ಕಾರವಾರ: ಅಂತಾರಾಜ್ಯ ಗಡಿ ನಿರ್ಬಂಧ ತೆರವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಕರ್ನಾಟಕ ಮತ್ತು ಗೋವಾ ಮಧ್ಯೆ ಸಾರಿಗೆ ಬಸ್ ಸಂಚಾರ ಆರಂಭವಾಗಲಿದೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಲಾಕ್ ಸಡಿಲಿಕೆಯಾದರೂ ಅಂತಾರಾಜ್ಯ ಬಸ್ ಸಂಚಾರ ಆರಂಭವಾಗಿರಲಿಲ್ಲ. ಇದರಿಂದ ಗೋವಾ ರಾಜ್ಯಕ್ಕೆ ಕೆಲಸಕ್ಕೆ ಹೋಗುವವರಿಗೆ ಸಾಕಷ್ಟು ಸಮಸ್ಯೆಯಾಗಿತ್ತು.

ಆದರೀಗ, ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಆರಂಭಿಸಲು ಕರ್ನಾಟಕ ಮತ್ತು ಗೋವಾ ರಾಜ್ಯ ಸರಕಾರಗಳು ಗ್ರೀನ್ ಸಿಗ್ನಲ್ ನೀಡಿವೆ. ಹಾಗಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಸ್ ನಿಲ್ದಾಣಗಳಿಂದ ಗೋವಾ ರಾಜ್ಯದ ವಿವಿಧ ನಗರಗಳಿಗೆ ಬಸ್ ಹೊರಡಲಿವೆ.

ಜತೆಗೆ ಗೋವಾ ರಾಜ್ಯದ ಗಡಿ ಜಿಲ್ಲೆಗಳಾದ ಧಾರವಾಡ, ಬೆಳಗಾವಿ ಜಿಲ್ಲೆಗಳಿಂದಲೂ ಗೋವಾಕ್ಕೆ ಬಸ್ ಗಳು ಸಂಚರಿಸಲಿವೆ ಎಂದು ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆದರೆ, ಈ ಹಿಂದೆ ಇರುವಂತೆ ವೇಳಾಪಟ್ಟಿಯ ಪ್ರಕಾರವೇ ಬಸ್ ಸಂಚರಿಸುವುದಿಲ್ಲ. ಉಬಯ ರಾಜ್ಯಗಳ ನಡುವೆ ಬಸ್ ಸಂಚಾರ ಆರಂಭಿಸಲು ಗುರುವಾರವಷ್ಟೇ ಅನುಮತಿ ಸಿಕ್ಕಿದ್ದರಿಂದ ಇನ್ನೂ ಜನರಿಗೆ ಪ್ರಚಾರ ಮಾಡಿಲ್ಲ. ಹಾಗಾಗಿ ಶುಕ್ರವಾರದ ಪ್ರಯಾಣಿಕರ ಸಂಖ್ಯೆ ನೋಡಿ ಬಸ್ ಸಂಚಾರ ಆರಂಭಿಸುವುದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಡಿಟಿಒ ಅವರು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಬಸ್ ಓಡಿಸುವ ಬಗ್ಗೆ ಕದಂಬ ಸಾರಿಗೆ ಸಂಸ್ಥೆ ಖಚಿತಪಡಿಸಿಲ್ಲ. ಉತ್ತರ ಕನ್ನಡ ಜಿಲ್ಲೆ ಮತ್ತು ಕದಂಬ ಸಂಸ್ಥೆ ಅಧಿಕಾರಿಗಳು ಮಾಖಿಕವಾಗಿ ಮಾತುಕತೆ ನಡೆಸಿದ್ದು, ಕರ್ನಾಟಕದ ಬಸ್ ಗಳು ಸಂಚರಿಸುವುದು ಖಚಿತವಾಗಿದೆ.

ಕದಂಬ ಸಂಸ್ಥೆ ಬಸ್ ಗಳು ಕಾರವಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಮೊದಲಿನ ರೀತಿ ಈಗ ಯಾವುದೇ ನಿರ್ಬಂಧಗಳು ಇಲ್ಲ. ಹಾಗಾಗಿ ಬಸ್ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಉತ್ತರ ಕನ್ನಡ ಜಿಲ್ಲೆಯಿಂದ ಗೋವಾಕ್ಕೆ ಹೋಗುವವರು ಶುಕ್ರವಾರದಿಂದಲೇ ಪ್ರಯಾಣ ಆರಂಭಿಸಬಹುದು ಎಂದು ಡಿಟಿಒ ಅವರು ತಿಳಿಸಿದ್ದಾರೆ.

ಕ್ವಾರಂಟೈನ್ ಇಲ್ಲ

ಗೋವಾಕ್ಕೆ ಬಸ್ ನಲ್ಲಿ ಪ್ರಯಾಣಿಸಿದರೆ ಯಾವುದೇ ಕ್ವಾರಂಟೈನ್ ಇರುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕರ್ನಾಟಕದಲ್ಲಿ ಇರುವಂತೆಯೇ ಜಿಲ್ಲೆಯ ಜನರು ಗೋವಾದಲ್ಲಿ ಆರಾಮವಾಗಿ ಬಸ್ ನಲ್ಲಿ ಪ್ರಯಾಣಿಸಿ ಅದೇ ದಿನ ತಮ್ಮ ಊರಿಗೆ ಮರಳಬಹುದು. ಗೋವಾದ ನಿವಾಸಿಗಳು ಕೂಡ ಜಿಲ್ಲೆಗೆ ಬಂದರೆ ಕ್ವಾರಂಟೈನ್ ಆಗುವ ಅಗತ್ಯ ಇಲ್ಲ ಎಂದು ಶಿರಸಿ ಡಿಟಿಒ ಅವರು ದಿ ಸ್ಟೇಟ್ ನೆಟ್ವರ್ಕ್ ಗೆ ತಿಳಿಸಿದ್ದಾರೆ.