ಕೊರೊನಾ ಬಂದ ಮೇಲೆ ಜನರು ಭಾರತೀಯ ಔಷಧಗಳ ಹುಡುಕಾಟದಲ್ಲಿ ತೊಡಗಿರುವುದು ಇತ್ತೀಚಿನ ಬೆಳವಣಿಗೆ. ಈಗಂತೂ ಶಸ್ತ್ರಚಿಕಿತ್ಸೆ ಎಂದರೆ ಜನರು ಭಯ ಪಡುವ ಸ್ಥಿತಿ ಇದೆ. ಇಲ್ಲೊಬ್ಬರು ಅಂಥವರ ಪಾಲಿಗೆ ಆಪತ್ ಬಾಂಧವರಾಗಿ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮದ ಹಾಲಕ್ಕಿ ಸಮುದಾಯದ ನಾಟಿ ವೈದ್ಯ ಮಂಕಾಳು ಸುಕ್ರು ಗೌಡ ಇಂಥದ್ದೊಂದು ಕೌಶಲದಿಂದ ಗಮನಸೆಳೆಯುತ್ತಿದ್ದಾರೆ. ಸೈಹ್ಯಾದ್ರಿ ಪರ್ವತ ಶ್ರೇಣಿಯ ಅಂಚಿನಲ್ಲಿ ನೆಲೆಸಿರುವ ಹಾಲಕ್ಕಿ ಸಮುದಾಯ ಈಗಲೂ ಪ್ರಕೃತಿಯನ್ನೇ ನಂಬಿ ಬದುಕುತ್ತಿದೆ. ಅವರ ಜೀವನ ಕ್ರಮದಲ್ಲಿ ಇಂದಿಗೂ ಭಾರತೀಯ ಸಂಸ್ಕೃತಿಯನ್ನು ಅಚ್ಚಾಗಿ ಕಾಣಬಹುದು.

ಅದೇ ಸಮುದಾಯದ ಮಂಕಾಳು ಗೌಡ ಅವರು ಕೊಡುವ ಔಷಧ ಅದೆಷ್ಟು ಪರಿಣಾಮಕಾರಿಯಾಗಿದೆ ಎಂದರೆ, ವೈದ್ಯರು ಗುಣಪಡಿಸದ ಅದೆಷ್ಟೋ ನೋವು, ಸಮಸ್ಯೆಗಳಿಗೆ ಇವರಿಂದ ಪರಿಹಾರ ದೊರೆತಿದೆ. ಶಸ್ತ್ರ ಚಿಕಿತ್ಸೆ ಇಲ್ಲದೆಯೇ ನೋವು ನಿವಾರಿಸುವ ಇವರಿಗೆ ತಾವಿರುವ ಹಸಿರು ಬೆಟ್ಟದಲ್ಲಿ ಬೆಳೆದ ಗಿಡಗಳೇ ಔಷಧ ಭಂಡಾರ. ಪೂರ್ವಜರು ಕಲಿಸಿದ ವಿದ್ಯೆಯಿಂದ ರೋಗಗಳನ್ನು ಗುಣಪಡಿಸುವ ಕಲೆಯನ್ನು ಇವರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ.

‘ಔಷಧಿಗಾಗಿ ಗಿಡಮೂಲಿಕೆಗಳನ್ನು ಸುತ್ತ-ಮುತ್ತಲಿನ ಬೆಟ್ಟದಿಂದ ಸಂಗ್ರಹಿಸುತ್ತೇನೆ. ಕೆಲವು ಅಪರೂಪದ ಸಸ್ಯಗಳನ್ನು ಸ್ವತಃ ಬೆಳೆದಿದ್ದೇನೆ. ನಾನು ಬಳಸುವ ವಿವಿಧ ಗಿಡಮೂಲಿಕೆಗಳನ್ನು ಬೇರೆ ಯಾರೂ ತಮ್ಮ ನಾಟಿ ಔಷಧದಲ್ಲಿ ಬಳಸುತ್ತಿಲ್ಲ. ಹಾಗಾಗಿ ಈ ಔಷಧಗಳು ವಿಶೇಷವಾಗಿದೆ’ ಎನ್ನುತ್ತಾರೆ ಮಂಕಾಳು ಗೌಡ.

ಹೇಗಿದೆ ಇವರ ಕೌಶಲ

ಮಂಕಾಳು ಗೌಡ ಅವರು ಜನರಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿವಿಧ ಬಗೆಯ ಒಗ್ಗದಿರುವಿಕೆ (ಅಲರ್ಜಿ), ಮೈ ತುರಿಕೆಯಿಂದ ಬೊಕ್ಕೆ ಏಳುವುದು, ಮುಖದ ಮೇಲಾಗುವ ಗುಳ್ಳೆಗಳು, ಗೋಲಾಕಾರದ ಬಿಳಿ ಮಚ್ಚೆ, ಉಸಿರಾಟದಲ್ಲಿ ತೊಂದರೆ, ಮೂಗು ಕಟ್ಟುವುದು, ಕಣ್ಣು-ಕಿವಿ ತುರಿಕೆ ಅಥವಾ ಇಡೀ ಶರೀರದಲ್ಲಿ ಆಗುವ ತುರಿಕೆಗಳಿಗೆ ಹಾಗೂ ರಕ್ತ ದೋಷದಿಂದ ಉಂಟಾಗುವ ಅಲರ್ಜಿಗಳಿಗೆ ಔಷಧಿ ಕೊಡುತ್ತಾರೆ.

