ಕಾರವಾರ: ಎರಡು ದಿನಗಳ ಹಿಂದೆ ಕಾರವಾರ ನಗರದ ಸರ್ವೋದಯನಗರದ ಬಾಣಂತಿ ಮಹಿಳೆಯೋರ್ವಳು ಕಿಮ್ಸ್ನಲ್ಲಿ ಮೃತಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರು ವಿಶೇಷ ತಂಡ ರಚಿಸಿ 10 ದಿನಗಳೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.

ಸೆ.3 ರಂದು ಗೀತಾ ಬಾನಾವಳಿ ಎಂಬ ಬಾಣಂತಿಯು ಸಂತಾಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವೇಳೆ ಮೃತಪಟ್ಟಿದ್ದಳು. ಈ ಘಟನೆಯು ಕೀಮ್ಸ್ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಮೃತ ಬಾಣಂತಿಗೆ ನ್ಯಾಯ ದೊರಕಿಸಿಕೊಡುವಂತೆ ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದರು.

ಆ ಬಳಿಕ ಶನಿವಾರ ನಗರದಲ್ಲಿ ಕುಟುಂಬಸ್ಥರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಘಟನೆಯ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನಲ್ಲಿ ತಪ್ಪಿತಸ್ಥ ವೈದ್ಯರನ್ನು 8 ದಿನದ ಒಳಗಾಗಿ ಅಮಾನತ್ತು ಮಾಡಿ ಬಂದಿಸಬೇಕು. ಇಲ್ಲವೇ ವರ್ಗಾವಣೆ ಮಾಡಲು ಆಗ್ರಹಿಸಿದ್ದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತಲಕರ್ ಅವರ ವಿರುದ್ಧ ಮೊದಲಿನಿಂದಲೂ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದರೂ ವೈದ್ಯರು ಮಾತ್ರ ತಮ್ಮ ಪ್ರಭಾವವನ್ನು ಬೀರಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ಮೃತ ಬಾಣಂತಿಗೆ ಅನಸ್ತೇಸಿಯಾ ಕೊಟ್ಟವರೂ ತಾವಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದರು.

ಸಿಇಓ ನೇತೃತ್ವದಲ್ಲಿ ತಂಡ

ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಈ ಬಗ್ಗೆ ತನಿಖೆ ನಡೆಸಲು ಕ್ರಮ ವಹಿಸಿದ್ದಾರೆ. ಐದು ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದಾರೆ. ತಂಡದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತ್ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರೋಶನ್ ಅವರನ್ನು ನೇಮಿಸಲಾಗಿದೆ. ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದಕುಮಾರ ಅವರನ್ನು ಹಾಗೂ ಸದಸ್ಯರಾಗಿ ಕಿಮ್ಸ್ನ ಹೃದ್ರೋಗ ತಜ್ಞರು, ಖಾಸಗಿ ಅರವಳಿಕೆ ತಜ್ಞರು ಹಾಗೂ ಖಾಸಗಿ ಸ್ತ್ರೀರೋಗ ತಜ್ಞರನ್ನು ನೇಮಿಸಿದ್ದಾರೆ.

ಈ ತಂಡದ ಖಾಸಗಿ ವೈದ್ಯರನ್ನು ಜಿಪಂ ಸಿಇಓ ಅವರು ನೇಮಿಸಲು ಕ್ರಮವಹಿಸುವಂತೆ ಹಾಗೂ ಈ ತಂಡದವರು ದೂರಿನ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗದೇ ಪರಿಶೀಲನೆ ನಡೆಸಿ ಪಾರದರ್ಶಕವಾಗಿ ಸ್ಪಷ್ಟವಾದ ಹಾಗೂ ವಿವರವಾದ ವರದಿಯನ್ನು 10 ದಿನಗಳೊಳಗೆ ನೀಡುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರು ಆದೇಶಿಸಿದ್ದಾರೆ.