ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಮಣ್ಣಿನಲ್ಲಿ ಹೂಳದೇ, ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ಮಾಡಲಾಯಿತು.

ಬಾಗಲಕೋಟೆಯಿಂದ ಗಂಧದ ಕಟ್ಟಿಗೆಯನ್ನು ತಂದು ಚಿತೆಯನ್ನು ತಯಾರಿಸಲಾಗಿತ್ತು. ಆದ್ರೆ ಶ್ರೀಗಳು ವಿಧಿ ವಿಧಾನಗಳು ಅನಾವಶ್ಯಕ ಎಂದು ತಿಳಿಸಿದ್ದರು. ಹೀಗಾಗಿ ಬಹಳ ಸರಳವಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜ್ಞಾನ ಯೋಗಾಶ್ರಮದ ಆವರಣದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಮಾಡಲಾಯಿತು. ಸುತ್ತೂರು ಶ್ರೀ, ಕನ್ಹೇರಿ ಮಠದ ಶ್ರೀ ಹಾಗೂ ಬಸವಲಿಂಗ ಸ್ವಾಮೀಜಿಗಳು ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಕೊನೆಯ ಕಾರ್ಯ ಪೂರೈಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಹಲವು ಮಠಾಧೀಶರು ಹಾಗೂ 20 ಲಕ್ಷಕ್ಕೂ ಅಧಿಕ ಭಕ್ತರು ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.