ಜಗತ್ತನ್ನೇ ಭಯದಲ್ಲಿ ಮುಳುಗಿಸಿದ ಕೋವಿಡ್-19 ಕೊರೊನಾ ವೈರಸ್ ಸಾವಿರಾರು ಜನರ ಜೀವ ಬಲಿ ಪಡೆದಿದೆ. ವಿಶ್ವಸಂಸ್ಥೆಯು ಮಹಾ ಮಾರಿ ಕೊರೊನಾ ವೈರಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೊಷಣೆ ಮಾಡಿದೆ. ಭಾರತದಲ್ಲಿಯೂ ಕೊರೊನಾಗೆ ಮೂವರು ಮೃತಪಟ್ಟಿರುವ ಪ್ರಕರಣ ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಈಗಾಗಲೆ 77 ಸಾವಿರ ಜನ ಗುಣಮುಖರಾಗಿದ್ದಾರೆ. ಆದರೂ ವಾಟ್ಸ್ ಆ್ಯಪ್, ಫೇಸ್ ಬುಕ್ ಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಜನರು ವೈರಸ್ ಬಂದವರಿಗಿಂತ ಹೆಚ್ಚು ಭಯ ಭೀತರಾಗಿದ್ದಾರೆ. ತೋಳ ಬಂತು ತೋಳ ಎನ್ನುವ ಹಾಗೆ ಆಗಿರುವ ಕೊರೊನಾ ಕುರಿತ ಆ ಹತ್ತು ಸುಳ್ಳುಗಳ ಪಟ್ಟಿ ಇಲ್ಲಿದೆ.

ಸುಳ್ಳು ಸುದ್ದಿ-1
ಕೊರೊನಾಗೆ ಇಡೀ ಭಾರತ ಸ್ತಬ್ದವಾಗಲಿದೆ.

ಕೊರೊನಾ ವೈರಸ್ ನಿಂದಾಗಿ ಇಡೀ ಭಾರತವೇ ಸ್ತಬ್ದವಾಗಲಿದೆ (ಲಾಕ್ ಡೌನ್) ಎನ್ನುವ ಆಡಿಯೊವೊಂದು ವಾಟ್ಸ ಆ್ಯಪ್ ಗಳಲ್ಲಿ ಹರಿದಾಡುತ್ತಿದೆ. ಇದು ಜನರಲ್ಲಿ ಸಿಕ್ಕಾಪಟ್ಟೆ ಭಯ ಹುಟ್ಟಿಸುತ್ತಿದೆ. ಅಂಥ ಸ್ಥಿತಿ ಭಾರತದಲ್ಲಿ ಇಲ್ಲ. ಆಡಿಯೊ ಸುದ್ದಿ ಸುಳ್ಳು. ಯಾರೂ ಆ ಆಡಿಯೋವನ್ನು ಪಾರ್ ವರ್ಡ್ ಮಾಡಬಾರದು ಎಂದು ಭಾರತ ಸರ್ಕಾರ ಖಚಿತಪಡಿಸಿದೆ.

ಸುಳ್ಳು ಸುದ್ದಿ -2
ಕೊರೊನಾಗೆ ಬೆಳ್ಳುಳ್ಳಿ ಮದ್ದು
ಕುದಿಸಿದ ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ಕೊರೊನಾ ಸೋಂಕು ನಾಶವಾಗುತ್ತದೆ ಎನ್ನುವುದು ಸುಳ್ಳು. ಕೊರೊನಾಗೆ ಇನ್ನೂ ನಿರ್ಧಿಷ್ಟ ಔಷಧವನ್ನೇ ಕಂಡು ಹಿಡಿದಿಲ್ಲ. ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇರುವುದು ನಿಜ. ಆದರೆ, ಅದು ಕೊರೊನಾಗೆ ಔಷಧ ಎನ್ನುವುದನ್ನು ಸರ್ಕಾರದ ಯಾವುದೇ ಸಂಸ್ಥೆ ದೃಡಪಡಿಸಿಲ್ಲ.

