ಉತ್ತರ ಕನ್ನಡ: ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ದೋಚುವ ಅಂತಾರಾಷ್ಟ್ರೀಯ ಮಟ್ಟದ ಎಟಿಎಂ ಸ್ಕಿಮ್ಮಿಂಗ್ ಜಾಲ ಕರಾವಳಿ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವುದು ಪತ್ತೆಯಾಗಿದೆ.

ಇದು ಬಹಳ ಖತರ್ನಾಕ ಜಾಲವಾಗಿದೆ. ಜನರು ಎಟಿಎಂ ಬಳಸಿ ಹೋದ ಬಳಿಕ ಅವರದ್ದೇ ಖಾತೆಯಿಂದ ಹಣ ದೋಚುವ ಬಹಳ ಚಾಲಾಕಿ ತಂಡ ಗೋವಾದಲ್ಲಿ ಸಿಕ್ಕಿ ಬಿದ್ದಿದೆ. ಪತ್ತೆ ಮಾಡಿರುವ ಐವರು ಆರೋಪಿಗಳ ಪೈಕಿ ಮೂವರು ಬಲ್ಗೇರಿಯನ್ ಪ್ರಜೆಗಳನ್ನು ಉತ್ತರ ಗೋವಾ ಪೊಲೀಸರು ಬಂಧಿಸಿದ್ದಾರೆ. ಈ ತಂಡ ಈಗಾಗಲೇ ಸಾವಿರಾರು ಲಕ್ಷ ರೂ. ಲೂಟಿ ನಡೆಸಿದ್ದು, ಇನ್ನೂ ಎಲ್ಲೆಲ್ಲಿ ಇಂಥ ಮೋಸ ನಡೆಸಿದೆ ಎನ್ನುವ ತನಿಖೆ ನಡೆಯುತ್ತಿದೆ.

ಇದು ಯುರೋಪ್ ನಿಂದ ಕಾರ್ಯಾಚರಣೆ ನಡೆಸುತ್ತಿರುವ ಜಾಲವಾಗಿದ್ದರಿಂದ ಎಲ್ಲೆಡೆ ಎಚ್ಚರ ವಹಿಸಬೇಕಾಗಿದೆ. ಎಟಿಎಂ ಬಳಸುವ ಗ್ರಾಹಕರು ಪಾಸ್ ವರ್ಡ್ ಗಳನ್ನು ಒತ್ತುವಾಗ ಯಾರಿಗೂ ಕಾಣದಂತೆ ಕೈ ಅಡ್ಡ ಹಿಡಿದುಕೊಂಡಿರಬೇಕು ಎಂದು ಗೋವಾ ಸರ್ಕಾರ ಸೂಚನೆ ನೀಡಿದೆ.

ಪೊಲೀಸ್ ಕಾರ್ಯಾಚರಣೆ

ಮಂಗಳವಾರ ಪಣಜಿ ಮತ್ತು ಪೊರ್ವೊರಿಮ್ ಪೊಲೀಸ್ ತಂಡಗಳು, ಅನಧಿಕೃತ ಎಟಿಎಂ ಕಾರ್ಡ್ ವಹಿವಾಟಿನ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ವಾಗೇಟರ್‌ನಲ್ಲಿರುವ ರೆಸಾರ್ಟ್ ಮೇಲೆ ದಾಳಿ ನಡೆಸಿದೆ. ಒಟ್ಟು 382 ಮ್ಯಾಗ್ನೆಟಿಕ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಕಿಮ್ಮಿಂಗ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ಗೋವಾದಾದ್ಯಂತ ವಿವಿಧ ಸ್ಥಳಗಳಲ್ಲಿ ಅನಧಿಕೃತ ಎಟಿಎಂ ಕಾರ್ಡ್‌ಗಳನ್ನು ಬಳಸಿ ಹಣ ತೆಗೆಯುವಲ್ಲಿ ತೊಡಗಿರುವ ಬಲ್ಗೇರಿಯಾದ ಸ್ಟೀವನ್ ಲಾಜರೋವ್, ಹುಸೇನ್ ಮತ್ತು ರಾಡಸ್ಲೋವ್ ಅವರನ್ನು ಬಂಧಿಸಲಾಗಿದೆ. ಸ್ಥಳೀಯ ಗುಪ್ತಚರ ಮತ್ತು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ನಡೆದ ಪ್ರತ್ಯೇಕ ದಾಳಿಯಲ್ಲಿ, ಪಣಜಿ ಪೊಲೀಸರು ಪಣಜಿ ಮತ್ತು ಓಲ್ಡ್ ಗೋವಾದ ಸುತ್ತಲೂ ಚಲಿಸುತ್ತಿದ್ದ ಅಬ್ದುಲ್ ಖಾದರ್ ಮತ್ತು ಗುರ್‌ಪ್ರೀತ್ ಸಿಂಗ್ ಅವರನ್ನು ಎರಡು ಕಾರ್ಡ್ ಸ್ವೈಪಿಂಗ್ ಯಂತ್ರಗಳೊಂದಿಗೆ ಬಂಧಿಸಿದ್ದಾರೆ.

ಈ ಜಾಲದ ಹೆಚ್ಚಿನ ಸದಸ್ಯರು ಯುರೋಪಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಭಾರತದಲ್ಲಿ ತಮ್ಮ ಸಹಚರರೊಂದಿಗೆ ಡೇಟಾವನ್ನು ಹಂಚಿಕೊಳ್ಳುತ್ತಿದ್ದಾರೆ. ಕಾರ್ಡ್ ಮಾಹಿತಿಯನ್ನು ದೋಚಿದ ನಂತರ ಅವರು ಕ್ಲೋನ್ ಕಾರ್ಡ್‌ಗಳಲ್ಲಿ ವಿವರಗಳನ್ನು ದಾಖಲಿಸುತ್ತಾರೆ.

ಕ್ಲೋನ್ ಮ್ಯಾಗ್ನೆಟಿಕ್ ಸ್ಟ್ರಿಪ್ ಕಾರ್ಡ್‌ಗಳನ್ನು ಖರೀದಿ ಮತ್ತು ಎಟಿಎಂಗಳಿಂದ ಹಿಂಪಡೆಯಲು ಬಳಸಲಾಗುತ್ತಿತ್ತು. ಆರೋಪಿಗಳು ಮೋಸ ಮಾಡಿದ ಒಟ್ಟು ಮೊತ್ತವನ್ನು ತನಿಖೆ ಮಾಡಲಾಗುತ್ತಿದೆ. ಇನ್ನೊಬ್ಬ ಆರೋಪಿ, ವಿದೇಶಿ ಪ್ರಜೆ ಪರಾರಿಯಾಗಿದ್ದಾನೆ ಎಂದು ಎಂದು ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್‌ಪಿ ಶೋಭಿತ್ ಸಕ್ಸೇನಾ ಹೇಳಿದ್ದಾಗಿ ಗೋವಾದ ಹೆರಾಲ್ಡ್ ಗೋವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.