಪರಿಶ್ರಮ ಮುಂದುವರಿದು ಆರ್ಥಿಕ ಸ್ವಾವಲಂಬನೆಯತ್ತ ಮುಖ ಮಾಡುತ್ತ ಬಂದರು. ವಿಶೇಷ ಏನೆಂದರೆ ಕೃಷಿಯಿಂದಾಗಿಯೇ ಇವರ ಹಿರಿಯ ಮಗ ಜರ್ಮನಿಯಲ್ಲಿ ಉನ್ನತ ವ್ಯಾಸಾಂಗ ಮಾಡಿ ಎಂ.ಎಸ್. ಪದವಿಯಲ್ಲಿ ರಿಸರ್ಚ ಮಾಡುತ್ತಿದ್ದಾನೆ. ಇದು ಕೇವಲ ಕೃಷಿಯಿಂದ ಸ್ವಾವಲಂಬನೆ ಸಾಧಿಸಿದ್ದಕ್ಕಾಗಿ ಆಯಿತು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಸಾಂಪ್ರದಾಯಿಕ ಕೃಷಿ :

ಎರಡೆಕರೆ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುವುದೇ ಇವರ ಮುಖ್ಯ ಗುರಿ. ತೋಟಗಾರಿಕೆ ಇಲಾಖೆ ಸಹಾಯಧನದಡಿ ಸಮಗ್ರ ಕೃಷಿ ಪದ್ಧತಿಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅಭಿವೃದ್ಧಿ ಪಡಿಸಿದ್ದಾರೆ. ಮುಖ್ಯ ಬೆಳೆಯಾಗಿ ಅಡಿಕೆ ಬೆಳೆದು ವಾರ್ಷಿಕ 10 ಲಕ್ಷ ರೂ. ಆದಾಯ ಗಳಿಸುತ್ತಾರೆ. ಬಹುಮುಖ ಪಾತ್ರ ನಿರ್ವಹಿಸುವ ಮಧುಮತಿ ಸಂಸಾರದ ಜವಾಬ್ದಾರಿಯ ಜೊತೆಗೆ ಸ್ವತಃ ತೋಟದಲ್ಲಿ ಆಳುಗಳ ಜೊತೆ ದಿನವಿಡಿ ದುಡಿಯತ್ತಾರೆ.

ಪ್ರಾರಂಭದಲ್ಲಿ ಅಡಿಕೆ ಮಾತ್ರ ಬೆಳೆಯುತ್ತಿದ್ದ ಮಧುಮತಿಯವರು ತಮ್ಮ ಸಂತೋಷ ಮತ್ತು ಹವ್ಯಾಸಕ್ಕಾಗಿ ಉಪಬೆಳೆಯಾಗಿ ವಿವಿಧ ಜಾತಿಯ ಕರಿಮೆಣಸು ಬೆಳೆಯಲು ಆರಂಭಿಸಿದರು. ತಿರುಪುಗರೆ, ಮಲ್ಲಿಸರ, ಪಣಿಯೂರು, ಕುರಿಮಲೆ, ಒಕ್ಕಾಳು ಎನ್ನುವ ಮೆಣಸಿನ ಕಾಳುಗಳ ತಳಿಗಳನ್ನು ಬೆಳೆದಿದ್ದಾರೆ. ಕಾಫಿ, ತೆಂಗು, ವಿವಿಧ ಜಾತಿಯ ಮಾವುಗಳ ಜತೆಗೆ ಬಾಳೆ, ಹಲಸು, ಪೇರಲ, ಲಿಂಬು, ಪಪ್ಪಾಯವನ್ನೂ ಬೆಳೆದಿದ್ದಾರೆ.

ಅರಣ್ಯ ಕೃಷಿಗೆ ಉತ್ತೇಜನ ನೀಡಲು ಗೇರು, ತೇಗ, ನಂದಿ, ಹಲಸು ಬೆಳೆದಿದ್ದಾರೆ. ಜೇನು ಸಾಕಣಿಕೆಯೊಂದಿಗೆ ಗೃಹಬಳಕೆಗೆ ಬೇಕಾದ ಲವಂಗ, ಜಾಯಿಕಾಯಿ, ಏಲಕ್ಕಿ, ಅರಿಶಿಣ ಇವುಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ. ತಮ್ಮ ತೋಟದ ಅಡಿಕೆ ಕೊನೆಗಳ ರಕ್ಷಣೆಗಾಗಿ ತೋಟದಲ್ಲಿ ಬೆಳೆದ ಕೋಕೋ ಹಣ್ಣುಗಳನ್ನು ಹಾಗೇ ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಬಿಡುತ್ತಾರೆ.

ಕೃಷಿಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಗೊಬ್ಬರ ಬಳಸುತ್ತಿರುವುದು ಇವರ ವಿಶೇಷತೆಗಳಲ್ಲಿ ಒಂದು. ಮಣ್ಣಿನ ಸಾರ ಸಂರಕ್ಷಿಸುವ ಸಲುವಾಗಿ ಜಮೀನಿನ ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಸಿದ್ದಾರೆ. ವರ್ಷಕ್ಕೆ ಎರಡು ಬಾರಿ ಗಿಡಗಳಿಗೆ ಬೋರ್ಡೋ ಸಿಂಪರಣೆ ಮಾಡುತ್ತಾರೆ. ಕಾಳು ಮೆಣಸು ಬಿಡಿಸುವ ಯಂತ್ರದಿಂದ ತಾವೇ ಕಾಳನ್ನು ಬೇರ್ಪಡಿಸುತ್ತಾರೆ. ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ತಮ್ಮಲ್ಲಿರುವ ಉತ್ಕೃಷ್ಠ ಮೆಣಸಿನಕಾಳು ಹಾಗೂ ಸಂಸ್ಕರಿಸಿದ ಅರಶಿಣ ಪುಡಿಯನ್ನು ಪಾರ್ಸೆಲ್ ಮೂಲಕ ಬೆಂಗಳೂರಿನಂಥ ದೂರದ ಊರುಗಳಿಗೆ ಕಳುಹಿಸಿಕೊಡುತ್ತಾರೆ.

ಸಮಗ್ರ ಕೃಷಿಯಲ್ಲಿ 2017ರಲ್ಲಿ ಕೃಷಿ ಇಲಾಖೆಯವರು ‘ಉತ್ತಮ ಕೃಷಿ ಮಹಿಳೆ’ ಎಂದು ಗೌರವಿಸಿದ್ದಾರೆ. ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಇವರು ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿಯೊಂದಿಗೆ ಗೌರವಿಸಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಹಲವರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಶ್ಲಾಘಿಸಿ ಗೌರವಿಸಿದೆ. ಮಧುಮತಿಯವರ ಸಂಪರ್ಕಕ್ಕೆ: 8861899678
(ವಾಟ್ಸಾಪ್ ಕಾಲ್ ಮಾತ್ರ)

ಚಿತ್ರ, ಲೇಖನ, ವಿಡಿಯೊ: ದರ್ಶನ ಹರಿಕಾಂತ, ಶಿಕ್ಷಕರು, ಬಿಳಗಿ, ಸಿದ್ದಾಪುರ.