ವರದಿ: ರವಿತೇಜ ಕಾರವಾರ
ಕಾರವಾರ: ಅಂತರರಾಜ್ಯ ಗಡಿ ನಿರ್ಬಂಧ ತೆರವುಗೊಳಿಸಿದ್ದರಿಂದ ಕಾರವಾರ-ಗೋವಾ ಗಡಿಯಲ್ಲಿ ಮಂಗಳವಾರ ಆರು ತಿಂಗಳ ಬಳಿಕ ಭೇಟಿಯಾದ ಅಪ್ಪ, ಮಗಳು ಪರಸ್ಪರ ಅಪ್ಪಿ ಕಣ್ಣೀರು ಸುರಿಸಿದ ಮನಕಲಕುವ ಘಟನೆಯೊಂದು ನಡೆಯಿತು.

ಕೊರೊನಾ, ಕ್ವಾರಂಟೈನ್ ಭಯದಿಂದ ಅಪ್ಪ ಗೋವಾದಲ್ಲಿ ಮಗಳು ಕಾರವಾರದಲ್ಲಿ ಸಿಲುಕಿಕೊಂಡಿದ್ದರು. ಗೋವಾ ಗೇಟ್ ತೆರೆದಾಗ ಇವರಿಬ್ಬರ ಪ್ರೀತಿ, ಮಮಕಾರ ಕಂಡು ಅಲ್ಲಿದ್ದವರೆಲ್ಲ ಭಾವುಕರಾದರು. ಕಣ್ಣೀರಿಟ್ಟರು.

ಏನಾಗಿತ್ತು?

ಕಾರವಾರ ನಗರದ ನಿವಾಸಿ ಜಮೀರ್ ಅವರು ಗೋವಾದ ಮಡಗಾಂವನಲ್ಲಿ ತಮ್ಮ ಸ್ವಂತ ಉದ್ಯಮವನ್ನು ನಡೆಸುತ್ತಿದ್ದರು. ಹೀಗಾಗಿ ಅಲ್ಲಿಯೇ ಅವರು ಇದ್ದು, ಕಾರವಾರದಲ್ಲಿರುವ ತಮ್ಮ ಮನೆಗೆ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಬಂದು ಕುಟುಂಬದೊಂದಿಗೆ ದಿನ ಕಳೆದು ಮತ್ತೆ ವಾಪಸ್ಸಾಗುತ್ತಿದ್ದರು.

ಕೊರೊನಾ ಕಾರಣಕ್ಕೆ ಮಾರ್ಚ್ ಕೊನೆ ವಾರದಲ್ಲಿ ಏಕಾಏಕಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಯಿತು. ಅದಕ್ಕೂ ಮೊದಲೇ ಅಂತರರಾಜ್ಯ ಗಡಿಗಳನ್ನು ಸರಕಾರಗಳು ಬಂದ್ ಮಾಡಿ ಬಿಟ್ಟಿದ್ದವು. ಹೀಗಾಗಿ ಜಮೀರ್ ತಮ್ಮ ಕುಟುಂಬವನ್ನು ಬಿಟ್ಟು ಗೋವಾದಲ್ಲಿಯೇ ಉಳಿಯುವಂತಾಯಿತು.

ಕಾರವಾರದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಆತನ ಮಗಳು ಸೇರಿದಂತೆ ಕುಟುಂಬವು ದೂರವುಳಿಯುವಂತಾಯಿತು. ಕಾರವಾರದಿಂದ ಮಡಗಾಂವ ಕೇವಲ 65 ಕಿ.ಮೀ. ಅಂತರದಲ್ಲಿದ್ದರೂ ಒಬ್ಬರನ್ನೊಬ್ಬರು ಭೇಟಿ ಯಾಗಲು ಸಾಧ್ಯವಾಗದೇ ಪರಿತಪಿಸುವಂತಾಗಿತ್ತು.

