ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಒಂದು ವೈರಾಣು , ಇಷ್ಟು ದೊಡ್ಡ ಭೂಮಂಡಲವನ್ನು ಭಯಭೀತಗೊಳಿಸಿದೆ.
ಮೊದಲು ಚೀನಾ ದಲ್ಲಿ ಪತ್ತೆಯಾಗಿ , ಇಟಲಿ , ಫ್ರಾನ್ಸ್ ಹೀಗೆ ಹತ್ತು ಹಲವು ದೇಶಗಳಿಗೆ ಹರಡಿ , ಭಾರತಕ್ಕೂ ಕೋವಿಡ್ 19 ಕಾಲಿಟ್ಟಿದೆ. ಇದು ಹೊರದೇಶದಿಂದ ಪ್ರಯಾಣಿಸಿ ಭಾರತಕ್ಕೆ ವಾಪಸ್ಸಾದ ಪ್ರಯಾಣಿಕರಿಂದ ಬಂದಿರುವುದು ಬೆಳಕಿಗೆ ಬಂದಿದೆ.

ಈ ಸಮಯದಲ್ಲಿ , ಕೋವಿಡ್ 19 ಏಕೆ ಮತ್ತು ಹೇಗೆ ಮಾರಣಾಂತಿಕ ಎಂದು ತಿಳಿಯುವುದಾದರೆ, ಈ ಹಿಂದೆ ಕಾಣಿಸಿಕೊಂಡಿದ್ದ ಮೆರ್ಸ್ ಮತ್ತು ಸಾರ್ಸ್ ವೈರಾಣುಗಳಂತಹ, ಅದೇ ಗುಂಪಿಗೆ ಸೇರಿರುವಂತಹ ಒಂದು ವೈರಾಣು ಇದಾಗಿದೆ. ಸಾಮಾನ್ಯವಾಗಿ ಇದು ಒಬ್ಬರಿಂದೊಬ್ಬರಿಗೆ , ನೇರ ಸಂಪರ್ಕದಿಂದ , ಹನಿ ಸೋಂಕಿನಿಂದ ಹರಡುವಂತಹ ಕಾಯಿಲೆ.

ಯಾವುದೇ ವೈರಾಣು ಮನುಷ್ಯನ ದೇಹದಲ್ಲಿ ಇನ್ಫೆಕ್ಟ್ ಆಗಿದ್ದಲ್ಲಿ , ನಮ್ಮ ದೇಹದ ರೋಗನಿರೋಧಕ ಶಕ್ತಿ ವೈರರಾಣುವಿನ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸುತ್ತದೆ .ಇದೇ ಮೊದಲ ಬಾರಿಗೆ ಕೊರೋನ ವೈರಾಣು ಮನುಷ್ಯನಲ್ಲಿ ಕಾಣಿಸಿಕೊಂಡಿರುವ ಕಾರಣ , ನಮ್ಮಲ್ಲಿ ಅದಕ್ಕೆ ಪ್ರತಿರೋಧ ಶಕ್ತಿ ಇನ್ನೂ ಬಂದಿಲ್ಲ.ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ.

ವಿಶೇಷವಾಗಿ ಇದು 60 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಹಾಗೂ ಮಕ್ಕಳಲ್ಲಿ, ಮೊದಲೇ ಬೇರೆ ಆರೋಗ್ಯದ ಸಮಸ್ಯೆ ಇರುವ ಜನರಲ್ಲಿ ಇದು ಉಲ್ಬಣಗೊಳ್ಳುತ್ತದೆ. ವಯಸ್ಸಾದವರು ಮತ್ತು ಮಕ್ಕಳು ಮನೆಯಿಂದ ಹೊರಗೆ ಹೋಗದೆ ಇರುವ ಹಾಗೆ ನೋಡಿಕೊಳ್ಳಿ. ಬೇರೆಯವರು ಸಹ ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಹೋಗಿ. ಜತೆಗೆ , ಶುಚಿತ್ವ ಕಾಪಾಡಿ , ಪ್ರಯಾಣ ಮಾಡದಿರಿ. ಆದಷ್ಟು , ಕೆಳವರ್ಗದ ಜನರಲ್ಲಿ ಅರಿವು ಮೂಡಿಸಿ , ಅವರಿಗೆ ಶುಚಿತ್ವದ ಮಹತ್ವವನ್ನು ತಿಳಿಸಿ.

