ಉತ್ತರ ಕನ್ನಡ: ನೆರೆಯ ಗೋವಾ ರಾಜ್ಯ ಸರ್ಕಾರ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಇಂದು ನ್ಯಾಯಾಂಗ ನಿಂದನೆ ದೂರು ದಾಖಲಿಸಿದೆ.

ಸುಪ್ರೀಂ ಕೋರ್ಟ್ ನಲ್ಲಿ ದೂರು ಕೊಟ್ಟಿರುವುದಾಗಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ನಡೆಯುತ್ತಿರುವ ಮಹದಾಯಿ ನದಿ ವಿಚಾರವಾಗಿಯೇ ಗೋವಾ ಮತ್ತೆ ತಕರಾರು ಎತ್ತಿದೆ.

ಕರ್ನಾಟಕ ಅನಧಿಕೃತವಾಗಿ ಮಹದಾಯಿ ನದಿ ನೀರನ್ನು ತನ್ನತ್ತ ತಿರುಗಿಸಿ ಕೊಂಡಿದೆ ಎನ್ನುವ ಕಾರಣ ನೀಡಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗಿದೆ. ಅಲ್ಲದೆ, ತಮ್ಮ ಹಕ್ಕಿಗಾಗಿ ಮುಂದೆಯೂ ಹೋರಾಟ ಮುಂದುವರಿಸುವುದಾಗಿ ಗೋವಾ ಸಿಎಂ ಹೇಳಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಾಧೀಕರಣದ ತೀರ್ಪು ಕೊಟ್ಟು ವರ್ಷವೇ ಕಳೆದಿದೆ. ಅಧಿಕೃತ ಗೆಜೆಟ್ ಪ್ರಕಟಣೆ ಬಾಕಿ ಇದೆ. ಹೀಗಿದ್ದರೂ ಮಹದಾಯಿ ವಿವಾದ ಪದೇ ಪದೆ ಪ್ರಶ್ನಾರ್ಥಕವಾಗಿ ಚರ್ಚೆಯಾಗುತ್ತಲೇ ಇದೆ.