ಕೊರೋನಾ ಸದ್ಯದಲ್ಲೇ ಕೊನೆಯಾಗಬಹುದು, ತಿಂಗಳ ಬಳಿಕ ಮತ್ತೆ ಅಪ್ಪನನ್ನು ಸೇರುವ ವಿಶ್ವಾಸದಲ್ಲಿದ್ದ ಮಗಳು ಮಮ್ತಾಜ್‌ಳಿಗೆ ದೇಶದಲ್ಲಿ ಪ್ರತಿ ದಿನ ಹೆಚ್ಚುತ್ತಿರುವ ಕೋವಿಡ್-19 ನಿಂದಾಗಿ ಒಂದು ತಿಂಗಳು ಹೋಗಿ 2, 3, ಹೀಗೆ ಐದು ತಿಂಗಳು ಕಳೆದರೂ ಭೇಟಿಯಾಗಲು ಸಾಧ್ಯವಗಲೇ ಇಲ್ಲ.

ಕ್ವಾರಂಟೈನ್, ವರದಿಗೆ ಹೆದರಿ ಮನೆಯಲ್ಲೇ ಉಳಿದರು:

ಮಗಳೇ ಗೋವಾ ರಾಜ್ಯಕ್ಕೆ ಹೋಗಿ ತಂದೆಯವರನ್ನು ಕಾಣಬೇಕೆಂದರೂ ಅಥವಾ ತಂದೆಯೇ ಕಾರವಾರಕ್ಕೆ ಬರಬೇಕೆಂದರೂ 14 ದಿನಗಳ ಕ್ವಾರಂಟೈನ್ ಪೂರೈಸುವುದೇ ದೊಡ್ಡ ಸವಾಲಾಗಿತ್ತು. ಕಾರವಾರಕ್ಕೆ ಬಂದರೆ ಇಲ್ಲಿ 14 ದಿನ ಕ್ವಾರಂಟೈನ್ ಮುಗಿಸಿ ಅಲ್ಲಿ ಮತ್ತೆ ಹೋದಾಗ 14 ದಿನ ಕ್ವಾರಂಟೈನ್ ಇರಬೇಕಾದ ಅನಿವಾರ್ಯತೆ.

ಇದರ ಜತೆಗೆ ಗೋವಾ ಸರಕಾರ 2000 ರೂ. ಪಾವತಿಸಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಪ್ರವೇಶ ಮಾಡಬಹುದು ಎಂದು ಅವಕಾಶ ನೀಡಿತ್ತಾದರೂ ಈ ಕೋವಿಡ್ ರಿಪೋರ್ಟ್ ಎಲ್ಲಿ ಫೇಕ್ ಆಗಿ ಬಂದು ಸಮಸ್ಯೆ ಉಂಟಾಗಬಹುದೋ ಎಂಬ ಭಯ ಇವರಲ್ಲಿತ್ತು.

ಹೀಗಾಗಿ ಯಾವುದೇ ಲಕ್ಷಣಗಳಿಲ್ಲದೇ ಪರೀಕ್ಷೆ ಮಾಡಿಸಿಕೊಳ್ಳುವುದೇ ಬೇಡ ಎಂದು ನಿಶ್ಚಯಿಸಿ ಗಡಿ ದಾಟುವ ಸಾಹಸಕ್ಕೆ ಕೈ ಹಾಕದೇ ಪ್ರತಿದಿನ ವಿಡಿಯೋ ಕಾಲಿಂಗ್ ಮೂಲಕವೇ ಸಂವಹನ ನಡೆಸಿ ತೃಪ್ತಿ ಪಡುತ್ತಿದ್ದರು.

ಭಾವುಕ ಕ್ಷಣಗಳು

ಗೋವಾ ಪ್ರವೇಶಕ್ಕೆ ಮುಕ್ತ ಅವಕಾಶ ಕೊಟ್ಟಿದ್ದರಿಂದ ಜಮೀರ್ ತನ್ನ ಸ್ವಂತ ಊರು ಕಾರವಾರಕ್ಕೆ ಆಗಮಿಸುವ ವೇಳೆ ಅವರನ್ನು ಭೇಟಿಯಾಗಿ ಕರೆತರಲು ಪುತ್ರಿ ಮಮತಾಜ್ ಗೋವಾ ಗಡಿಗೆ ಹೋಗಿದ್ದಳು. ಗಡಿಭಾಗ ಪೊಲೇಮ್‌ನಲ್ಲಿ ತನ್ನ ತಂದೆಯನ್ನು ಕಾಣುತ್ತಿದ್ದಂತೆ ಓಡಿ ಹೋಗಿ ಅಪ್ಪಿ ಕಣ್ಣೀರು ಸುರಿಸಿದಳು.

ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಅಲ್ಲಿದ್ದ ಜನರು ಒಂದು ಕ್ಷಣ ಭಾವಪರವಶರಾಗಿ ಕಣ್ಣೀರಿಟ್ಟರು. ಕೆಲವು ನಿಮಿಷಗಳ ವರೆಗೆ ನಡೆದ ಈ ಘಟನೆಯಿಂದ ಸ್ಥಳದಲ್ಲಿಯೇ ಇದ್ದ ಕನ್ನಡ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಸೆಲ್ಪೀ ವಿಡಿಯೋ ಮಾಡಿ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ ಮೊದಲ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ನಡೆಸಲು ಆದೇಶ

ಜಮೀರ್ ಹಾಗೂ ಮಮ್ತಾಜ್ಇಬ್ಬರೂ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಿಮ್ಮ ಹಾಗೂ ಸಂಘಟನೆಯವರ ಹೋರಾಟದಿಂದ ಇಂದು ನಾವು ಒಂದಾಗಲು ಸಾಧ್ಯವಾಯಿತು ಎಂದು ಹೇಳಿ ಕಟ್ಟೀರಿಟ್ಟು ರಾಘು ನಾಯ್ಕೆ ಅವರಿಗೆ ಧನ್ಯವಾದಗಳನ್ನೂ ಸಲ್ಲಿಸಿದರು.

ಈ ಬಗ್ಗೆ “ದಿ ಸ್ಟೇಟ್ ನೆಟ್ವರ್ಕ್’ ನೊಂದಿಗೆ ಮಾತನಾಡಿದ ಹೋರಾಟಗಾರ ರಾಘು ನಾಯ್ಕ, ಉತ್ತರ ಕನ್ನಡದ ಜನತೆಯಲ್ಲಿ ಅದರಲ್ಲೂ ಕಾರವಾರ ಹಾಗೂ ಅಂಕೋಲಾದ ಸಾವಿರಾರು ಯುವಕರು ಗೋವಾವನ್ನೇ ಉದ್ಯೋಗಕ್ಕಾಗಿ ನಂಬಿದ್ದಾರೆ. ಗಡಿ ಸಮಸ್ಯೆಯಿಮದಾಗಿ ಅವರೆಲ್ಲ ನಿರುದ್ಯೋಗಿಗಳಾಗಿ ಮನೆಯಲ್ಲೇ ಇರುವಂತಾಗಿತ್ತು. ಹೀಗಾಗಿ ಹೋರಾಟದ ಹಾದಿ ಹಿಡಿದಿದ್ದ ನಮಗೆ ಈಗ ಇಂತಹ ಅಪೂರ್ವ ಮನಮಿಡಿಯುವ ಘಟನೆಗಳು ನಡೆದು ಕುಟುಂಬದವರೊಂದಿಗೆ ಸೇರಲು ಅವಕಾಶ ಸಿಕ್ಕಿರುವುದು ನೋಡಿ ನಮ್ಮ ಹೋರಾಟ ಸಾರ್ಥಕವಾಯಿತು ಎನಿಸುತ್ತಿದೆ ಎಂದರು.

ಮುಕ್ತ ಸಂಚಾರಕ್ಕೆ ಗೋವಾ ಗೇಟ್ ತೆರೆದಾಗ ಕೇವಲ ಅಪ್ಪ ಮಗಳಾದ ಜಮೀರ್, ಮಮ್ತಾಜ್ ಅವರ ಸಮ್ಮಿಲನ ಮಾತ್ರವಲ್ಲ. ದೂರದಲ್ಲಿದ್ದು ಭೇಟಿಯಾಗಲು ಸಾಧ್ಯವಾಗದೆ ಇಂತಹ ಹಲವಾರು ತಂದೆ, ತಾಯಿ, ಮಕ್ಕಳು, ಸಹೋದರ, ಸಹೋದರಿಯರ ಭೇಟಿಗೆ ಈ ಗಡಿ ನಿರ್ಬಂಧ ತೆರವು ಪ್ರಕ್ರಿಯೆ ಕಾರಣವಾಗಿದೆ. ಹಲವಾರು ಮಂದಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.