ಸುಳ್ಳು ಸುದ್ದಿ-3
ಸೊಳ್ಳೆ ಕಡಿತದಿಂದ ಕೊರೊನಾ ಹರಡುತ್ತದೆ.
ಸೊಳ್ಳೆ ಕಡಿತದಿಂದ ಕೊರೊನಾ ಹರಡುತ್ತದೆ ಎನ್ನುವುದು ಅಪ್ಪಟ ಸುಳ್ಳು. ಕೊರೊನಾ ವೈರಸ್ ಹರಡುವುದು ಮನುಷ್ಯರಿಂದ ಮನುಷ್ಯರಿಗೆ. ಸೊಳ್ಳೆಯಿಂದ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಭಾರತ ಸರ್ಕಾರ ಆರೋಗ್ಯ ಮಂತ್ರಾಲಯ ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿ-4
ಚಿಕನ್, ಮಟನ್, ಮೊಟ್ಟೆಯಿಂದ ಕೊರೊನಾ

ಇದೊಂದು ಸುಳ್ಳು ಸುದ್ದಿಯಿಂದ ಚಿಕನ್ ವ್ಯಾಪಾರ ನೆಲಕಚ್ಚಿ ಹೋಗಿದೆ. ಫಾರ್ಮ್ ಮಾಲೀಕರು ಮಾಂಸದ ಕೋಳಿಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಅದನ್ನು ತಿಂದವರು, ಹಂಚಿದವರು ಇನ್ನೂ ಆರೋಗ್ಯವಾಗಿಯೇ ಇದ್ದಾರೆ. ಚಿಕನ್, ಮಟನ್, ಮೊಟ್ಟೆಯಿಂದಲೂ ಕೊರೊನಾ ಹರಡುತ್ತದೆ ಎನ್ನುವುದು ಸುಳ್ಳು. ಚೆನ್ನಾಗಿ ಬೇಯಿಸಿದ ಮಾಂಸಾಹಾರವನ್ನು ಸೇವಿಸಬಹುದು ಎಂದು ಭಾರತ ಸರ್ಕಾರ ಖಚಿತಪಡಿಸಿದೆ. ಅಲ್ಲದೆ, ಚೀನಾದ ಸಂಶೋಧನೆಗಳು ಸಹ ಚಿಕನ್ ನಿಂದ ಕೊರೊನಾ ಹರಡುತ್ತದೆ ಎನ್ನುವುದನ್ನು ಅಲ್ಲಗಳೆದಿವೆ.

ಇದನ್ನೂಓದಿ: ಚಿಕನ್ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ

ಸುಳ್ಳು ಸುದ್ದಿ -5
ಎಣ್ಣೆ ಹೊಡೆದರೆ ಕೊರೊನಾ ಬರಲ್ಲ!

ಮದ್ಯ ಸೇವಿಸುವವರಿಗೆ ಕೊರೊನಾ ಬರುವುದಿಲ್ಲ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಮದ್ಯ ಸೇವನೆಗೂ ಕೊರೊನಾಗೂ ಸಂಬಂಧವಿಲ್ಲ. ಅದು ಸುಳ್ಳು ಸುದ್ದಿ. ಮದ್ಯ ಸೇವಿಸುವವರಿಗೂ ಕೊರೊನಾ ವೈರಸ್ ಹರಡಬಹುದು. ಎಚ್ಚರಿಕೆಯಿಂದ ಇರಬೇಕು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿ-6
ಸಾಕು ಪ್ರಾಣಿಗಳಿಂದ ಕೊರೊನಾ ಹರಡುತ್ತದೆ

ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುತ್ತದೆ ಎನ್ನುವುದನ್ನು ಈವರೆಗಿನ ಸಂಶೋಧನೆಗಳು ದೃಢಪಡಿಸಿಲ್ಲ. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ಈ ಕುರಿತು ಅಧ್ಯಯನ ನಡೆಸುತ್ತಲೇ ಇದೆ. ಆದರೆ, ಎಲ್ಲಿಯೂ ಪ್ರಾಣಿಗಳಿಂದ ಮಾನವರಿಗೆ ಕೋವಿಡ್-19 ಕೊರೊನಾ ವೈರಸ್ ಹರಡಿದೆ ಎನ್ನುವುದು ಪತ್ತೆಯಾಗಿಲ್ಲ.

ಸುಳ್ಳು ಸುದ್ದಿ- 7
ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು.

