ಬಿಜೆಪಿ ಶಾಸಕ ಅನಿಲ ಉಪಾಧ್ಯಾಯ ಎನ್ನುವವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಹೀಗೆ ಆದರೆ, ಸಾಮಾನ್ಯರ ಗತಿ ಏನು. ನೀವು ರಾಮರಾಜ್ಯದಲ್ಲಿ ವಾಸಿಸುತ್ತಿದ್ದೀರಿ ಎನ್ನುವ ರೀತಿಯಲ್ಲಿ ವಿಡಿಯೊವೊಂದನ್ನು ಹರಿಬಿಡಲಾಗಿದೆ. ಅದು ಎಲ್ಲೆಡೆ ವೈರಲ್ ಆಗುತ್ತಿದೆ.

ಆ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಗೆ ಹೊಡೆಯುತ್ತಿದ್ದಾರೆ. ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹೊಡೆತದ ಪ್ರಭಾವಕ್ಕೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಕೆಲಗೆ ಬಿದ್ದು ಸುಧಾರಿಸಿಕೊಳ್ಳಲು ಕಷ್ಟ ಪಡುತ್ತಾರೆ. ಪಕ್ಕದಲ್ಲಿ ಒಬ್ಬರು ಮಹಿಳೆ ಇದ್ದಾರೆ.

ವಾಸ್ತವದಲ್ಲಿ ಈ ವಿಡಿಯೊದಲ್ಲಿ ಇರುವವರು ಶಾಸಕ ಅಲ್ಲ. ಅಲ್ಲದೆ, ಅದು ಈತ್ತೀಚಿನ ವಿಡಿಯೊ ಕೂಡ ಅಲ್ಲ. ಉತ್ತರ ಪ್ರದೇಶದಲ್ಲಿ 2018ರಲ್ಲಿ ನಡೆದ ಘಟನೆಯನ್ನು ಈಗ ವೈರಲ್ ಮಾಡಲಾಗುತ್ತಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ತನಿಖೆ ನಡೆದಿದ್ದು ಹೇಗೆ?

ವೈರಲ್ ಆಗುತ್ತಿರುವ ವಿಡಿಯೊದ ಚಿತ್ರ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಕೆಲವು ವರದಿಯ ಲಿಂಕ್‌ಗಳು ದೊರೆತವು. ಅದರಲ್ಲಿ ಆ ವಿಡಿಯೊಗಳು 2018ರಲ್ಲಿಯೇ ಪೋಸ್ಟ್ ಆಗಿದ್ದವು. ಅದರಿಂದ ವಿಡಿಯೊದಲ್ಲಿರುವ ಘಟನೆ 2018 ಅಥವಾ ಇತ್ತೀಚೆಗೆ ನಡೆದ ಘಟನೆ ಅಲ್ಲ ಎನ್ನುವುದು ಖಾತ್ರಿ ಆಯಿತು.

ವಿಡಿಯೊ ಇರುವ ಸುದ್ದಿಯ ಲಿಂಕ್‌ಗಳನ್ನು ಓಪನ್ ಮಾಡಿದಾಗ ಅದು ಉತ್ತರ ಪ್ರದೇಶದ ಮೀರತ್ ಮಹಾನಗರ ಪಾಲಿಕೆಯ ಕೌನ್ಸಿಲರ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದು, ಕಾರ್ಪೊರೇಟರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ವರದಿ ಇದೆ. ಟೈಮ್ಸ್ ಆಫ್ ಇಂಡಿಯಾ, ಎನ್‌ಡಿಟಿವಿ ಸೇರಿದಂತೆ ಹಲವು ಪ್ರಸಿದ್ಧ ಸುದ್ದಿ ವಾಹಿನಿಗಳಲ್ಲಿ ಈ ಸುದ್ದಿ ಪ್ರಕಟವಾಗಿದೆ.

ಅಲ್ಲದೆ, ಕೌನ್ಸಿಲರ್ ಹೆಸರು ಮನಿಷ್ ಥ್ರಾಶೆಸ್ ಎಂದಿದೆ. ಜತೆಗೆ ಆ ವಿಡಿಯೊದಲ್ಲಿರುವ ಸಂಭಾಷಣೆಯನ್ನು ಗಮನಿಸಿದಾಗ ಅಲ್ಲಿ ಕನ್ನಡ ಭಾಷೆ ಇಲ್ಲ. ಅಲ್ಲದೆ, ಕರ್ನಾಟಕದಲ್ಲಿ ಅನಿಲ್ ಉಪಾಧ್ಯಾಯ ಎನ್ನುವ ಶಾಸಕರು ಯಾರೂ ಇಲ್ಲ.

ಈ ಘಟನೆ ಬಗ್ಗೆ ಉತ್ತರ ಪ್ರದೇಶ ಎಎನ್‌ಐ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಪೋಸ್ಟ್ ಮಾಡಲಾಗಿದೆ. ಬಿಜೆಪಿ ಕೌನ್ಸಿಲರ್ ಮನಿಷ್ ಥ್ರಾಶೆಸ್ ತನ್ನ ಹೋಟೆಲ್‌ಗೆ ಮಹಿಳಾ ಲಾಯರ್ ಜತೆ ಬಂದಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ವೇಟರ್ ಜತೆ ವಾದ ಮಾಡಿದ್ದಕ್ಕೆ ಹಲ್ಲೆ ನಡೆಸಿದ್ದಾನೆ. ಕೌನ್ಸಿಲರ್ ಅನ್ನು ಪೊಲೀಸರು ಬಂಧಿಸಿದ್ದಾರೆ. 19-10-2018 ರಂದು ಈ ಘಟನೆ ನಡೆದಿದೆ ಎಂದು ಪೋಸ್ಟ್ ಮಾಡಿದೆ.

ಫಲಿತಾಂಶ: ಸಬ್‌ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ್ದು ಬಿಜೆಪಿ ಶಾಸಕ ಅಲ್ಲ, ಬಿಜೆಪಿ ಕೌನ್ಸಿಲರ್. ಅದು ಕರ್ನಾಟಕದಲ್ಲಿ ನಡೆದ ಘಟನೆ ಅಲ್ಲ. ಉತ್ತರ ಪ್ರದೇಶದಲ್ಲಿ 2018ರಲ್ಲಿ ನಡೆದ ಘಟನೆ.