ವಿಷಜಂತುಗಳು ಕಡಿದರೆ, ಹಿಮ್ಮಡಿ ಒಡೆದರೆ, ಶರೀರದ ಮೇಲಿರುವ ಹಳೆಯ ಗಾಯಗಳು, ಉಗುರು ಸುತ್ತು, ಋತು ಚಕ್ರದ ಸಮಯದಲ್ಲಿ ಕಂಡುಬರುವ ಉದರ ಶೂಲೆ, ವಿವಿಧ ಬಗೆಯ ತಲೆಶೂಲೆಗಳು, ಕಿವಿ ನೋವು, ಕಿವಿಯಲ್ಲಿ ನೀರು ಅಥವಾ ಕೀವು ಬರುವುದು, ಹಲ್ಲು ನೋವು, ಮೂಲವ್ಯಾದಿ ಹೀಗೆ ಇನ್ನೂ  ಹಲವಾರು ರೋಗಗಳಿಗೆ ಪರಿಣಾಮಕಾರಿಯಾದ ಔಷಧಿ ನೀಡುತ್ತಾರೆ.

ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸೊಂಟನೋವು, ಮೊಣಕಾಲು ನೋವು, ಕೀಲು ನೋವು, ಕುತ್ತಿಗೆ ನೋವು, ನರ ಸಂಬಂಧಿತ ನೋವುಗಳಗೆ ಔಷಧಿ ನೀಡುತ್ತಾರೆ. ದೇಹದ ಮೇಲೆ ಗೋಚರಿಸುವಂತಹ ವಿವಿಧ ಗಡ್ಡೆಗಳಿಗೆ ಶಸ್ತ್ರಚಿಕಿತ್ಸೆ ಇಲ್ಲದೇ ಗುಣಪಡಿಸುತ್ತಾರೆ.

ಇವರ ಔಷಧಿ ಪಡೆಯಲು ಅಕ್ಕ-ಪಕ್ಕದ ಗ್ರಾಮಸ್ಥರಲ್ಲದೇ ದೂರದ ಊರಿನಿಂದಲೂ ಇವರನ್ನು ಹುಡುಕಿಕೊಂಡು ಬರುತ್ತಾರೆ. ಒಮ್ಮೆ ಔಷಧಿ ಪಡೆದು ಗುಣಮುಖರಾದವರು ಇನ್ನೊಮ್ಮೆ ಬರುವಾಗ ಇನ್ನೂ ಮೂರ್ನಾಲ್ಕು ಜನರನ್ನು ಔಷಧಿಗಾಗಿ ಕರೆತರುತ್ತಾರೆ. ಮಂಕಾಳು ಗೌಡ ಅವರು ಇದೆಲ್ಲವನ್ನು ಸಮಾಜ ಸೇವೆಯ ರೂಪದಲ್ಲಿ ಮಾಡುತ್ತಿದ್ದಾರೆ. ರೋಗಿಗಳಿಂದ ಯಾವುದೇ ತರಹದ ಶುಲ್ಕ ಪಡೆಯುವುದಿಲ್ಲ. ಕೇವಲ ಒಂದು ತೆಂಗಿನಕಾಯಿ ಅಥವಾ ಮನೆ ದೇವರಿಗೆ ಪೂಜಾ ಸಾಮಗ್ರಿಗಳನ್ನು ರೋಗಿಗಳು ನೀಡಬಹುದು.

ವಿಡಿಯೊ ವರದಿ ನೋಡಿ

ಮಂಕಾಳು ಗೌಡರ ಮನೆ ತಲುಪುವ ದಾರಿ :-

ಅಂಕೋಲಾದಿಂದ ಹೊನ್ನೆಬೈಲ್ ಮಂಜಗುಣಿ ಬಸ್ ಮುಖಾಂತರ 8ಕಿ.ಮೀ. ಸಾಗಿ ಹೊನ್ನೆಬೈಲ್ ತಿರುವಿನಲ್ಲಿ ಇಳಿದು ಹೊನ್ನೆಬೈಲ್ ಬೀಚ್‍ಗೆ ಹೋಗುವ ದಾರಿಯಲ್ಲಿ ಅಂದಾಜು ಒಂದು ಕಿ.ಮೀ. ದೂರ ಸಾಗಬೇಕು. ಇವರ ಸಂಪರ್ಕದ ಸಂಖ್ಯೆ 8431410273, 7259418293.

ಲೇಖನ, ಚಿತ್ರಗಳು, ವಿಡಿಯೋ ಸಂದರ್ಶನ:
ದರ್ಶನ ಹರಿಕಾಂತ, ಶಿಕ್ಷಕರು,
ಬಿಳಗಿ, ಸಿದ್ದಾಪುರ, (ಮೊ 9448806661)