ನಮ್ಮ ಸ್ವಾಸ್ಥ್ಯವನ್ನು ನಾವು ಕಾಪಾಡಿಕೊಂಡಲ್ಲಿ, ಈ ವೈರಾಣುವಿನಿಂದ ಚೇತರಿಸಿಕೊಳ್ಳಬಹುದು. ಹೇಗೆ ನಾವು ರೋಗನಿರೋಧಕ ಶಕ್ತಿಯನ್ನು ಕ್ರಮೇಣ ಹೆಚ್ಚಿಸಬಹುದು ಎಂದು ಇಲ್ಲಿ ನೋಡೋಣ.
ಅಡುಗೆ ಮನೆಯ ಕೆಲವು ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದಲ್ಲಿ , ನಮ್ಮ ರೋಗನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ಹೆಚ್ಚಿಸಬಹುದು.

1. ಧನಿಯಾ + ಜೀರಿಗೆ + ಶುಂಠಿ+ತುಳಸಿ + ಪುದೀನ+ದೊಡ್ಡ ಪತ್ರೆ +ಅರಿಶಿನವನ್ನು ನೀರಿನಲ್ಲಿ ಕುದಿಸಿ , ದಿನಕ್ಕೆ ಎರೆಡು ಸಲ ಸೇವಿಸಬಹುದು.
2. ಅಮೃತಬಳ್ಳಿ ಜ್ವರಗಳಿಗೆ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ.
3. ಹಾಲು + ಅರಿಶಿನ + ಮೆಣಸು + ಬೆಲ್ಲ+ ಏಲಕ್ಕಿ ಯನ್ನು ಕುದಿಸಿ ಮಲಗುವ ಮುಂಚೆ ಸೇವಿಸಬೇಕು.
4. ಶೀತ , ಕೆಮ್ಮು , ಸೈನಸ್ ಸಮಸ್ಯೆ ಇದ್ದಲ್ಲಿ ಓಂ ಕಾಳನ್ನು (ಅಜ್ವಇನ್) ನೀರಿನಲ್ಲಿ ಕುದಿಸಿ ಇದರ ಹಬೆ ತೆಗೆದುಕೊಳ್ಳಬಹುದು.
5. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಸೇವಿಸಿದಲ್ಲಿ, ದೇಹದ ಅಸಿಡಿಟಿ ಹೆಚ್ಚಾಗುತ್ತದೆ. ಇದರ ಪರಿಣಾಮ, ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಇದರ ಬದಲು ಪ್ರತಿದಿನ ಮುಂಜಾನೆ , ಜೀರಿಗೆ ನೀರು, ಓಂ ಕಾಳಿನ ನೀರು ಸೇವಿಸಿದರೆ ಬಹಳ ಲಾಭದಾಯಕ.

ಇದೆಲ್ಲದರ ಜೊತೆ, ದಿನನಿತ್ಯ ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು, ಒಳ್ಳೆಯ ನಿದ್ದೆ ಮಾಡಬೇಕು, ವ್ಯಾಯಾಮ ಮಾಡಬೇಕು. ಪ್ರತಿ ದಿನ ಪ್ರಾಣಾಯಾಮ ಮಾಡಬೇಕು. ಇದು ಬಹಳ ಪರಿಣಾಮಕಾರಿ.
ಇದೆಲ್ಲ ಮಾಡಿದಲ್ಲಿ, ಖಂಡಿತವಾಗಿಯೂ ನಮ್ಮ ದೇಹದ ರೋಗನಿರೋಧಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

ಇದನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಮೇಲಿನ ಸಲಹೆಗಳ ಹೊರತಾಗಿ, ಹೋಮಿಯೋಪತಿಯಲ್ಲಿಯೂ ಅನೇಕ ಔಷಧಿಗಳಿವೆ. ಈ ಔಷಧಿಗಳಿಂದ ರೋಗಾಣುವಿನ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆಯಬಹುದು.
ವೈಯಕ್ತಿಕವಾಗಿ ನಾವೆಲ್ಲರೂ ಜಾಗೃತರಾದಲ್ಲಿ, ಈ ಸಮಸ್ಯೆ ಉಲ್ಬಣವಾಗದಂತೆ ನಿಯಂತ್ರಿಸಬಹುದು.

ಇದನ್ನೂ ಓದಿ: ಕೊರೊನಾ ವೈರಸ್: ಭಯ ಹುಟ್ಟಿಸುತ್ತಿರುವ 10 ಸುಳ್ಳುಗಳು

ಲೇಖನ: ಡಾ. ರಮ್ಯ ಎಚ್.ಪಿ, ಬೆಂಗಳೂರು.