ಮಾಸ್ಕ್ ಧರಿಸಿದರೆ ಕೊರೊನಾ ಬರುವುದಿಲ್ಲ ಎನ್ನುವ ಸುದ್ದಿಯಿಂದಾಗಿ ಎಲ್ಲೆಡೆ ಮಾಸ್ಕ್ ಗಳಿಗೆ ವ್ಯಾಪಕ ಬೇಡಿಕೆ ಬಂದಿದೆ. ಅದರಿಂದ ಮಾಸ್ಕ್ ತಯಾರಾಕರು, ವಿತರಕರು ಹಣ ಗಳಿಸುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಮೂಗಿನಿಂದ ಹೊರ ಸೂಸುವ ದ್ರವಗಳಿಂದ ಹರಡುತ್ತದೆ. ಕೈಗಳ ಮೂಲಕ ಕಣ್ಣು, ಮೂಗು, ಬಾಯಿಯಿಂದ ವೈರಸ್ ದೇಹದೊಳಗೆ ಹೋಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕಂತಿಲ್ಲ. ಸೋಂಕಿತರು, ಅವರ ಮನೆಯವರು, ಚಿಕಿತ್ಸೆ ನೀಡುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು ಎಂದು ಆರೋಗ್ಯ ಇಲಾಖೆ ಹೇಳಿದೆ. ಅದರ ಬದಲು ಪದೇ ಪದೆ ಕೈ ತೊಳೆಯುವುದು ಉತ್ತಮ.

ಸುಳ್ಳು ಸುದ್ದಿ-8
ಉಪ್ಪು, ವಿನೆಗಾರ ಕುಡಿದರೆ ವೈರಸ್ ಬರುವುದಿಲ್ಲ

ಬಿಸಿ ನೀರಿಗೆ ಉಪ್ಪು, ವಿನೆಗಾರ ಸೇರಿಸಿ ಕುಡಿದರೆ, ಬಾಯಿ ಮುಕ್ಕಳಿಸಿದರೆ ಕೊರೊನಾ ವೈರಸ್ ಬರುವುದಿಲ್ಲ ಎನ್ನುವ ಸುದ್ದಿ ಹಬ್ಬುತ್ತಿದೆ. ಈ ಪದ್ಧತಿ ಕೊರೊನಾ ವೈರಸ್ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ಇದು ಸುದ್ದಿ ಸುಳ್ಳು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿ-9
ತಂಪು ಪಾನೀಯ, ಐಸ್ ಕ್ರೀಮ್ ನಿಂದ ವೈರಸ್

ತಂಪು ಪಾನೀಯ, ಐಸ್ ಕ್ರೀಮ್ ಗಳನ್ನು ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಆದರೆ, ಐಸ್ ಕ್ರಿಮ್ ನಿಂದ ಕೊರೊನಾ ವೈರಸ್ ಹರಡುತ್ತದೆ ಎನ್ನುವುದು ಸುಳ್ಳು ಎಂದು ಭಾರತ ಸರ್ಕಾರವೇ ಹೇಳಿದೆ. ಆದರೆ, ಕೊರೊನಾ ವೈರಸ್ ತಂಪು ವಾತಾವರಣದಲ್ಲಿ ಚುರುಕಾಗುವುದರಿಂದ ತಂಪು ವಸ್ತುಗಳಿಂದ ಸ್ವಲ್ಪ ಮಟ್ಟಿಗೆ ದೂರ ಇರಬೇಕು ಎನ್ನುವುದು ಆರೋಗ್ಯ ಇಲಾಖೆ ಸಲಹೆ.

ಸುಳ್ಳು ಸುದ್ದಿ-10
ಮೀನಿಗೂ ಕೊರೊನಾ ವೈರಸ್
ಸಮುದ್ರದಲ್ಲಿರುವ ಮೀನಿಗೂ ಕೊರೊನಾ ಬಂದಿದೆ ಎಂದು ಜನರಲ್ಲಿ ಭಯ ಹಬ್ಬಿಸಲಾಗಿದೆ. ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ. ಮೀನಿಗೂ ವೈರಸ್ ಹರಡಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಅಲ್ಲದೆ, ಕೊರೊನಾ ಬಂದಿದೆ ಎಂದು ಹೇಳುತ್ತಿರುವ ಮೀನಿನ ಚಿತ್ರ 2017ರಲ್ಲಿಯೇ ಬಳಸಿರುವುದನ್ನು ದಿ ಸ್ಟೇಟ್ ನೆಟ್ವರ್ಕ್ ವೈರಲ್ ಚೆಕ್ ತಂಡ ಪತ್ತೆ ಮಾಡಿದೆ.

ಮೀನಿಗೂ ಕೊರೊನಾ: ಸುಳ್ಳು ಸುದ್ದಿಯ ಅಸಲಿ ಕತೆ ಓದಿ