ಕಾರವಾರ: ಶಿರಸಿಗೆ ರೋಹಿಂಗ್ಯಾ ಭಯೋತ್ಪಾದಕರ ನಂಟು ಇದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ  ಹರಿದಾಡುತ್ತಿರು ಸುದ್ದಿ ಅಪ್ಪಟ ಸುಳ್ಳು.

ತನಿಖೆಯ ವಿಷಯವನ್ನೇ ಬೇರೆ ರೀತಿಯಲ್ಲಿ ತಿರುಚಿ ಹೇಳಲಾಗುತ್ತಿದೆ. ರೋಹಿಂಗ್ಯಾ ಭಯೋತ್ಪಾದಕರ ತನಿಖೆ ವಿಷಯದಲ್ಲಿ ನಡೆದಿದ್ದೇ ಬೇರೆ. ಆದರೆ, ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ಹೇಳುತ್ತಿರುವುದೇ ಬೇರೆ. ಅಸಲಿಗೆ ವಾಸ್ತವ ಏನು ಎನ್ನುವ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ರಾಮನಗರದಲ್ಲಿ 2018ರಲ್ಲಿ ಬಂಧಿಸಲಾದ ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯ ಜಹೀಲುಲ್ ಯಾನೆ ಕೌಸರ್ ವಿಚಾರಣೆ ಸಂದರ್ಭದಲ್ಲಿ ಸಂದರ್ಭದಲ್ಲಿ ದೊರಕಿದ ಸಿಮ್ ಕಾರ್ಡ್ಗಳು ಕುಂದಾಪುರದ ಶಿರೂರು ಮೂಲದ ಮದರಸಾದ ಶಿಕ್ಷಕನೊಬ್ಬನ ಹೆಸರಲ್ಲಿದ್ದವು.

ಹೀಗಾಗಿ ಈ ಶಿಕ್ಷಕನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಈ ಶಿಕ್ಷಕನ ಹೆಸರಿನಲ್ಲಿ ಶಿರಸಿಯಲ್ಲಿ ಒಂದು ಮನೆಯಿದೆ ಎಂಬ ಅನುಮಾನದಿಂದ ತನಿಖಾ ಸಂಸ್ಥೆಯ ಅಧಿಕಾರಿಗಳು ಕಳೆದ ವಾರ ಸ್ಥಳಿಯ ಪೊಲೀಸರ ನೆರವು ಪಡೆದು ಶಿರಸಿಯಲ್ಲಿ ಶೋಧ ಕಾರ್ಯ ನಡೆಸಿದ್ದರು.

ಆದರೆ ಈ ವೇಳೆ ಶಿರಸಿಯಲ್ಲಿ ಮನೆ ಹೊಂದಿರುವ ವ್ಯಕ್ತಿಯೇ ಬೇರೆ ಎಂಬುದು ತಿಳಿದು ಬಂದಿತ್ತು. ಇಬ್ಬರೂ ಒಂದೇ ಹೆಸರಿನವರಾದ್ದರಿಂದ ಗೊಂದಲ ಉಂಟಾಗಿ ಈ ಶೋಧ ಕಾರ್ಯ ನಡೆದಿದ್ದು ಬಳಿಕ ತನಿಖಾ ತಂಡದ ಅಧಿಕಾರಿಗಳು ವಾಪಸ್ಸು ಮರಳಿದ್ದಾರೆ ಎಂದು ಶಿರಸಿ ಸಿಪಿಐ ದಿ ಸ್ಟೇಟ್ ನೆಟ್ವರ್ಕ್ ಗೆ ಮಾಹಿತಿ ನೀಡಿದ್ದಾರೆ.

ಕೇವಲ ಶೋಧ ಕಾರ್ಯಕ್ಕೆ ತನಿಖಾ ತಂಡದ ಆಗಮಿಸಿದ ಮಾಹಿತಿಯನ್ನು ಪಡೆದ ಕೆಲವು ಮಾಧ್ಯಮಗಳು ಶಿರಸಿಯಲ್ಲಿ ಭಯೋತ್ಪಾದಕರ ನಂಟು ಇದೆ ಎನ್ನುವ ಅರ್ಥದಲ್ಲಿ ವರದಿ ಪ್ರಸಾರ ಮಾಡಿವೆ. ಇದರಿಂದ ಶಿರಸಿ ಸೇರಿದಂತೆ ಉತ್ತರ ಕನ್ನಡದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ವಾಟ್ಸಾಪ್ ಸಂದೇಶ.

ಅಲ್ಲದೆ, ಶಿರಸಿಯಲ್ಲಿ ರೋಹಿಂಗ್ಯಾ ಭಯೋತ್ಪಾದಕರ ವಿಷಯವಾಗಿ ತನಿಖೆಯೇ ನಡೆದಿಲ್ಲ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅಕ್ಷರಶಃ ಸುಳ್ಳು ಸುದ್ದಿ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಎಸ್ ಪಿ ಶಿವಪ್ರಕಾಶ ದೇವರಾಜ ದಿ ಸ್ಟೇಟ್ ನೆಟ್ವರ್ಕ್ ಫ್ಯಾಕ್ಟ್ ಚೆಕ್ ತಂಡಕ್ಕೆ ತಿಳಿಸಿದ್ದಾರೆ.